ADVERTISEMENT

‘ಮೇಕೆದಾಟು ಅಣೆಕಟ್ಟು ಯೋಜನೆ ಸಮಂಜಸ’

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2015, 9:26 IST
Last Updated 30 ಮಾರ್ಚ್ 2015, 9:26 IST
ಕಾವೇರಿ ನದಿಗೆ ಮೇಕೆದಾಟು ಬಳಿ ಅಣೆಕಟ್ಟು ಕಟ್ಟಲು ಮುಂದಾಗಿರುವ ಸ್ಥಳವನ್ನು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ವೀಕ್ಷಿಸಿದರು
ಕಾವೇರಿ ನದಿಗೆ ಮೇಕೆದಾಟು ಬಳಿ ಅಣೆಕಟ್ಟು ಕಟ್ಟಲು ಮುಂದಾಗಿರುವ ಸ್ಥಳವನ್ನು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ವೀಕ್ಷಿಸಿದರು   

ಕನಕಪುರ: ‘ಕಾವೇರಿ ನದಿಯಲ್ಲಿ ಕುಡಿಯುವ ನೀರಿಗಾಗಿ ರಾಜ್ಯ ಸರ್ಕಾರ ನಿರ್ಮಿಸಲು ಮುಂದಾಗಿರುವ ಮೇಕೆದಾಟು ಅಣೆಕಟ್ಟು ಯೋಜನೆ ಸಮಂಜಸವಾಗಿದೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ತಿಳಿಸಿದರು.

ತಾಲ್ಲೂಕಿನ ಸಂಗಮ್‌–ಮೇಕೆದಾಟು ಬಳಿ ರಾಜ್ಯ ಸರ್ಕಾರದ ಉದ್ದೇಶಿತ ಕುಡಿಯುವ ನೀರಿನ ಅಣೆಕಟ್ಟು ಯೋಜನೆಯ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಅಣೆಕಟ್ಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಸರ್ಕಾರದ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿದರು.

  ಏಪ್ರಿಲ್‌ 20ರಿಂದ ಸಂಸತ್‌ನಲ್ಲಿ ಕಲಾಪ ಶುರುವಾಗಲಿದ್ದು, ಅಲ್ಲಿ ಮೇಕೆದಾಟು ಅಣೆಕಟ್ಟು ಬಗ್ಗೆ ಮಾತನಾಡಲು ಜಾಗದ ಬಗ್ಗೆ ಮೊದಲು ತಿಳಿದುಕೊಂಡಿರಬೇಕು. ಇಲ್ಲಿನ ವಸ್ತುಸ್ಥಿತಿ ತಿಳಿದಿದ್ದರೆ ಸಂಸತ್‌ನಲ್ಲಿ ಮಾತನಾಡಲು ಆತ್ಮಸ್ಥೈರ್ಯ ಬರುತ್ತದೆ. ನಮ್ಮ ರಾಜ್ಯದಿಂದ ಬಿ.ಜೆ.ಪಿ.ಯವರು ಪಕ್ಷದ ನಿರ್ದೇಶನದ ಮೇರೆಗೆ ಮಾತನಾಡಬೇಕು. ರಾಜ್ಯದ ಪರವಾಗಿ ನಾನು ಯೋಜನೆ ಬಗ್ಗೆ ಸದನಕ್ಕೆ ತಿಳಿಸಿಕೊಡಬೇಕಿರುವುದರಿಂದ ಜಾಗವನ್ನು ನೋಡಲು ಬಂದಿರುವುದಾಗಿ ತಿಳಿಸಿದರು. 

ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಈ ಭಾಗದಲ್ಲಿ ಪರಿಹರಿಸಲು ರಾಜ್ಯ ಸರ್ಕಾರದ ಮುಂದೆ ಇರುವುದು ಮೇಕೆದಾಟು ಅಣೆಕಟ್ಟೆ ಯೋಜನೆ. ಅದಕ್ಕಾಗಿ ಯೋಜನೆಯ ವರದಿ ಸಿದ್ಧಪಡಿಸಲು ರಾಜ್ಯ ಸರ್ಕಾರವು ₹ 25 ಕೋಟಿ ವೆಚ್ಚದಲ್ಲಿ ವಿದೇಶಿ ಕಂಪೆನಿಯೊಂದಕ್ಕೆ ಟೆಂಡರ್‌ ನೀಡಿರುವುದಕ್ಕೆ ತಮಿಳುನಾಡು ಸರ್ಕಾರ ಮತ್ತು ಅಲ್ಲಿನ ರಾಜಕೀಯ ಪಕ್ಷಗಳು ಆಕ್ಷೇಪಣೆ ಮಾಡಿ ಬಂದ್‌ ನಡೆಸಿರುವುದು ಸರಿಯಲ್ಲ ಎಂದರು.

ತಮಿಳುನಾಡಿನಲ್ಲಿ ಪ್ರದೇಶಿಕ ಪಕ್ಷಗಳು ನೆಲ–ಜಲ ವಿಚಾರದಲ್ಲಿ ಒಂದಾಗಿ ಹೋರಾಟ ನಡೆಸುತ್ತವೆ. ರಾಜಕೀಯ ಒಗ್ಗಟ್ಟು ಇರುವುದರಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ತಮ್ಮ ಕಾರ್ಯ ಸಾಧಿಸುತ್ತವೆ. ನಮ್ಮಲ್ಲಿ ಮಾತ್ರ ಅಂತಹ ಒಗ್ಗಟ್ಟಿಲ್ಲ. ಪ್ರಾದೇಶಿಕ ಪಕ್ಷಗಳಿಗೆ ಶಕ್ತಿಯಿಲ್ಲ. ಹೋರಾಟಕ್ಕೆ ಎಲ್ಲಾ ಪಕ್ಷಗಳು ಒಟ್ಟಾಗಿ ಒಗ್ಗೂಡದಿರುವುದು ನಮ್ಮ ರಾಜ್ಯದ ಹಿನ್ನಡೆಗೆ ಕಾರಣವೆಂದು ಬೇಸರ ವ್ಯಕ್ತಪಡಿಸಿದರು.

ಜೆ.ಡಿ.ಎಸ್‌.ಹಿರಿಯ ಮುಖಂಡ ಬಿ.ಡಿ.ಸಿ.ಸಿ.ಬ್ಯಾಂಕ್‌ ಮಾಜಿ ಅಧ್ಯಕ್ಷ ನಾರಾಯಣಗೌಡ, ತಾಲ್ಲೂಕು ಅಧ್ಯಕ್ಷ ಸಿದ್ದಮರೀಗೌಡ, ಮುಖಂಡ ಚಿನ್ನಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.