ADVERTISEMENT

ಅಯಾತ್‌ ಕೊಲೆ: 11ಆರೋಪಿಗಳ ಬಂಧನ

ಅಣ್ಣಾ ನಗರ ಬಡಾವಣೆಯ ನಡು ರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೃತ್ಯ ಎಸಗಿದ್ದ ಗುಂಪು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2017, 9:33 IST
Last Updated 12 ಫೆಬ್ರುವರಿ 2017, 9:33 IST
ಶಿವಮೊಗ್ಗ ದೊಡ್ಡಪೇಟೆ ಪೊಲೀಸರು ಬಂಧಿಸಿದ ಅಯಾತ್‌ ಖಾನ್ (ಬಚ್ಚಾ) ಕೊಲೆ ಆರೋಪಿಗಳು (ಕುಳಿತವರು).
ಶಿವಮೊಗ್ಗ ದೊಡ್ಡಪೇಟೆ ಪೊಲೀಸರು ಬಂಧಿಸಿದ ಅಯಾತ್‌ ಖಾನ್ (ಬಚ್ಚಾ) ಕೊಲೆ ಆರೋಪಿಗಳು (ಕುಳಿತವರು).   

ಶಿವಮೊಗ್ಗ: ಅಣ್ಣಾನಗರ ಬಡಾವಣೆಯ 4ನೇ ತಿರುವಿನಲ್ಲಿ ಮೂರು ದಿನಗಳ ಹಿಂದೆ ನಡೆದಿದ್ದ ರೌಡಿ ಅಯಾತ್ ಖಾನ್ (ಬಚ್ಚಾ) ಕೊಲೆ ಪ್ರಕರಣದ 11 ಆರೋಪಿಗಳನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಟಿಪ್ಪು ನಗರದ ಅಟೊ ಚಾಲಕ ಮೋಟು ಖುರ್ರಂ (30), ದಿನಸಿ ಅಂಗಡಿ ಮಾಲೀಕ ಕೀಲಿ ಇಮ್ರಾನ್ (30), ಇಲಿಯಾಸ್ ನಗರದ ಅರ್ಬಾಜ್ (19), ಮಿಳಘಟ್ಟದ ಶಾರುಖ್‌ ಖಾನ್ (19), ಶಾದಾಬ್ (19), ಅಸಾದುಲ್ಲಾ ಖಾನ್ (19), ಅಸದುಲ್ಲಾ ಖಾನ್, ಟ್ಯಾಂಕ್‌ ಮೊಹಲ್ಲಾದ ಅಲ್ಯಾಜ್ ಅಶು (19), ಮಹಮದ್ ಸುಹೇಲ್ (19), ಬಾಪೂಜಿ ನಗರದ ಎಂ.ಡಿ. ಜೈದಾನ್ (19) ಮತ್ತು ಅಣ್ಣಾನಗರದ ಇರ್ಫಾನ್ (27) ಬಂಧಿತ ಆರೋಪಿಗಳು.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್‌ ಅಶೋಕ್‌ ಖರೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಆರೋಪಿಗಳ ಪತ್ತೆಗೆ ದೊಡ್ಡಪೇಟೆ ಸಿಪಿಐ ಕೆ.ಟಿ. ಗುರುರಾಜ್ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಪಿಎಸ್‌ಐ ಅಭಯ್ ಪ್ರಕಾಶ್ ಸೋಮನಾಳ್, ಅನಿತಾ ಕುಮಾರಿ, ಸಿಬ್ಬಂದಿ ಜಯಶೀಲ, ಶೇಖರ್, ಮಂಜುನಾಥ್, ಕಿರಣ್‌ಮೋರೆ, ಚಂದ್ರ ಶೇಖರ್‌, ವಿಜಯ, ಪ್ರಸನ್ನ, ಫಾರೂಕ್, ಉಮೇಶ್, ಪ್ರದೀಪ್, ತಿಪ್ಪಣ್ಣ ತಂಡದಲ್ಲಿದ್ದರು. ಕೊಲೆ ನಡೆದ ತಕ್ಷಣವೇ ಪ್ರಮುಖ ಆರೋಪಿ  ಖುರ್ರಂ (30) ನನ್ನು ಬಂಧಿಸಲಾಗಿತ್ತು. ಉಳಿದವರು ತಲೆಮರೆಸಿಕೊಂಡಿದ್ದರು ಎಂದರು.

ಕೊಲೆಯಾದ ಅಯಾತ್‌ 19 ವರ್ಷಗಳ ಹಿಂದೆ ಇದೇ ರೀತಿ ಹತ್ಯೆಯಾಗಿದ್ದ ನಸ್‍ರು ಅವರ ಪುತ್ರ. ಫೆ. 8ರಂದು ಸಂಜೆ ಆಯನೂರು ರಸ್ತೆ ಮೂಲಕ ಅಣ್ಣಾ ನಗರದ ಕಡೆ ಬರುವಾಗ ಆರೋಪಿಗಳು ನಡು ರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ದಾಳಿ ನಡೆಸಿ  ಹತ್ಯೆ ಮಾಡಿದ್ದರು.

