ADVERTISEMENT

ಜಿಲ್ಲೆಯ ಯಾರಿಗೆ ಸಚಿವ ಸ್ಥಾನದ ಯೋಗ?

ಚಲಾವಣೆಯಲ್ಲಿ ಕಾಂಗ್ರೆಸ್‌ನ ಸಂಗಮೇಶ್ವರ, ಜೆಡಿಎಸ್‌ನ ಮಧು ಬಂಗಾರಪ್ಪ, ಶಾರದಾ ಪೂರ್‍ಯಾನಾಯ್ಕ ಹೆಸರು

ಚಂದ್ರಹಾಸ ಹಿರೇಮಳಲಿ
Published 22 ಮೇ 2018, 9:08 IST
Last Updated 22 ಮೇ 2018, 9:08 IST

ಶಿವಮೊಗ್ಗ:  ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ಖಚಿತವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಯಾರಿಗೆ ಸಚಿವ ಭಾಗ್ಯ ಒಲಿಯುತ್ತದೆ ಎಂಬ ಲೆಕ್ಕಾಚಾರ ಆರಂಭವಾಗಿದೆ.

ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ 6 ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ಭದ್ರಾವತಿ ಕ್ಷೇತದಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಸಂಪೂರ್ಣ ನೆಲ ಕಚ್ಚಿದೆ.

ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಏಕೈಕ ಶಾಸಕ, ಭದ್ರಾವತಿಯ ಬಿ.ಕೆ.ಸಂಗಮೇಶ್ವರ ಅವರಿಗೆ ಜಿಲ್ಲಾವಾರು ಲೆಕ್ಕಾಚಾರ ಹಾಗೂ ಲಿಂಗಾಯತ ಸಮುದಾಯದ ಕೋಟಾದಡಿ ಈ ಬಾರಿ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಇದೆ.

ADVERTISEMENT

ರಾಜ್ಯ ಯುವ ಘಟಕದ ಅಧ್ಯಕ್ಷರಾಗಿ ಹಲವು ವಿಧಾನಸಭಾ ಕ್ಷೇತ್ರ ಸುತ್ತಿ, ಪ್ರಚಾರ ಕೈಗೊಂಡು ಪಕ್ಷ ಸಂಘಟಿಸಿದ ಸೊರಬದ ಮಾಜಿ ಶಾಸಕ ಮಧು ಬಂಗಾರಪ್ಪ, ಗ್ರಾಮಾಂತರ ಕ್ಷೇತ್ರದಲ್ಲಿ ಕಡಿಮೆ ಅಂತರದಲ್ಲಿ ಸೋಲು ಕಂಡ ಶಾರದಾ ಪೂರ‍್ಯಾನಾಯ್ಕ, ಮೂರು ಬಾರಿ ಶಾಸಕರಾದ ಅನುಭವ ಇರುವ, ಒಂದು ದಶಕದಿಂದ ಪಕ್ಷದಲ್ಲೇ ಉಳಿದಿರುವ ಭದ್ರಾವತಿಯ ಎಂ.ಜೆ.ಅಪ್ಪಾಜಿ ಅವರಲ್ಲಿ ಒಬ್ಬರಿಗೆ ವಿಧಾನ ಪರಿಷತ್ ಸದಸ್ಯತ್ವ ದೊರಕಿಸಿ, ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ.

ಬಿ.ಕೆ.ಸಂಗಮೇಶ್ವರ ಏಳುಬೀಳು: 1999ರಲ್ಲಿ ಚುನಾವಣಾ ರಾಜಕೀಯ ಪ್ರವೇಶಿಸಿದ್ದ ಸಂಗಮೇಶ್ವರ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಆದರೆ, ಮೊದಲ ಪ್ರಯತ್ನದಲ್ಲಿ ಸ್ವತಂತ್ರ ಅಭ್ಯರ್ಥಿ ಎಂ.ಜೆ. ಅಪ್ಪಾಜಿ ವಿರುದ್ಧ 7,836 ಮತಗಳ ಅಂತರದಿಂದ ಸೋಲು ಕಂಡಿದ್ದರು.

ಅಂದು ಪಕ್ಷೇತರರಾಗಿ ಗೆಲುವು ಕಂಡಿದ್ದ ಅಪ್ಪಾಜಿ, ಎಸ್‌.ಎಂ. ಕೃಷ್ಣ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಲ್ಲದೇ, ಪಕ್ಷದ ಸಹ ಸದಸ್ಯತ್ವ ಪಡೆದಿದ್ದರು. 2004ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದಲೇ ಸ್ಪರ್ಧೆಗೆ ಇಳಿದಿದ್ದರು. ಅಂದು ಬಿ.ಕೆ.ಸಂಗಮೇಶ್ವರ ಪಕ್ಷೇತರ ಅಭ್ಯರ್ಥಿಯಾಗಿ ಅವರ ವಿರುದ್ಧ ಸೆಣಸಿ, 17,431 ಮತಗಳ ಅಂತರದಿಂದ ಮಣಿಸಿದ್ದರು. ಆ ಮೂಲಕ 99ರ ಸೋಲಿಗೆ ಸೇಡು ತೀರಿಸಿಕೊಂಡಿದ್ದರು.

2008ರಲ್ಲಿ ಸಂಗಮೇಶ್ವರ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಅವರ ಸಾಂಪ್ರದಾಯಿಕ ಎದುರಾಳಿ ಅಪ್ಪಾಜಿ ಜೆಡಿಎಸ್‌ನಿಂದ ಕಣಕ್ಕೆ ಇಳಿದು, ಸಂಗಮೇಶ್ವರ ವಿರುದ್ಧ ಕೇವಲ 487 ಮತಗಳಿಂದ ಸೋಲು ಕಂಡಿದ್ದರು.

