ADVERTISEMENT

ಏಕರೂಪ ತೆರಿಗೆ ಪದ್ಧತಿಯಿಂದ ಉತ್ತಮ ವ್ಯವಹಾರ

ಮಾಹಿತಿ ಕಾರ್ಯಾಗಾರದಲ್ಲಿ ತೆರಿಗೆ ಅಧಿಕಾರಿ ಪ್ರಕಾಶ್

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 11:18 IST
Last Updated 12 ಜನವರಿ 2017, 11:18 IST
ಆನವಟ್ಟಿ: ‘ಕೇಂದ್ರ ಸರ್ಕಾರ ತೆರಿಗೆಗಳನ್ನು ಸರಳೀಕರಿಸಿ ಏಕರೂಪ ತೆರಿಗೆ ಪದ್ಧತಿಯನ್ನು ಜಾರಿಗೆ ತಂದಿದೆ. ಇದರಿಂದ ವ್ಯಾಪಾರಿಗಳು ಹಾಗೂ ಗ್ರಾಹಕರ ನಡುವೆ ಉತ್ತಮ ಸಂಬಂಧ ಬೆಳೆಯುತ್ತದೆ. ಸರ್ಕಾರಕ್ಕೂ ಸಕಾಲಕ್ಕೆ ಸೂಕ್ತ ತೆರಿಗೆ ಲಭ್ಯವಾಗುತ್ತದೆ’ ಎಂದು ಸಾಗರದ ಸಹಾಯಕ ತೆರಿಗೆ ಅಧಿಕಾರಿ ಎನ್.ಪ್ರಕಾಶ್ ತಿಳಿಸಿದರು.
 
ವರ್ತಕರ ಸಂಘ ಹಾಗೂ ವಾಸವಿ ಸಮಾಜದ ಸಹಯೋಗದಲ್ಲಿ ವಾಸವಿ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಲಾಗಿದ್ದ ‘ಮೌಲ್ಯವರ್ಧಿತ ತೆರಿಗೆಯಿಂದ ಸರಕು ಮತ್ತು ಸೇವಾ ತೆರಿಗೆ ಪದ್ಧತಿಯೆಡೆಗೆ’ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
 
‘ಜ.15ರ ಒಳಗೆ ವರ್ತಕರು ಮೌಲ್ಯವರ್ಧಿತ, ಮನರಂಜನಾ, ವಿಲಾಸ ತೆರಿಗೆ ಅಡಿ ನೋಂದಾಯಿತ ವರ್ತಕರು ದಾಖಲಾತಿ ಮಾಡಿಸಿಕೊಳ್ಳಬೇಕು. ಈ ಮೂಲಕ ಯಾವುದೇ ತೊಂದರೆಗಳು ಇಲ್ಲದೇ ಉತ್ತಮ ವ್ಯಾಪಾರದಲ್ಲಿ ತೊಡಗಿಕೊಳ್ಳಬಹುದು’ ಎಂದರು. 
 
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಂ.ಅನಿಲ್‌ರಾಜ್ ಹಾಗೂ ಕರ್ಣಾಟಕ ಬ್ಯಾಂಕ್ ಶಾಖಾ ಪ್ರಬಂಧಕ ಎಸ್.ಶಶಿಧರ್ ಮಾತನಾಡಿ, ‘ಆರ್ಥಿಕ ಸೇವಾ ಕ್ಷೇತ್ರದಲ್ಲಿ ಬ್ಯಾಂಕ್‌ಗಳ ಪಾತ್ರ ಮಹತ್ತರವಾದದ್ದು. ಜಾಗತೀಕರಣದ ನಾಗಾಲೋಟದಿಂದಾಗಿ ಆಧುನಿಕ ಪದ್ಧತಿಗಳಿಗೆ ಪ್ರತಿಯೊಬ್ಬ ಗ್ರಾಹಕನೂ ತೆರದುಕೊಳ್ಳಬೇಕು. ಮೊಬೈಲ್‌ ಬ್ಯಾಂಕಿಂಗ್ ಮೂಲಕ ನಿಮ್ಮ ಎಲ್ಲ ವ್ಯವಹಾರವನ್ನು ನಡೆಸಲು ಸಾಧ್ಯವಿದೆ. ಇದರಿಂದಾಗಿ ಗ್ರಾಹಕರ ಸಮಯ ವ್ಯರ್ಥವಾಗುವುದಿಲ್ಲ. ಪ್ರತಿಯೊಬ್ಬ ಗ್ರಾಹಕನೂ ತಮ್ಮ ಕಾರ್ಯಗಳನ್ನು ಅಗತ್ಯ ಸಂರಕ್ಷಣಾ ವಿಧಿ ಹಾಗೂ ದಾಖಲಾತಿಗಳ ಜತೆಗೆ ಅಂತರ್ಜಾಲತಾಣಕ್ಕೆ ದಾಖಲಿಸಿಕೊಳ್ಳಬೇಕು’ ಎಂದು ತಿಳಿಸಿದರು.
 
ಖಾಸಗಿ ಮೊಬೈಲ್ ನೆಟ್‌ವರ್ಕ್ ಸಂಸ್ಥೆಯ ವಿತರಕ ಮಹೇಶ್ ಮೊಬೈಲ್ ಮೂಲಕ ಬ್ಯಾಂಕಿಂಗ್ ಹಾಗೂ ತೆರಿಗೆ ಪಾವತಿ ಬಗ್ಗೆ ಮಾಹಿತಿ ನೀಡಿದರು. 
 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವರ್ತಕ ಸಂಘದ ಅಧ್ಯಕ್ಷ ಎ.ಎಲ್. ಅರವಿಂದ್ ವಹಿಸಿದ್ದರು. ಗೌರವಾಧ್ಯಕ್ಷ ಎಂ.ಜಿ.ರಾಮಚಂದ್ರ ಶ್ರೇಷ್ಠಿ, ಉಪಾಧ್ಯಕ್ಷ ಪದ್ಮನಾಭ ಶ್ರೇಷ್ಠಿ, ಕಾರ್ಯದರ್ಶಿ ಸಂಜಯ ಡೋಂಗ್ರೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.