ADVERTISEMENT

ಪರಿಸರ ತಜ್ಞರ ಸಭೆ ಕರೆಯಲು ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2017, 9:54 IST
Last Updated 14 ಸೆಪ್ಟೆಂಬರ್ 2017, 9:54 IST

ಶಿವಮೊಗ್ಗ: ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ಸಾಗರ ತಾಲ್ಲೂಕು ಆನಂದಪುರ ಬಳಿಯ ಇರುವಕ್ಕಿಯಲ್ಲಿ ನೀಡಿರುವ 777 ಎಕರೆ ಕಾನು ಅರಣ್ಯಭೂಮಿ ಸಂರಕ್ಷಣೆ ಕುರಿತು ಚರ್ಚಿಸಲು ತಕ್ಷಣವೇ ಪರಿಸರ ತಜ್ಞರ ಸಭೆ ಕರೆಯುವಂತೆ ಕೃಷಿ ಇಲಾಖೆ ಕಾರ್ಯದರ್ಶಿ ಆದೇಶಿಸಿದ್ದಾರೆ. ಕೃಷಿ ವಿಶ್ವವಿದ್ಯಾಲಯ ನಿರ್ಮಾಣ ಆರಂಭಕ್ಕೆ ಮೊದಲೇ ವೃಕ್ಷಲಕ್ಷ ಆಂದೋಲನ ಇರುವಕ್ಕಿ ಬಳಿಯ ಕಾನು ಅರಣ್ಯ ನಾಶ ಮಾಡಬಾರದು ಎಂದು ಸರ್ಕಾರದ ಗಮನ ಸೆಳೆದಿತ್ತು. ಈಗ ಸರ್ಕಾರದ ಸೂಚನೆಯಂತೆ ಕೃಷಿ
ವಿಶ್ವವಿದ್ಯಾಲಯದ ಕುಲಪತಿ ತಕ್ಷಣವೇ ತಜ್ಞರ ಸಭೆ ಕರೆಯಲು ಮುಂದಾಗಿದ್ದಾರೆ.

ರಾಜ್ಯ ಅರಣ್ಯ, ಪರಿಸರ ಕಾರ್ಯದರ್ಶಿ ಭೇಟಿ: ಅನಂತ ಹೆಗಡೆ ಅಶೀಸರ ನೇತೃತ್ವದ ಪರಿಸರ ನಿಯೋಗ ಈಚೆಗೆ ರಾಜ್ಯ ಅರಣ್ಯ-ಪರಿಸರ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಇರುವಕ್ಕಿ ಕಾನು ಅರಣ್ಯ ಉಳಿಸಲು ಮನವಿ ಸಲ್ಲಿಸಿತ್ತು. ಸಾಗರದ ಅಂದಿನ ಅರಣ್ಯ ಅಧಿಕಾರಿ ಡೀಮ್ಡ್ ಅರಣ್ಯವನ್ನು ಕೃಷಿ ವಿಶ್ವವಿದ್ಯಾಲಯಕ್ಕೆ ನೀಡಲು ಒಪ್ಪಿಗೆ ನೀಡಿದ್ದಾರೆ. ಇದು ಅರಣ್ಯ ಕಾಯ್ದೆಯ ಉಲ್ಲಂಘನೆ. ತಕ್ಷಣವೇ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದ್ದರು. ಮನವಿಗೆ ಸ್ಪಂದಿಸಿದ ರಾಜ್ಯ ಹೆಚ್ಚುವರಿ ಮುಖ್ಯ ಅರಣ್ಯ ಪರಿಸರ ಕಾರ್ಯದರ್ಶಿ ರವಿಕುಮಾರ್ ವಿಷಯದ ಸಮಗ್ರ ವಿವರ ನೀಡುವಂತೆ ಸೂಚಿಸಿದ್ದರು.

ಪರಿಭಾವಿತ ಅರಣ್ಯ ಪ್ರದೇಶ ವಿವಾದ ಸದ್ಯ ಸುಪ್ರಿಂಕೋರ್ಟ್‌ನಲ್ಲಿದೆ. ಇರುವಕ್ಕಿ ಕಾನು ಅರಣ್ಯ ಭೂಮಿಯೂ ಈ ಪಟ್ಟಿಯಲ್ಲಿದೆ. ರೈತರು, ಪರಿಸರವಾದಿಗಳು, ಸ್ಥಳೀಯರ ವಿರೋಧದ ಮಧ್ಯೆಯೇ ಕೃಷಿ ವಿಶ್ವ ವಿದ್ಯಾಲಯ ಕಾಮಗಾರಿ ಆರಂಭಕ್ಕೆ ಶಂಕು ಸ್ಥಾಪನೆ ನೆರವೇರಿಸಿದೆ. ಸರ್ಕಾರ ಈಗಾಗಲೇ ಪ್ರಥಮ ಹಂತದಲ್ಲಿ ₹ 150 ಕೋಟಿ ಮಂಜೂರು ಮಾಡಿದೆ.

