ADVERTISEMENT

ಭವಿಷ್ಯ ನಿಧಿ ಸದಸ್ಯರ ವಿಶೇಷ ನೋಂದಣಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 14 ಜನವರಿ 2017, 6:40 IST
Last Updated 14 ಜನವರಿ 2017, 6:40 IST
ಶಿವಮೊಗ್ಗ: ₹ 15 ಸಾವಿರಕ್ಕಿಂತ ಕಡಿಮೆ ವೇತನ ಪಡೆಯುವ ಕಾರ್ಮಿಕರ ವಿಶೇಷ ನೋಂದಣಿ ಪ್ರಕ್ರಿಯೆ ಮಾರ್ಚ್‌ 31ರವರೆಗೆ ನಡೆಯಲಿದೆ ಎಂದು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಕೆ.ಸಿ. ಚಂದ್ರಪ್ಪ ಮಾಹಿತಿ ನೀಡಿದರು.
 
ಭವಿಷ್ಯ ನಿಧಿ ಯೋಜನೆಗೆ ಒಳ ಪಡದೇ ಇರುವ ಉದ್ಯೋಗ ನೀಡಿದ ಕಂಪೆನಿಗಳು ಏಪ್ರಿಲ್‌ 2009ರಿಂದ 2016ರ ಅವಧಿ ಒಳಗೆ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಸ್ವಯಂ ಘೋಷಣಾ ಪಟ್ಟಿ ಸಲ್ಲಿಸಬೇಕು. ಅದಕ್ಕಾಗಿ ದುರ್ಗಿ ಗುಡಿ ಮುಖ್ಯರಸ್ತೆಯಲ್ಲಿ ಇರುವ ಭವಿಷ್ಯ ನಿಧಿ ಕಚೇರಿಯಲ್ಲಿ ನೋಂದಣಿ ಮಾಡಬೇಕು. ಈ ಯೋಜನೆ ಒಳಪಡುವ ಸಂಸ್ಥೆಗಳಲ್ಲಿ ಕನಿಷ್ಠ 20 ಕಾರ್ಮಿಕರು ಕೆಲಸ ಮಾಡುತ್ತಿರ ಬೇಕು ಎಂದು ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ವಿವರ ನೀಡಿದರು.
 
ಇಂದಿಗೂ ಹಲವು ಸಂಘ ಸಂಸ್ಥೆಗಳು ಉದ್ಯೋಗಿಗಳಿಗೆ ಭವಿಷ್ಯ ನಿಧಿ ಸವಲತ್ತು ನೀಡಿಲ್ಲ. ಇಂತಹ ಪ್ರಕರಣ ಗಮನಕ್ಕೆ ಬಂದ ಪರಿಣಾಮ ಕೇಂದ್ರ ಸರ್ಕಾರ ವಿಶೇಷ ನೋಂದಣಿ ಪ್ರಕ್ರಿಯೆ ನಡೆಸಲು ಅಧಿಸೂಚನೆ ಹೊರಡಿಸಿದೆ ಎಂದರು.
 
ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲಾ ವ್ಯಾಪ್ತಿಗೆ ಬರುವ ಸರ್ಕಾರಿ, ಅರೆ ಸರ್ಕಾರಿ ಮತ್ತು ಖಾಸಗಿ ಮಾಲೀ ಕತ್ವದ ಉದ್ದಿಮೆಗಳು, ಖಾಸಗಿ, ಅನುದಾನಿತ ಶಾಲಾ–ಕಾಲೇಜುಗಳ ಆಡಳಿತ ಮಂಡಳಿ, ಆಸ್ಪತ್ರೆ, ನರ್ಸಿಂಗ್ ಹೋಂ, ಹೋಟೆಲ್ ಉದ್ಯಮ, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳು, ಲೋಕೋಪಯೋಗಿ ಗುತ್ತಿಗೆದಾ ರರು, ನಿರ್ಮಾಣ ಕ್ಷೇತ್ರದ ಉದ್ದಿಮೆ ಗಳು ಈ ಅಧಿಸೂಚನೆಯ ಲಾಭ ಪಡೆದುಕೊಂಡು ಉದ್ಯೋಗಿಗಳಿಗೆ ಭವಿಷ್ಯ ನಿಧಿ ಸೌಲಭ್ಯ ಕಲ್ಪಿಸಬೇಕು.  ಸ್ವಯಂ ಘೋಷಣೆ ಮಾಡಿದ ಮೇಲೆ ಅಂತಹ ಉದ್ಯೋಗಿಗಳಿಂದ ಶೇ 12ರಷ್ಟು ವೇತನ ಕಡಿತ ಮಾಡ ಬೇಕು. ಅಷ್ಟೇ ಪ್ರಮಾಣದ ಹಣ ಸೇರಿಸಿ ಭವಿಷ್ಯ ನಿಧಿ ಕಚೇರಿಗೆ ಕಟ್ಟ ಬೇಕು. ಅವಧಿ ಮೀರಿ ಜಮಾ ಮಾಡುವ ಭವಿಷ್ಯ ನಿಧಿ ವಂತಿಕೆ ಮೇಲೆ ತುಂಬಬೇಕಾದ ದಂಡ ಪ್ರಮಾಣ ಕೇವಲ ₹ 1ಕ್ಕೆ ಇಳಿಸಲಾಗಿದೆ ಎಂದರು. 
 
ಹೊಸ ಸದಸ್ಯರ ಭವಿಷ್ಯ ನಿಧಿ ನೋಂದಣಿಗಾಗಿ ಸ್ವಯಂ ಘೋಷಣೆ ಮಾಡಿದ 15 ದಿನದ ಒಳಗೆ ಇಲಾಖೆಗೆ ತುಂಬಬೇಕಾದ ಹಣ ತುಂಬದಿದ್ದರೆ ಘೋಷಣೆ ರದ್ದಾಗು ತ್ತದೆ ಎಂದು ವಿವರ ನೀಡಿದರು.
 
ಶಿವಮೊಗ್ಗ ಭವಿಷ್ಯ ನಿಧಿ ಕಛೇರಿ ವ್ಯಾಪ್ತಿಗೆ ದಾವಣಗೆರೆ–ಶಿವಮೊಗ್ಗ ಬರುತ್ತದೆ. ಒಟ್ಟು 1.95 ಲಕ್ಷ ಖಾತೆ ದಾರರಿದ್ದಾರೆ. 1,400ರಿಂದ 1,500 ಸಂಸ್ಥೆಗಳು ನೋಂದಣಿಯಾ ಗಿದೆ. ಪ್ರತಿ ತಿಂಗಳೂ 12 ರಿಂದ 13 ಕೋಟಿ ವಂತಿಕೆ ಸಂಗ್ರಹವಾಗುತ್ತದೆ. ₹ 7.5 ಕೋಟಿಯಿಂದ ₹ 8 ಕೋಟಿ ಹಣ ಮರುಪಾವತಿ ಮಾಡಲಾಗುತ್ತಿವೆ. 26,445  ಪಿಂಚಣಿದಾರರಿಗೆ ಪ್ರತಿ ತಿಂಗಳು ₹ 4 ಕೋಟಿ ಪಾವತಿ ಸಲಾಗುತ್ತಿದೆ ಎಂದು ವಿವರಿಸಿದರು.
 
ಪತ್ರಿಕಾಗೋಷ್ಠಿಯಲ್ಲಿ ಸಹಾಯಕ ಭವಿಷ್ಯ ನಿಧಿ ಆಯುಕ್ತ ಎ.ಬಿನ್. ವಿಶ್ವನಾಥ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.