ಬಂಧಿತರಾದ ಕೀಲಿ ಇಮ್ರಾನ್, ಮೋಟು ಖುರ್ರಂ ಹಾಗೂ ಬಚ್ಚಾ ಕುಟುಂಬದ  ಸದಸ್ಯರ ನಡುವೆ ಕೆಲವು ದಿನಗಳ ಹಿಂದೆ ಗಲಾಟೆ ನಡೆದಿತ್ತು. ಈ ಕುರಿತು ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಪೊಲೀಸರು ಬಚ್ಚಾ ಹಾಗೂ ಕೀಲಿ ಇಮ್ರಾನ್, ಮೋಟು ಖುರ್ರಂ ಹಾಗೂ ಅವರ ಸಹಚರರನ್ನು ಬಂಧಿಸಿ ಕಾರಾಗೃಹಕ್ಕೆ ಕಳುಹಿಸಿದ್ದರು. ಈಚೆಗಷ್ಟೆ ಬಚ್ಚಾ, ಕೀಲಿ ಇಮ್ರಾನ್, ಮೋಟು ಖುರ್ರಂ ಜಾಮೀನು ಪಡೆದು ಹೊರ ಹೊರಬಂದಿದ್ದರು.

ನಂತರ ಅಯಾತ್‌ ಹತ್ಯೆಗೆ ಸಂಚು ರೂಪಿಸಿ, ಸಂಘಟಿತವಾಗಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ನಡೆಸಿದ್ದರು. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಎಸ್‌ಪಿ ವಿನ್ಸೆಂಟ್ ಶಾಂತಕುಮಾರ್, ಡಿವೈಎಸ್‌ಪಿ ಮಂಜುನಾಥ ಶೆಟ್ಟಿ ಉಪಸ್ಥಿತರಿದ್ದರು.

ಅಪ್ಪನ ರೀತಿಯೇ ಮಗನ ಕೊಲೆ

ಕೊಲೆಯಾದ  ರೌಡಿ ಅಯಾತ್ ತಂದೆ ನಸ್ರು ರೀತಿಯೇ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ. 1998ರಲ್ಲಿ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೈಪಾಸ್ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಡಿ ಬಷೀರ್, ಖಲೀಂ ಅಲಿಯಾಸ್ ಸ್ಯಾಂಡಲ್ ಖಲೀಂ, ನ್ಯಾಮತ್, ಅಮಾನ್ ಹಾಗೂ ಇತರೆ 22 ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಅಯಾತ್‌ ಹಾಗೂ ನಸ್ರು ಮೊದಲ ಹೆಂಡತಿ ಮಗ ಅಜರ್, ಅಕ್ಕನ ಮಗ ಮೋಹಿನ್ ಸೇರಿಕೊಂಡು 2016ರ ಅ. 14ರಂದು ದಾಡಿ ಬಷೀರ್‌ಗೆ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದರು. ಈ ಸಂಬಂಧ ಪೊಲೀಸರು 21 ಆರೋಪಿಗಳನ್ನು ಬಂಧಿಸಿದ್ದರು. ಸುಮಾರು 20 ದಿನಗಳ ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದು ಕಾರಾಗೃಹದಿಂದ ಹೊರಬಂದಿದ್ದ.

ADVERTISEMENT

ಆರೋಪಿ ಇಮ್ರಾನ್

ಅಯಾತ್‌ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ‘ಕೀಲಿ’ ಇಮ್ರಾನ್ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಒಟ್ಟು 14 ಪ್ರಕರಣ ದಾಖಲಾಗಿವೆ. 2016ರಲ್ಲಿ  ಗೂಂಡಾ ಕಾಯ್ದೆ ಅಡಿ ಬಂಧಿಸಲಾಗಿತ್ತು. ನಂತರ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದ.

ರೌಡಿಗಳಿಗೆ ಭಯವಿಲ್ಲ: ಆಯನೂರು ಆತಂಕ

ನಗರದಲ್ಲಿ ರೌಡಿಗಳಿಗೆ ಭಯ ಇಲ್ಲದಂತೆ ಆಗಿದೆ. ಪೊಲೀಸ್‌ ಠಾಣೆಗಳು ತಮ್ಮ ವ್ಯಾಪ್ತಿಯ ಅಪರಾಧಿಗಳ ಮೇಲೆ ನಿಯಂತ್ರಣ ಸಾಧಿಸುವಲ್ಲಿ ವಿಫಲವಾಗಿವೆ. ಅಂಥವರಿಗೆ ಕೆಲ ರಾಜಕಾರಣಿಗಳ ಅಭಯಹಸ್ತವಿದೆ ಎಂದು ರಾಜ್ಯ ಸಭಾ ಮಾಜಿ ಸದಸ್ಯ ಆಯನೂರು ಮಂಜುನಾಥ್‌ ಆರೋಪಿಸಿದರು.

