ADVERTISEMENT

ಗುರಿಯೆಡೆಗಿನ ಪಯಣ ನಿರಂತರವಾಗಿರಲಿ

ಎಟಿಎನ್‌ಸಿ ಕಾಲೇಜಿನ ಕ್ರೀಡಾ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶೇಖರ ನಾಯ್ಕ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 5:17 IST
Last Updated 14 ಏಪ್ರಿಲ್ 2017, 5:17 IST

ಶಿವಮೊಗ್ಗ: ‘ಜೀವನದಲ್ಲಿ ಗುರಿ ಸಾಧಿಸುವ ಛಲ ನಿರಂತರವಾಗಿರಲಿ’ ಎಂದು  ಭಾರತ ಅಂಧರ ಕ್ರಿಕೆಟ್ ತಂಡದ ಮಾಜಿ ನಾಯಕ ಎಲ್.ಶೇಖರನಾಯ್ಕ  ಕರೆ ನೀಡಿದರು.

ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಸುವರ್ಣ ಮಹೋತ್ಸವ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಕ್ರೀಡಾ ವಾರ್ಷಿ ಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿ ಹಂತದಿಂದಲೇ ಗುರಿಯೆಡೆಗೆ ಪಯಣ ಆರಂಭವಾಗ ಬೇಕು.  ಉತ್ತಮ ಅಂಕ ಪಡೆಯುವುದರ ಜತೆಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗಿಯಾಗಿ ವಿಶೇಷ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಯಾವುದೇ ಕ್ಷೇತ್ರದಲ್ಲಾಗಲಿ ಒಂದು ಸಾಧನೆಯ ಮೆಟ್ಟಿಲು ದ್ವಿಗುಣಗೊಳ್ಳಬೇಕು’ ಎಂದರು.

‘ಕಲಿಕೆಯ ದಿನಗಳಲ್ಲಿ ಗುರುಗಳಿಂದ ದೊರೆತ ಉತ್ತಮ ಮಾರ್ಗದರ್ಶನದಿಂದ ಕ್ರಿಕೆಟ್ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಲು ಸಾಧ್ಯವಾಯಿತು. ಕ್ರಿಕೆಟ್‌ನಲ್ಲಿ ಮೇರು ಸಾಧನೆ ಮಾಡಿದ ವ್ಯಕ್ತಿಗಳ ಜೀವನಚರಿತ್ರೆ ಬಗ್ಗೆ ಅಧ್ಯಯನ ಮಾಡಿದೆ. ಸಾಕಷ್ಟು ಅಭ್ಯಾಸ ಮಾಡಲು ಅವಕಾಶ ಒದಗಿಬಂದಿತು. 
ಅಂಗವೈಕಲ್ಯವನ್ನು ಸವಾಲಾಗಿ ಪರಿ ಗಣಿಸಿದೆ.  ಪರಿಶ್ರಮದಿಂದ  ದೇಶಕ್ಕೆ ಅಂಧರ ವಿಶ್ವ ಕ್ರಿಕೆಟ್‌ನಲ್ಲಿ ಜಯ ತಂದು ಕೊಡಲು ಸಾಧ್ಯವಾಯಿತು’ ಎಂದರು.

‘ಮನೆಯಲ್ಲಿ ಪೋಷಕರು ಬೈಯುತ್ತಾರೆ, ಹೊಡೆಯುತ್ತಾರೆ ಎಂದ ಮಾತ್ರಕ್ಕೆ ಅವರಿಗೆ ನಿಮ್ಮ ಮೇಲೆ ಪ್ರೀತಿ ಇಲ್ಲ ಎಂದರ್ಥವಲ್ಲ.  ತಿದ್ದಿ, ಬುದ್ಧಿ ಹೇಳಿ ಉತ್ತಮ ಪ್ರಜೆಯಾಗಿಸಲು  ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರ್ಥ. ಪೋಷಕರ ಹಾಗೂ ಗುರುಗಳ ಮಾತಿಗೆ ಗೌರವ ನೀಡಬೇಕು’ ಎಂದು ಕಿವಿಮಾತು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಧ್ಯಕ್ಷ ಎ.ಎಸ್. ವಿಶ್ವನಾಥ್ ಮಾತನಾಡಿ, ‘ವಿದ್ಯಾರ್ಥಿಗಳು ಜಗತ್ತಿನ ಮಹಾನ್ ಸಾಧಕರ ಹಾಗೂ ದಾರ್ಶನಿಕರ ಜೀವನ ಚರಿತ್ರೆಗಳನ್ನು ಅರಿಯಬೇಕು. ಸಾಧನೆಗೆ ಯಾವುದೂ  ಅಡ್ಡಿಯಾಗಬಾರದು ಎನ್ನುವುದಕ್ಕೆ ಉತ್ತಮ ಉದಾಹರಣೆ ಶೇಖರನಾಯ್ಕ. ಅಂಗವೈಕಲ್ಯ ಮೀರಿ  ಜಗತ್ತೆ ಹೆಮ್ಮೆ ಪಡುವೆಂತೆ ಮಾಡಿದ ಅವರು ಎಲ್ಲರಿಗೂ ಮಾದರಿ’  ಎಂದು ಶ್ಲಾಘಿಸಿದರು.

ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕ ಎಂ.ನಿಂಗನ ಗೌಡ ಹಾಗೂ ಶೇಖರ್‌ನಾಯ್ಕ ಅವರನ್ನು ಸನ್ಮಾನಿಸಲಾಯಿತು.  ಪ್ರಾಂಶುಪಾಲ ಬಿ.ಆರ್. ದಯಾನಂದ ಅಧ್ಯಕ್ಷತೆ ವಹಿಸಿದ್ದರು.  ಸಮಿತಿಯ ಉಪಾಧ್ಯಕ್ಷ ಟಿ.ಆರ್. ಅಶ್ವತ್ಥ ನಾರಾಯಣ ಶೆಟ್ಟಿ, ಸಮಿತಿಯ ಕಾರ್ಯದರ್ಶಿ ಎಸ್.ಎನ್. ನಾಗರಾಜ್, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಕೆ.ಎಂ. ನಾಗರಾಜ್  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.