ADVERTISEMENT

ಅಂತರಂಗದ ಆತ್ಮಾವಲೋಕನ ಅಗತ್ಯ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 4:00 IST
Last Updated 17 ಏಪ್ರಿಲ್ 2017, 4:00 IST
ಹೊಳೆಹೊನ್ನೂರು: ‘ಸಮಾಜದ ಅಭಿವೃದ್ಧಿಗೆ  ಅಂತರಂಗದ ಆತ್ಮಾವಲೋಕನ ಅಗತ್ಯ’ ಎಂದು ಸಾಣೇಹಳ್ಳಿಯ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಯಡೇಹಳ್ಳಿಯಲ್ಲಿ  ತರಳಬಾಳು ಯುವ ವೇದಿಕೆ  ಈಚೆಗೆ ಹಮ್ಮಿಕೊಂಡಿದ್ದ ಮೂರು ದಿನಗಳ ನಾಟಕೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. 
 
‘ದೃಶ್ಯ ಮಾಧ್ಯಮಗಳಿಂದ ಮನಸು ವಿಕಾರಗೊಳ್ಳುತ್ತಿದೆ.  ಸಾಂಸ್ಕೃತಿಕ, ನೈತಿಕ ಶ್ರೀಮಂತಿಕೆ ಜಾಗೃತವಾಗಬೇಕು. ಶರಣರ ವಿಚಾರಗಳನ್ನು ಜನತೆಗೆ ತಲುಪಿಸುವಲ್ಲಿ ರಂಗಭೂಮಿ ಸುಲಭದ ಮಾರ್ಗ’ ಎಂದು ತಿಳಿಸಿದರು.
 
‘ನಾಟಕಗಳು ಸಮಾಜದ ಅನಾಚಾರಗಳ ವಿರುದ್ಧ ಮಾತನಾಡುತ್ತವೆ. 1987ರಲ್ಲಿ ಅಸ್ತಿತ್ವಕ್ಕೆ ಬಂದ ಶಿವಕುಮಾರ ಕಲಾ ಸಂಘದ ಆಶ್ರಯದಲ್ಲಿ 20 ವರ್ಷಗಳಿಂದ 60 ಬಗೆಯ ಸದಭಿರುಚಿಯ 3,000 ಕ್ಕೂ ಹೆಚ್ಚು  ಪ್ರದರ್ಶನಗಳನ್ನು ನೀಡಲಾಗಿದೆ’ ಎಂದು ಹೇಳಿದರು. 
 
ಅಂಕಣಕಾರ ಬಿ.ಚಂದ್ರೇಗೌಡ ಮಾತನಾಡಿ, ‘ದೇಶದ ಯಂತ್ರಕ್ಕೆ ಅನ್ನ ನೀಡುವ ರೈತನನ್ನು ಕಡೆಗಣಿಸುವುದು ಸರಿಯಲ್ಲ. ಹಳ್ಳಿಗಳು ಮುಂದುವರಿದರೆ ದೇಶ ಅಭಿವೃದ್ಧಿಯಾಗುತ್ತದೆ’ ಎಂದು ಹೇಳಿದರು.
 
‘ಸಮಾಜಕ್ಕೆ ಸತ್ಪ್ರಜೆಗಳನ್ನು ನೀಡುವ ಕೆಲಸ ಕುಟುಂಬಗಳಿಂದ ಆಗಬೇಕಿದೆ. ಸಮಾಜದಲ್ಲಿ ರೈತನಿಗೆ ಗೌರವ ಲಭಿಸಬೇಕು. ಮಾಧ್ಯಮಗಳು ರೈತ ಆತ್ಮಹತ್ಯೆಯ ಕಾರಣಗಳನ್ನು ವಿಶ್ಲೇಷಿಸುವ ವರದಿಗಳನ್ನು ಪ್ರಸಾರ ಮಾಡಬೇಕು’ ಎಂದರು.
 
ತರಳಬಾಳು ಯುವ ವೇದಿಕೆ ಅಧ್ಯಕ್ಷ ಎಚ್.ಬಿ ಕಿರಣ್, ಜಿಲ್ಲಾ ಪಂಚಾಯ್ಇ ಸದಸ್ಯ ವೀರಭದ್ರಪ್ಪ ಪೂಜಾರ್, ಎಪಿಎಂಸಿ ಸದಸ್ಯ ಎಂ.ಎಸ್ ಚಂದ್ರಶೇಖರ್, ಡಿ.ಶಂಕರಮೂರ್ತಿ, ಆರ್.ದಿನೇಶ್, ಸಿ.ಮಲ್ಲೇಶಪ್ಪ, ನಂದ್ಯಪ್ಪ, ಫಾಲಕ್ಷಪ್ಪ, ಶಿವಕುಮಾರ್, ಪತ್ರೇಶಣ್ಣ, ವಿಶ್ವನಾಥ್, ತೀರ್ಥಯ್ಯ, ಜಿ.ಎಂ ಶಂಕ್ರಪ್ಪ, ಶೇಖರಪ್ಪ, ವೀರಭದ್ರಪ್ಪ  ಉಪಸ್ಥಿತರಿದ್ದರು.
 