ಪುಡಿ ರೌಡಿಗಳ ನಿಯಂತ್ರಣ ಮಾಡುವಲ್ಲಿ ಶಿವಮೊಗ್ಗ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಒಂದು ಕಾಲೇಜಿನಲ್ಲಿ ವಿವಾದ ಸೃಷ್ಟಿಯಾದರೆ ದುಬೈನಿಂದ ವಿದ್ಯಾರ್ಥಿಗಳಿಗೆ ಬೆದರಿಕೆ ಕರೆ ಬರುತ್ತವೆ ಎಂದರೆ ಭವಿಷ್ಯದ ಪರಿಸ್ಥಿತಿ ಹೇಗಿರುತ್ತದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

ವಸ್ತ್ರಸಂಹಿತೆ ಆಯಾ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಬಿಟ್ಟ ವಿಚಾರ. ಸಹ್ಯಾದ್ರಿ ಕಾಲೇಜು ಆಡಳಿತ ಈ ಪ್ರಕರಣ ನಿಭಾಯಿಸುವಲ್ಲಿ ವಿಫಲವಾಗಿದೆ. ಜನಪ್ರತಿನಿಧಿಯೊಬ್ಬರು ಈ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಕುಲಪತಿಗಳಿಗೇ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.

ಶಿವಮೊಗ್ಗದಲ್ಲಿ ರೌಡಿಸಂ ಹೆಚ್ಚುತ್ತಿದೆ. ಹೊರಗಿನ ರೌಡಿಗಳು ಹೆಚ್ಚಾಗುತ್ತಿದ್ದಾರೆ. ಅಕ್ರಮ ಶಸ್ತ್ರಾಸ್ತ್ರಗಳ ಸಂಗ್ರಹವಾಗುತ್ತಿದೆ. ಪಿಸ್ತೂಲು, ಗುಂಡುಗಳು ಸುಲಭವಾಗಿ ಸಿಗುತ್ತಿವೆ. ಪೊಲೀಸರು ದಕ್ಷವಾಗಿ ಕಾರ್ಯನಿರ್ವಹಿಸಿದರೂ ಆತಂಕ ದೂರವಾಗಿಲ್ಲ ಎಂದರು. 

ಮರಳು ಮಾಫಿಯಾ ಸೇರಿದಂತೆ ಎಲ್ಲ ರೀತಿಯ ಮಾಫಿಯಾಗಳು ಇಲ್ಲಿವೆ. ಆ ದಂಧೆಯಿಂದ ಬಂದ ಹಣದಲ್ಲಿ ಕಾನೂನುಬಾಹಿರ ಕೆಲಸ ಮಾಡುತ್ತಿದ್ದಾರೆ. ಬೈಕ್‌ ವೇಗ ನಿಯಂತ್ರಿಸುತ್ತಿಲ್ಲ. ವಾಹನ ತಪಾಸಣೆ ಮಾಡುತ್ತಿಲ್ಲ. ಪೊಲೀಸರು ಅಪರಾಧಿ ಸ್ನೇಹಿ ಆಗುವ ಬದಲು, ಜನ ಸ್ನೇಹಿ ಆಗಬೇಕು ಎಂದು ಕಿವಿಮಾತು ಹೇಳಿದರು.

ನಗರದಲ್ಲಿ ಕೋಮುಸೌಹಾರ್ದದ ಹೆಸರಲ್ಲಿ ಕೆಲವರು ಒಂದು ಧರ್ಮದ ಜನರ ಪರ ವಕಾಲತ್ತು ವಹಿಸುತ್ತಿದ್ದಾರೆ. ಎಲ್ಲರನ್ನೂ ಒಳಗೊಂಡು ಸೌಹಾರ್ದ ವಾತಾವರಣ ಸೃಷ್ಟಿಸಬೇಕು ಎಂದರು.

ಶಿವಮೊಗ್ಗದ ಶಾಸಕರು ಎಲ್ಲ ಸಮುದಾಯದ ಶಾಸಕರು. ಇಡೀ ನಗರ ನಮ್ಮದು ಎಂದು ಭಾವಿಸಿ ಕಾರ್ಯನಿರ್ವಹಿಸಬೇಕು. ಒಂದು ಕೋಮಿನ ಪರವಾಗಿ ಇರುವ ವೋಟ್‌ ಬ್ಯಾಂಕ್ ರಾಜಕಾರಣ ಸಲ್ಲದು ಎಂದರು.  ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎಸ್‌.ರುದ್ರೇಗೌಡ, ಮುಖಂಡರಾದ ಕೆ.ವಿ.ಅಣ್ಣಪ್ಪ, ಅನಿತಾ ರವಿಶಂಕರ್‌  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.