ADVERTISEMENT

ಆರ್‌ಟಿಸಿ ದಾಖಲೆ ಪಡೆಯಲು ರೈತರ ಪರದಾಟ

ಶಿವಾನಂದ ಕರ್ಕಿ
Published 18 ನವೆಂಬರ್ 2017, 9:14 IST
Last Updated 18 ನವೆಂಬರ್ 2017, 9:14 IST

ತೀರ್ಥಹಳ್ಳಿ: ರೈತರು ಪಹಣೆ (ಆರ್‌ಟಿಸಿ) ಪಡೆಯಲು ನಾಡ ಕಚೇರಿ, ಬಾಪೂಜಿ ಸೇವಾ ಕೇಂದ್ರ, ತಾಲ್ಲೂಕು ಕಚೇರಿಗೆ ಅಲೆದಾಟ ನಡೆಸಬೇಕಾದ ಶಿಕ್ಷೆಗೆ ಒಳಗಾಗಿದ್ದಾರೆ. ಮನೆ ಬಾಗಿಲಿಗೇ ದಾಖಲೆ ವಿತರಣೆ ಮಾಡುತ್ತೇವೆ ಎಂಬ ಸರ್ಕಾರದ ಘೋಷಣೆ ಹಲವು ದೋಷಗಳಿಗೆ ಒಳಗಾಗಿದ್ದು ಸಮರ್ಪಕ ನಿರ್ವಹಣೆ ಕೊರತೆಯಿಂದಾಗಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ತವರು ಜಿಲ್ಲೆಯಲ್ಲಿಯೇ ಮುಗ್ಗರಿಸಿದೆ.

ಕಳೆದ ಮೂರ್ನಾಲ್ಕು ತಿಂಗಳಿನಿಂದ ರೈತರು ಆರ್‌ಟಿಸಿ ಪಡೆಯಲು ಸಂಬಂಧಿಸಿದ ಕಚೇರಿಗಳಿಗೆ ಅಲೆದಾಟ ನಡೆಸಬೇಕಾದ ಸಂದರ್ಭ ಎದುರಾಗಿದೆ. ಕಂಪ್ಯೂಟರ್‌ ಸರಿ ಇಲ್ಲ. ಪೇಪರ್‌ ಇಲ್ಲ. ಪ್ರಿಂಟರ್‌ ಹಾಳಾಗಿದೆ. ಸರ್ವರ್‌ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಸಿದ್ದ ಉತ್ತರವನ್ನು ಕೇಳಬೇಕಾಗಿದೆ.

ಆಧುನೀಕರಣಗೊಂಡ ಆಡಳಿತದಲ್ಲಿ ಆರ್‌ಟಿಸಿ ದಾಖಲೆ ಪಡೆಯಲು ರೈತರು ಹೆಣಗಾಡಬೇಕಾಗಿದೆ ಎಂಬ ಆಕ್ರೋಶವನ್ನು ರೈತರು ಹೊರಹಾಕುವಂತಾಗಿದೆ. 100 ಸೇವೆಗಳ ಘೋಷಣೆ ಅಡಿಯಲ್ಲಿ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಆರಂಭಗೊಂಡ ಬಾಪೂಜಿ ಸೇವಾ ಕೇಂದ್ರದಲ್ಲಿ ಸೇವೆ ಸ್ಥಗಿತಗೊಂಡಿದ್ದು ಅಲ್ಲೂ ಕೂಡ ಆರ್‌ಟಿಸಿ ದಾಖಲೆ ಲಭ್ಯವಾಗುತ್ತಿಲ್ಲ ಎಂಬುದು ರೈತರ ದೂರಾಗಿದೆ.