ADVERTISEMENT

ಅರಣ್ಯ, ಪರಿಸರ, ರೈತರ ಜ್ವಲಂತ ವಿಷಯಗಳ ಕುರಿತು ಸಮಗ್ರ ಚರ್ಚೆ ನಡೆಸಬೇಕು. ಕಾನು, ಪರಿಭಾವಿತ ಅರಣ್ಯ ಉಳಿಸಬೇಕು. ವಿಶ್ವವಿದ್ಯಾಲಯ ಮರಳಿ ಭೂಮಿ ವಾಪಸ್ ನೀಡಬೇಕು. ವಿಷಯ ಕುರಿತು ಚರ್ಚಿಸಲು ಕಾರ್ಯದರ್ಶಿ ಆದೇಶ ನೀಡಿರುವುದು ಹೋರಾಟಕ್ಕೆ ಆರಂಭಿಕ ಯಶಸ್ಸು ದೊರೆತಿದೆ’ ಎನ್ನುತ್ತಾರೆ ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ.

ಪ್ರತಿರೋಧ: ವಿಶ್ವ ವಿದ್ಯಾಲಯ ಅಭಿವೃದ್ಧಿ ಕಾಮಗಾರಿಗಳಿಗೆ ಮರ ಕಡಿಯಲು ಬಂದ ಕಾರ್ಮಿಕರನ್ನು ಇರುವಕ್ಕಿ ಸುತ್ತಲ ರೈತರು ತಡೆದು, ಹಿಂದಕ್ಕೆ ಕಳುಹಿಸಿದ್ದಾರೆ. ತಮಗೆ
ಮಂಜೂರಾದ ಭೂಮಿಯನ್ನು ಸರ್ಕಾರ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಿದೆ ಎಂದು ಬಗರಹುಕುಂ ಹಕ್ಕುಪತ್ರ ಪಡೆದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿ, ಉಪ ವಿಭಾಗ ಅಧಿಕಾರಿ, ಜನ ಪ್ರತಿನಿಧಿಗಳು ಧರಣಿ ನಿರತ ಸಾಗುವಳಿದಾರರ ಧ್ವನಿಗೆ ಬೆಲೆ ನೀಡಿಲ್ಲ. ಭೂಮಿ ಕಳೆದುಕೊಳ್ಳುವ ಆತಂಕದಲ್ಲಿ ರೈತರು ಇದ್ದಾರೆ ಎಂದು ಹೋರಾಟಗಾರ ಸೋಮಶೇಖರ ಇರುವಕ್ಕಿ ಆರೋಪಿಸಿದರು.

ಕೃಷಿ ವಿ.ವಿ.ಗೆ ಭಾರಿ ಪ್ರಮಾಣದ ಅರಣ್ಯ ಭೂಮಿ: ಕೃಷಿ ವಿಶ್ವವಿದ್ಯಾಲಯಕ್ಕೆ 2012–13ರಲ್ಲೇ ಶಿವಮೊಗ್ಗ ಸಮೀಪ 600 ಎಕರೆ ಭೂಮಿ ಗುರುತಿಸಲಾಗಿತ್ತು. ಆದರೆ, ಅಂದು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಭೂಮಿ ಮಂಜೂರಾತಿಗೆ ತಡೆ ನೀಡಿತು. ನಂತರ 2013–14ರಲ್ಲಿ ಅಂದಿನ ಕಂದಾಯ ಸಚಿವರು ಸಾಗರ ತಾಲ್ಲೂಕಿನ ಇರುವಕ್ಕಿ ಬಳಿ ಅರಣ್ಯ ಭೂಮಿ ನೀಡಿದ್ದಾರೆ.

‘ಅರಣ್ಯ ಪ್ರದೇಶ ನಾಶ ಮಾಡಿ ವಿಶ್ವವಿದ್ಯಾಲಯ ನಿರ್ಮಿಸುವ ಅಗತ್ಯವಿಲ್ಲ. ಈಗ ನೀಡಿರುವ ಭೂಮಿ ಹಿಂದಕ್ಕೆ ಪಡೆದು ಬೇರೆ ಭಾಗದಲ್ಲಿ ಭೂಮಿ ನೀಡಬೇಕು’ ಎಂದು ಮಾಜಿ ಶಾಸಕ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.