2013ರ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದ ಎಲ್ಲ ಹಾಲಿ ಶಾಸಕರಿಗೂ ಟಿಕೆಟ್ ನೀಡಿತ್ತು. ಆದರೆ, ಭದ್ರಾವತಿಯಲ್ಲಿ ಮಾತ್ರ ಸಂಗಮೇಶ್ವರಗೆ ಕೈಕೊಟ್ಟು ಸಿದ್ದರಾಮಯ್ಯ ಆಪ್ತ ಸಿ.ಎಂ.ಇಬ್ರಾಹಿಂ ಅವರಿಗೆ ಮಣೆ ಹಾಕಲಾಯಿತು. ಜೆಡಿಎಸ್‌ ಎದುರು ಸಂಗಮೇಶ್ವರ ಪಕ್ಷೇತರರಾಗಿ ಕಣಕ್ಕೆ ಇಳಿದು 44 ಸಾವಿರ ಮತಗಳ ಭಾರಿ ಅಂತರದಿಂದ ಸೋಲು ಕಂಡಿದ್ದರು. ಈ ಬಾರಿ ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ಕಾಂಗ್ರೆಸ್ ಟಿಕೆಟ್ ನೀಡಿದರು. ನಿರೀಕ್ಷೆಯಂತೆ ಸಂಗಮೇಶ್ವರ ಗೆಲುವು ದಾಖಲಿ ಸುವ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್‌ ನೆಲೆ ಉಳಿಸಿದ್ದಾರೆ. ಸಹಜವಾಗಿ ಸಚಿವ ಸ್ಥಾನದ ನಿರೀಕ್ಷೆಯೂ ಗರಿಗೆದರಿದೆ.

2013ರ ವಿಧಾನಸಭಾ ಚುನಾವಣೆಯಲ್ಲಿ ಸೊರಬ ಕ್ಷೇತ್ರದಲ್ಲಿ ಮಧು ಬಂಗಾರಪ್ಪ, ಭದ್ರಾವತಿಯಲ್ಲಿ ಎಂ.ಜೆ.ಅಪ್ಪಾಜಿ, ಶಿವಮೊಗ್ಗ ಗ್ರಾಮಾಂತರದಲ್ಲಿ ಶಾರದಾ ಪೂರ‍್ಯಾನಾಯ್ಕ ಗೆಲುವು ಸಾಧಿಸಿದ್ದರು. ಈ ಬಾರಿ ಮೂವರೂ ಸೋಲು ಕಂಡಿರುವ ಕಾರಣ ಜಿಲ್ಲೆಯಲ್ಲಿ ಜೆಡಿಎಸ್‌ ನೆಲೆ ಕುಸಿದಿದೆ. ಈ ಮೂವರಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡಿದರೆ ಮುಂದಿನ ಚುನಾವಣೆಗೆ ಅನುಕೂಲವಾಗುತ್ತದೆ. ಜಿಲ್ಲೆಯಲ್ಲಿ ಪ್ರಬಲವಾಗಿ ಬೇರೂರಿರುವ ಬಿಜೆಪಿ ಎದುರಿಸಲು ಪಕ್ಷಕ್ಕೆ ಬಲ ತುಂಬಬಹುದು ಎಂಬ ಲೆಕ್ಕಾಚಾರ ಪಕ್ಷದ ವರಿಷ್ಠರಲ್ಲಿದೆ.

ಭದ್ರಾವತಿಯಲ್ಲಿ ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಕಂಡಿದ್ದು, ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಿರುವ ಕಾರಣ ಆ ಪಕ್ಷದ ಸಂಗಮೇಶ್ವರ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಹೆಚ್ಚು. ಹಾಗಾಗಿ, ಅದೇ ಕ್ಷೇತ್ರದ ಅಪ್ಪಾಜಿ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಕಡಿಮೆ.

ಮಧು ಬಂಗಾರಪ್ಪ ಅವರಿಗೆ ಈಡಿಗ ಕೋಟಾ ಅಥವಾ ಜಿಲ್ಲಾವಾರು ಲೆಕ್ಕಾಚಾರದಡಿ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ.

‘ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ಮಧ್ಯ ಕರ್ನಾಟಕದಲ್ಲಿ  ಒಬ್ಬರೂ ಜೆಡಿಎಸ್‌ ಶಾಸಕರು ಇಲ್ಲ. ಹಾಗಾಗಿ, ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ನೀಡಿದರೆ ಐದಾರು ಜಿಲ್ಲೆಗಳಲ್ಲಿ ಜೆಡಿಎಸ್ ಪ್ರಾಬಲ್ಯ ವಿಸ್ತರಿಸಲು ಸಾಧ್ಯವಾಗುತ್ತದೆ ಎನ್ನುವ ಲೆಕ್ಕಾಚಾರ ವರಿಷ್ಠರಲ್ಲಿದೆ’ ಎಂದು ಮಾಹಿತಿ ನೀಡುತ್ತಾರೆ ಜಿಲ್ಲಾ ಜೆಡಿಎಸ್ ಮುಖಂಡರು.

ಶಾರದಾ ಪೂರ‍್ಯಾನಾಯ್ಕ ಅವರಿಗೆ ಪರಿಶಿಷ್ಟ ಜಾತಿ, ಮಹಿಳಾ ಕೋಟಾದಡಿ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನುವ ನಂಬಿಕೆಯನ್ನೂ ಜಿಲ್ಲಾ ವರಿಷ್ಠರು ವ್ಯಕ್ತಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.