ADVERTISEMENT

ತಾಲ್ಲೂಕು ನಾಡ ಕಚೇರಿ, ಬಾಪೂಜಿ ಸೇವಾ ಕೇಂದ್ರ ಕಂದಾಯ ಇಲಾಖೆಗೆ ಸಂಬಂಧಿಸಿದ ದಾಖಲೆ ವಿತರಣೆಯಲ್ಲಿ ಬಹಳ ಗೊಂದಲ ಮೂಡಿದೆ. ಕಂದಾಯ ಇಲಾಖೆ ಅಧೀನಕ್ಕೆ ಒಳಪಟ್ಟ ಬೆಜ್ಜವಳ್ಳಿ, ಕೋಣಂದೂರು, ಮೇಗರವಳ್ಳಿಯಲ್ಲಿ ಆರ್‌ಟಿಸಿ ವಿತರಣೆ ಬಹುತೇಕ ಸ್ಥಗಿತಗೊಂಡಿದೆ. ತಹಶೀಲ್ದಾರ್, ಆರ್‌ಐ, ವಿಎ ಬಳಿ ರೈತರು ಸಮಸ್ಯೆ ಹೇಳಿಕೊಂಡರೆ ಯಾವುದೇ ಪರಿಹಾರ ದೊರಕುತ್ತಿಲ್ಲ. ಹಾರಿಕೆ ಉತ್ತರ ನೀಡಿ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಲಾಗುತ್ತಿದೆ.

ಗ್ರಾಮಾಂತರ ಪ್ರದೇಶದ ರೈತರು ಆರ್‌ಟಿಸಿ ದಾಖಲೆ ಪಡೆಯಲು ಸುಮಾರು 50ಕಿ.ಮೀ. ದೂರದ ತಾಲ್ಲೂಕು ಕಚೇರಿಗೆ ಬರುವಂತಾಗಿರುವ ಸಮಸ್ಯೆ ಕುರಿತು ಸಂಬಂಧಿಸಿದ ಆಡಳಿತ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಬೆಳೆ ಆಧಾರಿತ ಸಾಲ ವಿತರಣೆ ಕ್ರಮದಿಂದಾಗಿ ಪ್ರತಿ ವರ್ಷ ದಾಖಲೆ ಸಲ್ಲಿಕೆ ರೈತರಿಗೆ ಅನಿವಾರ್ಯವಾಗಿದೆ. ಕಷ್ಟಪಟ್ಟು ಆರ್‌ಟಿಸಿ ದಾಖಲೆ ಪಡೆದರೂ ದಾಖಲೆಯ ಬೆಳೆ ಕಾಲಂನಲ್ಲಿ ಬೆಳೆ ನಮೂದಾಗುತ್ತಿಲ್ಲ. ಆರ್‌ಟಿಸಿ ದಾಖಲೆಯಲ್ಲಿ ಬೆಳೆ ಕಾಲಂ, ವಿಸ್ತೀರ್ಣ, ಹೆಸರು, ಹಕ್ಕು ಸೇರಿದಂತೆ ಅನೇಕ ಅಂಶಗಳು ದಾಖಲಾಗುತ್ತಿಲ್ಲ.

ಪ್ರತಿ ವರ್ಷ ಆರ್‌ಟಿಸಿ ದಾಖಲೆ ಬದಲಾದ ಅಂಶಗಳನ್ನು ಸರಿಪಡಿಸುವಂತೆ ರೈತರು ಅರ್ಜಿ ನೀಡಿ ನೂರಾರು ಬಾರಿ ಕಚೇರಿಗೆ ಅಲೆಯುವಂತಾಗಿದ್ದು, ಸಾವಿರಾರು ರೂಪಾಯಿಗಳನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಅಳಲನ್ನು ರೈತರು ತೋಡಿಕೊಳ್ಳುತ್ತಿದ್ದಾರೆ.

ಬೆಳೆ ದೃಢೀಕರಣ ಪತ್ರ ವಿತರಣೆಯಲ್ಲಿನ ಲೋಪ, ಅಕ್ರಮ ಪತ್ತೆ ಹಚ್ಚಿರುವ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ನಿಯಮ ಅನ್ವಯ ಬೆಳೆ ದೃಡೀಕರಣ ದಾಖಲೆ ವಿತರಣೆ ಅಧಿಕಾರ ನಾಡಕಚೇರಿ ಉಪ ತಹಶೀಲ್ದಾರ್‌ ಅವರದ್ದಾಗಿದೆ. ಗ್ರಾಮ ಲೆಕ್ಕಿಗರಿಂದ ವರದಿ ಪಡೆದು ಬೆಳೆ ದೃಢೀಕರಣ ಪತ್ರ ನೀಡುವುದು ನಿಯಮ ಬಾಹಿರವಾಗಿದೆ.

