ADVERTISEMENT

ಬರಗಾಲ: ಬಿಜೆಪಿಯಿಂದ ರಾಜಕೀಯ

ವಿರೋಧ ಪಕ್ಷದ ಮುಖಂಡರ ಟೀಕಿಸಿದ ಸಚಿವ ಕಾಗೋಡು ತಿಮ್ಮಪ್ಪ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 4:54 IST
Last Updated 11 ಮಾರ್ಚ್ 2017, 4:54 IST
ಸಾಗರ: ‘ಬರ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ. ಆದರೆ, ಬಿಜೆಪಿ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಟೀಕಿಸಿದರು.
 
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.‘ಬರ ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕುಡಿಯುವ ನೀರಿನ ಕೊರತೆ ಇರುವಲ್ಲಿ ಅದನ್ನು ನಿಭಾಯಿಸಲು ಕೇಂದ್ರ ಸರ್ಕಾರದ ಪರಿಹಾರ ನಿಧಿಯಿಂದ ₹ 380 ಕೋಟಿ, ಗ್ರಾಮೀಣಅಭಿವೃದ್ಧಿ ನಿಧಿಯಿಂದ ₹ 300 ಕೋಟಿ, ನಗರಾಭಿವೃದ್ಧಿ ನಿಧಿಯಿಂದ ₹ 195 ಕೋಟಿ ಕಾಯ್ದಿರಿಸಲಾಗಿದೆ’ ಎಂದರು.
 
‘ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಲು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಒಟ್ಟು ₹ 700 ಕೋಟಿ ಹಣ ಜಮಾ ಮಾಡಲಾಗಿದೆ. ಕೊಳವೆಬಾವಿಗಳು ಕೆಟ್ಟಿರುವಲ್ಲಿ ದುರಸ್ತಿ, ಪೈಪ್‌ಲೈನ್‌ ಅಳವಡಿಕೆ ಸೇರಿದಂತೆ ತುರ್ತು ಕಾಮಗಾರಿ ಕೈಗೊಳ್ಳಲು ಈ ಹಣ ಬಳಸಲು ಸೂಚಿಸಲಾಗಿದೆ. ತೀರಾ ಅವಶ್ಯಕತೆ ಇರುವಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುವುದು’ ಎಂದು ಅವರು ಹೇಳಿದರು.
 
14ರಂದು ಪರಿಹಾರ ವಿತರಣೆ:  ‘ಕೇಂದ್ರ ಸರ್ಕಾರ ಈಗ ಬಿಡುಗಡೆ ಮಾಡಿರುವ ಹಣ ಸಾಲದು ಎನ್ನುವ ಕಾರಣಕ್ಕೆ ಒಟ್ಟಿಗೆ ಎಲ್ಲಾ ಜಿಲ್ಲೆಗಳಿಗೆ ಹಣ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಆದರೆ, ಅದು ವಿಳಂಬವಾಗಬಾರದು ಎನ್ನುವ ಕಾರಣಕ್ಕೆ ಮಾ.14ರಂದು 14 ಜಿಲ್ಲೆಗಳಿಗೆ ₹ 450 ಕೋಟಿ ಪರಿಹಾರ ವಿತರಿಸಲಾಗುವುದು’ ಎಂದು  ಅವರು ಹೇಳಿದರು.
 
‘ಬರ ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸರ್ಕಾರದಿಂದ ₹ 4,500 ಕೋಟಿ  ನೆರವು ಕೇಳಲಾಗಿತ್ತು. ಬೆಳೆ ನಷ್ಟದ ಆಧಾರದ ಮೇಲೆಯೇ ಈ ಮೊತ್ತಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ₹ 1,700 ಕೋಟಿ ಮಂಜೂರು ಮಾಡಿದ್ದು, ₹ 450 ಕೋಟಿ ಬಿಡುಗಡೆ ಮಾಡಿದೆ. ಮಂಜೂರಾಗಿರುವ ಪೂರ್ತಿ ಹಣವನ್ನು ಬಿಡುಗಡೆ ಮಾಡದೆ ಹಣ ಬಳಕೆಯಾಗಿರುವ ಬಗ್ಗೆ ದಾಖಲೆ ಒದಗಿಸುವುದಾದರೂ ಹೇಗೆ’ ಎಂದು ಅವರು ಪ್ರಶ್ನಿಸಿದರು. 
 
