ADVERTISEMENT

ಮೂರು ಕ್ಷೇತ್ರಗಳಲ್ಲಿ ಅಚ್ಚರಿ ಆಯ್ಕೆ

ಕಾಂಗ್ರೆಸ್‌ ಪಟ್ಟಿ: ಸಾಗರ, ತೀರ್ಥಹಳ್ಳಿ, ಭದ್ರಾವತಿ, ಶಿವಮೊಗ್ಗ ನಗರ ಕ್ಷೇತ್ರಕ್ಕೆ ಅವೇ ಮುಖಗಳು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 11:12 IST
Last Updated 16 ಏಪ್ರಿಲ್ 2018, 11:12 IST

ಶಿವಮೊಗ್ಗ: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಗೆ ಕೊನೆಗೂ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ.

ನಿರೀಕ್ಷೆಯಂತೆ ಸಾಗರಕ್ಕೆ ಕಾಗೋಡು ತಿಮ್ಮಪ್ಪ, ತೀರ್ಥಹಳ್ಳಿಗೆ ಕಿಮ್ಮನೆ ರತ್ನಾಕರ, ಭದ್ರಾವತಿಗೆ ಬಿ.ಕೆ. ಸಂಗಮೇಶ್ವರ, ಶಿವಮೊಗ್ಗ ನಗರ ಕ್ಷೇತ್ರಕ್ಕೆ ಕೆ.ಬಿ. ಪ್ರಸನ್ನಕುಮಾರ್ ಅವರ ಹೆಸರು ಪ್ರಕಟವಾಗಿದೆ. ಸೊರಬ, ಶಿವಮೊಗ್ಗ ಗ್ರಾಮಾಂತರ ಹಾಗೂ ಶಿಕಾರಿಪುರದಲ್ಲಿ ಈ ಬಾರಿ ಹೊಸ ಮುಖಗಳಿಗೆ ಅವಕಾಶ ನೀಡುವ ಮೂಲಕ ಅಚ್ಚರಿ ಮೂಡಿಸಿದೆ.

ಕಳೆದ ಬಾರಿ ಇದೇ ಕೊನೆಯ ಚುನಾವಣೆ ಎಂದು ಘೋಷಿಸಿದ್ದ ಕಾಗೋಡು ತಿಮ್ಮಪ್ಪ ಬದಲಾದ ಪರಿಸ್ಥಿತಿಯಲ್ಲಿ ಮತ್ತೆ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಹಾಗಾಗಿ, ನಿರೀಕ್ಷೆಯಂತೆಯೇ ಅವರಿಗೆ ಹೈಕಮಾಂಡ್ ಮತ್ತೊಂದು ಅವಕಾಶ ನೀಡಿದೆ.

ADVERTISEMENT

ಪ್ರಸನ್ನಕುಮಾರ್ ಬದಲು ಮಾಲತೇಶ್: ಶಿಕಾರಿಪುರದಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಆರಂಭದಲ್ಲಿ ಚಿಂತನೆ ನಡೆಸಿತ್ತು. ಆದರೆ, ಸ್ಥಳೀಯ ಮುಖಂಡರಿಂದ ವಿರೋಧ ವ್ಯಕ್ತವಾದ ಕಾರಣ ಸ್ಥಳೀಯರಿಗೆ ಟಿಕೆಟ್ ನೀಡಲು ನಿರ್ಧರಿಸಿತ್ತು. ಅದರಂತೆ ಮೂರು ದಶಕ ಕಾಂಗ್ರೆಸ್‌ಗೆ ದುಡಿದಿರುವ ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ, ಕುರುಬ ಸಮಾಜದ ಮುಖಂಡ ಜಿ.ಬಿ. ಮಾಲತೇಶ್ ಅವರಿಗೆ ಅವಕಾಶ ನೀಡಲಾಗಿದೆ.

ಅಚ್ಚರಿಯ ಆಯ್ಕೆ, ಬಂಡಾಯದ ಭೀತಿ: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮಾಜಿ ಶಾಸಕ ಕರಿಯಣ್ಣ ಅವರ ಪುತ್ರ ಡಾ.ಶ್ರೀನಿವಾಸ್‌ ಅವರಿಗೆ ಟಿಕೆಟ್ ನೀಡಲಾಗಿದೆ.

ನಿವೃತ್ತ ಅಧಿಕಾರಿ ಬಲದೇವಕೃಷ್ಣ, ಹಿರಿಯ ಮುಖಂಡ ರವಿಕುಮಾರ್ ಅವರು ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸಿದ್ದರು. ಕಳೆದ ಮೂರು ಬಾರಿ ಟಿಕೆಟ್‌ಗೆ ಪ್ರಯತ್ನಿಸಿ ಕೊನೆಯ ಹಂತದಲ್ಲಿ ವಂಚಿತರಾಗಿದ್ದರು. ಭೋವಿ ಸಮಾಜದ ಅವರಿಗೆ ಈ ಬಾರಿ ಟಿಕೆಟ್ ಖಚಿತ ಎಂದು ಪಕ್ಷದ ಮೂಲಗಳೇ ಖಚಿತಪಡಿಸಿದ್ದವು. ಆದರೆ, ಎಂದೂ ರಾಜಕೀಯದಲ್ಲಿ ಗುರುತಿಸಿಕೊಳ್ಳದ, ವೈದ್ಯ ವೃತ್ತಿಯಲ್ಲಿರುವ ಡಾ.ಶ್ರೀನಿವಾಸ್‌ ಅವರಿಗೆ ಅವಕಾಶ ನೀಡಲಾಗಿದೆ. ಹಾಗಾಗಿ, ರವಿಕುಮಾರ್ ಈ ಬಾರಿ ಬಂಡಾಯ ಏಳುವ ಸಾಧ್ಯತೆ ಇದೆ.

ರಾಜು ತಲ್ಲೂರ್‌ಗೆ ಸೊರಬ: ಕುಮಾರ್ ಬಂಗಾರಪ್ಪ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಂತರ ಸೊರಬ ಕ್ಷೇತ್ರದಲ್ಲಿ ಪಕ್ಷ ಪ್ರಬಲ ನಾಯಕತ್ವದ ಕೊರತೆ ಎದುರಿಸುತ್ತಿತ್ತು. ಮೊದಲು ಬಿಜೆಪಿಯಲ್ಲಿದ್ದು ಈಚೆಗಷ್ಟೇ ಕಾಂಗ್ರೆಸ್ ಸೇರಿದ ರಾಜು ತಲ್ಲೂರು ಅವರಿಗೆ ಟಿಕೆಟ್ ಘೋಷಿಸಿದೆ. ಅವರ ಸ್ಪರ್ಧೆ ಸಹೋದರರ ಕಾಳಗದ ಮಧ್ಯೆ ಪಕ್ಷಕ್ಕೆ ಎಷ್ಟು ಲಾಭವಾಗಬಹುದು ಎಂಬ ಲೆಕ್ಕಾಚಾರ ಸೊರಬದಲ್ಲಿ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.