ADVERTISEMENT

ಸ್ಮಶಾನಕ್ಕೆ ಜಮೀನು ನೀಡಲು ನಿವಾಸಿಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 6:49 IST
Last Updated 2 ಫೆಬ್ರುವರಿ 2017, 6:49 IST

ರಾಮನಗರ: ಸ್ಮಶಾನಕ್ಕೆ ಜಮೀನು ಮಂಜೂರು ಮಾಡುವಂತೆ ಒತ್ತಾಯಿಸಿ ನಗರದ ಕೊತ್ತೀಪುರದ ನಿವಾಸಿಗಳು ಹೆಚ್ಚುವರಿ  ಜಿಲ್ಲಾಧಿಕಾರಿ ಡಾ.ಆರ್. ಪ್ರಶಾಂತ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

‘100 ವರ್ಷಕ್ಕಿಂತ ಹಳೆಯ ಗ್ರಾಮವಾದ ಕೊತ್ತೀಪುರದಲ್ಲಿ ನೂರಾರು ಕುಟುಂಬಗಳು ವಾಸಿಸುತ್ತಿವೆ. ಗ್ರಾಮಕ್ಕೊಂದು ಸ್ಮಶಾನ ಮಂಜೂರು ಮಾಡುವಂತೆ ಹಲವು ವರ್ಷಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹಿಂದೆ ಗ್ರಾಮದಲ್ಲಿ 70 ರಿಂದ 80 ಕುಟುಂಬಗಳು ಮಾತ್ರ ವಾಸವಾಗಿದ್ದವು. ಬಹುತೇಕ ಕುಟುಂಬದವರು  ತಮ್ಮದೇ ಜಮೀನಿನಲ್ಲಿ ಶವಸಂಸ್ಕಾರ ಮಾಡುತ್ತಿದ್ದರು. ಕಾಲಕ್ರಮೇಣ ನಗರೀಕರಣದ ಪರಿಣಾಮವಾಗಿ ಇಂದು ಬಹುತೇಕರು ಜಮೀನುಗಳನ್ನು ಮಾರಾಟ ಮಾಡಿದ್ದಾರೆ. ಈಗ ಶವಸಂಸ್ಕಾರಕ್ಕೂ ಸ್ಥಳವಿಲ್ಲದೆ ಪರಿತಪಿಸುತ್ತಿದ್ದಾರೆ’ ಎಂದರು.

‘ಜೀವನ ನಿರ್ವಹಣೆಗಾಗಿ ಬೇರೆ ಜಿಲ್ಲೆಗಳಿಂದ ನೂರಾರು ಕೂಲಿ ಕಾರ್ಮಿಕ ಕುಟುಂಬಗಳು ಇಲ್ಲಿಗೆ ಬಂದು ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿವೆ. ಈ ಕುಟುಂಬಗಳ ಸದಸ್ಯರು ಮೃತಪಟ್ಟ ಅದೆಷ್ಟೋ ಮಂದಿಯನ್ನು ರಸ್ತೆ ಪಕ್ಕದಲ್ಲಿಯೇ ಶವಸಂಸ್ಕಾರ ಮಾಡಲಾಗಿದೆ’ ಎಂದು ತಿಳಿಸಿದರು.

‘ಕೊತ್ತೀಪುರ ಗ್ರಾಮದ ಸರ್ವೆ ನಂ.77ರಲ್ಲಿ 1.38 ಎಕರೆ ಸರ್ಕಾರಿ ಖರಾಬು ಜಮೀನಿದೆ. ಕೆಲ ಪಟ್ಟಭದ್ರರು ಈ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈಗ ಅನ್ಯರಿಗೆ ಮಾರಾಟ ಮಾಡಲೂ ಯತ್ನಿಸುತ್ತಿದ್ದು, ಜಮೀನು ಭೂಮಾಫಿಯಾಕೋರರ ಪಾಲಾಗುವ ಮುಂಚೆ ಸ್ಮಶಾನಕ್ಕೆ ಮಂಜೂರು ಮಾಡಬೇಕು’ ಎಂದು ತಿಳಿಸಿದರು.

‘ಜಮೀನು ಲಭ್ಯವಿಲ್ಲ ಎಂಬ ಏಕೈಕ ಕಾರಣಕ್ಕೆ ಅದೆಷ್ಟೋ ಗ್ರಾಮಗಳಿಗೆ ಸರ್ಕಾರ ಸ್ಮಶಾನ ಮಂಜೂರು ಮಾಡಿಲ್ಲ. ಆದರೆ, ನಾವೇ ಸರ್ಕಾರಿ ಜಮೀನನ್ನು ಪತ್ತೆ ಹಚ್ಚಿ, ಮಂಜೂರು ಮಾಡಿಕೊಡುವಂತೆ ಕೋರುತ್ತಿದ್ದರೂ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ. ಇನ್ನಾದರೂ ಎಚ್ಚೆತ್ತುಕೊಂಡು ಸರ್ಕಾರಿ ಜಮೀನನ್ನು ಸ್ಮಶಾನಕ್ಕೆ ಮಂಜೂರು ಮಾಡಿಕೊಡಬೇಕು. ಇಲ್ಲದಿದ್ದಲ್ಲಿ ಗ್ರಾಮಸ್ಥರೆಲ್ಲರೂ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ’ ಎಂದು ಎಚ್ಚರಿಸಿದರು. ಗ್ರಾಮಸ್ಥರಾದ ನಾರಾಯಣಪ್ಪ, ದೊಡ್ಡಣ್ಣ, ವೆಂಕಟೇಶ್, ತಮ್ಮಯ್ಯ, ಪುಟ್ಟರಾಮಯ್ಯ, ನಿಂಗಪ್ಪ, ಹನುಮಂತ, ಜಯರಾಮಯ್ಯ, ಕುಮಾರ್, ವಿಜಯ್‍್್ ಕುಮಾರ್‌, ಗಂಗಪ್ಪ, ಪಾಪಣ್ಣ, ಈರಣ್ಣ, ರವಿ, ರಾಮಣ್ಣ, ಮರಿಸಿದ್ದಯ್ಯ, ಶಶಿಕುಮಾರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.