‘ಜಾನುವಾರಿಗೆ ಮೇವಿನ ಕೊರತೆ ಆಗುವುದನ್ನು ತಡೆಯಲು ಪ್ರತಿ ತಾಲ್ಲೂಕುಗಳ ಹೋಬಳಿ ಕೇಂದ್ರಗಳಲ್ಲಿ ಮೇವು ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾ
ಗಿದೆ. ಗೋ ಶಾಲೆಗಳಿಗೂ ಅಗತ್ಯವಿರುವ ಮೇವು ಪೂರೈಸಲಾಗುವುದು. ಬಿಜೆಪಿ ಮುಖಂಡರು ಬರಗಾಲದ ವಿಷಯದಲ್ಲಿ ರಾಜಕೀಯ ಲಾಭ ಪಡೆಯುವ ಯೋಚನೆ ಬಿಡಬೇಕು. ಎಲ್ಲಿ ಕುಡಿಯುವ ನೀರು, ಮೇವು ಪೂರೈಕೆ, ಪರಿಹಾರ ವಿತರಣೆಯ ಕೆಲಸ ಆಗಬೇಕು ಎನ್ನುವ ಬಗ್ಗೆ ಸರ್ಕಾರಕ್ಕೆ ಸಲಹೆ, ಸಹಕಾರ ನೀಡಲಿ’ ಎಂದರು.
 
‘ಬರಗಾಲದ ಕಾರಣಕ್ಕೆ ಜನ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಗುಳೆ ಹೋಗುವುದನ್ನು ತಡೆಗಟ್ಟಲು ಉದ್ಯೋಗ ಖಾತ್ರಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ತೀರ್ಮಾನಿಸಲಾಗಿದೆ. ಬರಗಾಲದ ವಿಷಯದಲ್ಲಿ ಬಿಜೆಪಿ ಪಕ್ಷಕ್ಕೆ ಇರುವಷ್ಟೆ ಕಾಳಜಿ ಕಾಂಗ್ರೆಸ್‌ಗೂ ಇದೆ’ ಎಂದು ಸ್ಪಷ್ಟಪಡಿಸಿದರು.
 
‘ಕೇಂದ್ರ ಸರ್ಕಾರ ಶೇ 50ರಷ್ಟು ನೆರವು ನೀಡಿದರೆ ಉಳಿದ ಹಣವನ್ನು ರಾಜ್ಯ ಸರ್ಕಾರ ಭರಿಸುವ ಮೂಲಕ ರೈತರ ಸಾಲ ಮನ್ನಾ ಮಾಡಲು ಸಿದ್ಧವಿದೆ ಎಂಬ ನಿರ್ಧಾರಕ್ಕೆ ಮುಖ್ಯಮಂತ್ರಿಗಳು ಈಗಲೂ ಬದ್ಧರಾಗಿದ್ದಾರೆ’ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.  ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಬಿ.ಆರ್‌.ಜಯಂತ್‌ ಹಾಜರಿದ್ದರು. 
 
ನೂತನ ತಾಲ್ಲೂಕು: ಬಜೆಟ್‌ನಲ್ಲಿ ನಿರ್ಧಾರ
‘ನೂತನ ತಾಲ್ಲೂಕು ರಚನೆ ವಿಷಯದ ಬಗ್ಗೆ ಬಜೆಟ್‌ ಮಂಡನೆಯ ವೇಳೆ ನಿರ್ಧಾರ ಪ್ರಕಟಿಸಲಾಗುವುದು’ ಎಂದು ಸಚಿವ ಕಾಗೋಡು ತಿಳಿಸಿದರು. ‘ಪಶ್ಚಿಮಘಟ್ಟವನ್ನು ಸೂಕ್ಷ್ಮ ಪ್ರದೇಶ ಎಂದು ಘೋಷಿಸಿರುವುದು ಗಂಭೀರವಾದ ವಿಚಾರವಾಗಿದೆ. ಮಲೆನಾಡು ಪ್ರದೇಶದ ಜನರ ಬದುಕನ್ನು ಈ ಮೂಲಕ ಹಗುರವಾಗಿ ಕಾಣಬಾರದು. ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು’ ಎಂದು ಅವರು ಹೇಳಿದರು.
 
‘ಪಕ್ಷಾಂತರ ಚಾಳಿ ಆಗಿದೆ’
‘ಒಂದು ಪಕ್ಷದಲ್ಲಿ ಇದ್ದುಕೊಂಡು ಸಾಕಷ್ಟು ಲಾಭ ಮಾಡಿಕೊಂಡು ನಂತರ ಮತ್ತೊಂದು ಪಕ್ಷಕ್ಕೆ ಹೋಗುವುದು ಈಗ ಒಂದು ಚಾಳಿ ಆಗಿಬಿಟ್ಟಿದೆ’ ಎಂದು ಕಂದಾಯ ಸಚಿವ ಕಾಗೋಡು ಹೇಳಿದರು.

ಕಾಂಗ್ರೆಸ್‌ ಪಕ್ಷದಿಂದ ಹಲವು ಮುಖಂಡರು ಬಿಜೆಪಿಗೆ ವಲಸೆ ಹೋಗುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜಕೀಯ ಅಧಿಕಾರ ಎಂದರೆ ಅಂಗಡಿಯಲ್ಲಿರುವ ಸಾಮಾನು ಎಂದು ಭಾವಿಸಿರುವುದರಿಂದ ಹೀಗಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.