ಈ ಕುರಿತು ಅಟಲ್‌ ಜನಸ್ನೇಹಿ ಕೇಂದ್ರ ನಿರ್ದೇಶನಾಲಯದ ನಿರ್ದೇಶಕರು 2015 ಮಾರ್ಚ್‌ 23 ರಂದು ಆದೇಶ ಹೊರಡಿಸಿದ್ದು, ಲೋಪ ಕಂಡು ಬಂದರೆ ಕ್ರಿಮಿನಲ್‌ ಮೊಕದ್ದಮೆ ಹೂಡುವ ಎಚ್ಚರಿಕೆ ನೀಡಿದ್ದಾರೆ. ಈ ಎಲ್ಲಾ ನಿಯಮಗಳು ಬಿಗಿಯಾಗಿದ್ದರೂ ರೈತರಿಗೆ ಆರ್‌ಟಿಸಿ ಮಾತ್ರ ಸಿಗುತ್ತಿಲ್ಲ ಎಂಬ ಕೊರಗು ಮುಗಿದಿಲ್ಲ.

ದಾಖಲೆ ಪೂರೈಕೆಗೆ ಬೇಕಾಗುವ ಕಾಗದ, ಕಂಪ್ಯೂಟರ್‌, ಜೆರಾಕ್ಸ್‌ ಯಂತ್ರದ ಕಾಟ್‌ರೇಜ್‌ (ಇಂಕು) ಖಾಲಿಯಾಗಿದೆ. ಇನ್ನೂ ಭರ್ತಿಯಾಗಿಲ್ಲ ಎಂದು ಹೇಳಿ ಆರ್‌ಟಿಸಿ ದಾಖಲೆ ವಿತರಿಸಲು ವಿಳಂಬ ಮಾಡಲಾಗುತ್ತಿದೆ.

ಉತ್ತಮ ಗುಣಮಟ್ಟದ ಯಂತ್ರೋಪಕರಣಗಳ ಪೂರೈಕೆ ಇದ್ದಾಗ್ಯೂ ಕೂಡ ನಿರ್ವಹಣೆಯಲ್ಲಿನ ಬೇಜವಾಬ್ದಾರಿಯಿಂದ ಸಮರ್ಪಕ ಸೇವೆ ರೈತರಿಗೆ ಸಿಗುತ್ತಿಲ್ಲ. ಸಾಮಗ್ರಿ ಖರೀದಿಗೆ ಸರ್ಕಾರ ನೀಡುವ ಹಣ ಎಲ್ಲಿಗೆ ಹೋಗುತ್ತಿದೆ ಎಂಬ ಪ್ರಶ್ನೆಯನ್ನು ರೈತರು ಮುಂದಿಟ್ಟಿದ್ದಾರೆ.

* * 

ಅಟಲ್‌ ಜನಸ್ನೇಹಿ ಕೇಂದ್ರದ ಸಿಬ್ಬಂದಿಗಳು ವಿವಿಧ ಬೇಡಿಕೆಗೆ ಧರಣಿ ನಡೆಸಿದ್ದರು. ಈ ಸಂದರ್ಭದಲ್ಲಿ ಸಮಸ್ಯೆ ಆಗಿದೆ. ನಾಡಕಚೇರಿ, ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ ಆರ್‌ಟಿಸಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಸಣ್ಣ ಪುಟ್ಟ ಲೋಪದೋಷಗಳಿದ್ದರೆ ಸರಿಪಡಿಸಲಾಗುತ್ತದೆ.
ಎಚ್‌.ಕೆ. ಕೃಷ್ಣಮೂರ್ತಿ,
ಉಪ ವಿಭಾಗಾಧಿಕಾರಿ, ಶಿವಮೊಗ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.