ಒಕ್ಕಲುತನ ಜೀವನದ ಭಾಗವಾಗಲಿ: ಮಲ್ಲಣ್ಣ
‘ಒಕ್ಕಲುತನ ಜೀವನದ ಉದ್ಯೋಗವಾಗದೇ ಭಾಗವಾಗಬೇಕು. ಕೋಟಿ ವಿದ್ಯೆಗಳಲ್ಲಿ ಕೃಷಿ ಪಾಂಡಿತ್ಯವೇ ಶ್ರೇಷ್ಠ’ ಎಂದು ರೈತ ವಿಜ್ಞಾನಿ ಹುನಗುಂದದ ಡಾ.ಮಲ್ಲಣ್ಣ ಶಂಕರಪ್ಪ ನಾಗರಾಳ್ ಹೇಳಿದರು.
 
ನಾಟಕೋತ್ಸವದಲ್ಲಿ ‘ರೈತ - ಜೀವ ಜಲ ನಿರ್ವಹಣೆ’ ಕುರಿತು ಉಪನ್ಯಾಸ ನೀಡಿದರು.‘ಯುವಜನತೆ  ನೌಕರಿಗಳನ್ನು ನೆಚ್ಚಿಕೊಂಡು ಕೂರುವ ಬದಲು ಕೃಷಿಯಲ್ಲಿ ತೊಡಗಬೇಕು. ಮಣ್ಣು ಚಿಂತಾಮಣಿ ಒಂದು ಇಂಚು ಮಣ್ಣು ಸೃಷ್ಟಿಯಾಗಲು ಸಾವಿರಾರು ವರ್ಷಗಳು ಬೇಕು.
 
ಹೊಲದಲ್ಲಿ ಗರಿಕೆ ಸೇರಿದಂತೆ ತ್ಯಾಜ್ಯ ಗಿಡಗಳು ಬೆಳೆಯದಂತೆ ನೋಡಿಕೊಳ್ಳಬೇಕು. ಅಶ್ವಿನಿಯಿಂದ ಆರಂಭವಾಗಿ ರೇವತಿವರೆಗೆ 27 ಮಳೆಗಳಲ್ಲಿ ಕನಿಷ್ಠ  12 ಮಳೆಗಳು ರೈತನ ಕೈಹಿಡಿಯದಿದ್ದರೆ ಜಲಕ್ಷಾಮ ಉಂಟಾಗುತ್ತದೆ’ ಎಂದು ಮಾಹಿತಿ ನೀಡಿದರು. 
 
‘ನಿರಂತರ ನೀರಿನ ಅರಿವು ಉತ್ತಮ ಫಸಲಿನ ಗುಟ್ಟು ಭೂಮಿಯಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳಲು ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳಬೇಕು. ರೈತನಿಗೆ ಹಿನ್ನಡೆಯಾದರೆ ದೇಶದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ’ ಎಂದರು.
 
‘ಮಕ್ಕಳಿಗೆ ಸಂಸ್ಕಾರ ಕಲಿಸಿ ಗುರುಹಿರಿಯರಿಗೆ ಗೌರವ ನೀಡುವುದನ್ನು ಕಲಿಸಬೇಕು. ಮಹಿಳೆಯರು ಹೊಲಗದ್ದೆಗಳಲ್ಲಿ ಕೆಲಸ ಮಾಡಿದರೆ ವ್ಯಾಯಾಮವಾಗುತ್ತದೆ’ ಎಂದರು.
ರೈತ ಸಂಘದ ಕಾರ್ಯಧ್ಯಕ್ಷ ಎಚ್.ಆರ್ ಬಸವರಾಜಪ್ಪ ಮಾತನಾಡಿ, ‘ಬಿದ್ದ ಮಳೆ ನೀರು ನದಿಗಳಲ್ಲಿ ಸಮುದ್ರ ಸೇರದೇ  ಭೂಮಿಯಲ್ಲಿ ಇಂಗಬೇಕು.
 
ಜಲಾಶಯದಲ್ಲಿ ನೀರಿನ ಲಭ್ಯತೆ ಕಡಿಮೆ ಇರುವುದರಿಂದ ಈ ಭಾರಿ ತೋಟಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಕೊಳವೆಬಾವಿಗಳಲ್ಲಿ ನೀರು ಕ್ಷೀಣಿಸುತ್ತಿದೆ. ಬೇರೆ ದಾರಿ ಕಾಣದೆ ರೈತರು ಟ್ಯಾಂಕರ್ ನೀರಿನ ಮೊರೆ ಹೋಗುತ್ತಿದ್ದಾರೆ. ಪ್ರಾಕೃತಿಕ ಸಂಪತ್ತನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರ  ಹೊಣೆ’ ಎಂದರು.
ವೀರಶೈವ ಸಮಾಜದ ಅಧ್ಯಕ್ಷ ಕೆ.ಸಿ ವೀರಭದ್ರೇಗೌಡ, ಸಾದು ಸಮಾಜದ ಅಧ್ಯಕ್ಷ ಎಚ್. ಬಸಪ್ಪ, ಡಿ.ಶಂಕರಮೂರ್ತಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.