ADVERTISEMENT

ಯಶಸ್ವಿ ಸಿನಿಮಾಗಿಂತ ಒಳ್ಳೆಯ ಸಿನಿಮಾ ಮುಖ್ಯ

ಚಲನಚಿತ್ರ ನಿರ್ಮಾಣ, ರಸಗ್ರಹಣ ಶಿಬಿರದಲ್ಲಿ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅಭಿಮತ

​ಪ್ರಜಾವಾಣಿ ವಾರ್ತೆ
Published 25 ಮೇ 2017, 6:13 IST
Last Updated 25 ಮೇ 2017, 6:13 IST
ಶಿಕಾರಿಪುರದ ಗುಡಿ ಸಾಂಸ್ಕೃತಿಕ ಕೇಂದ್ರದಲ್ಲಿ ಬುಧವಾರ ನಡೆದ ಚಲನಚಿತ್ರ ನಿರ್ಮಾಣ ಹಾಗೂ ರಸಗ್ರಹಣ ಶಿಬಿರವನ್ನು ಶಾಸಕ ಬಿ.ವೈ. ರಾಘವೇಂದ್ರ ಉದ್ಘಾಟಿಸಿದರು. ನಿರ್ದೇಶಕ ಗಿರೀಶ್‌ ಕಾಸರವಳ್ಳಿ, ಜೆಡಿಎಸ್‌ ಮುಖಂಡ ಎಚ್‌.ಟಿ. ಬಳಿಗಾರ್‌ ಇದ್ದರು.
ಶಿಕಾರಿಪುರದ ಗುಡಿ ಸಾಂಸ್ಕೃತಿಕ ಕೇಂದ್ರದಲ್ಲಿ ಬುಧವಾರ ನಡೆದ ಚಲನಚಿತ್ರ ನಿರ್ಮಾಣ ಹಾಗೂ ರಸಗ್ರಹಣ ಶಿಬಿರವನ್ನು ಶಾಸಕ ಬಿ.ವೈ. ರಾಘವೇಂದ್ರ ಉದ್ಘಾಟಿಸಿದರು. ನಿರ್ದೇಶಕ ಗಿರೀಶ್‌ ಕಾಸರವಳ್ಳಿ, ಜೆಡಿಎಸ್‌ ಮುಖಂಡ ಎಚ್‌.ಟಿ. ಬಳಿಗಾರ್‌ ಇದ್ದರು.   

ಶಿಕಾರಿಪುರ: ‘ಸಿನಿಮಾ ನಿರ್ಮಾಣವನ್ನು ಒಂದು ಕಲೆಯನ್ನಾಗಿ ನೋಡುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಚಲನಚಿತ್ರ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಸಲಹೆ ನೀಡಿದರು.

ಪಟ್ಟಣದ ಗುಡಿ ಸಾಂಸ್ಕೃತಿಕ ಕೇಂದ್ರದಲ್ಲಿ ಬುಧವಾರ ಗುಡಿ ಸಾಂಸ್ಕೃತಿಕ ಕೇಂದ್ರ ಆಯೋಜಿಸಿದ್ದ ಚಲನಚಿತ್ರ ನಿರ್ಮಾಣ, ನಿರ್ದೇಶನ ಹಾಗೂ ರಸಗ್ರಹಣ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘ಸಿನಿಮಾವನ್ನು ಒಂದು ಕಲೆಯಾಗಿ ನಿರ್ಮಾಣ ಮಾಡುವುದು ಯಾರಿಗೂ ಬೇಕಾಗಿಲ್ಲ. ಜನಪ್ರಿಯ ಸಿನಿಮಾ ಮಾಡು ವುದು ಎಲ್ಲರ ಉದ್ದೇಶವಾಗಿದೆ. ಬೆಂಗಳೂರಿನಲ್ಲಿ ಸಿನಿಮಾ ನಿರ್ಮಾಣ ತರಬೇತಿ ಕೇಂದ್ರಗಳು ಆರಂಭ ಗೊಂಡಿದ್ದು, ಶಿಬಿರಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಪಡೆದು ಕೊಳ್ಳುತ್ತಿವೆ. ಆದರೆ ಸಮರ್ಪಕ ತರಬೇತಿ ನೀಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಈ ಶಿಬಿರದಲ್ಲಿ ಯಶಸ್ವಿ ಸಿನಿಮಾ ಮಾಡುವುದನ್ನು ಹೇಳಿಕೊಡುವ ಬದಲು, ಒಳ್ಳೆಯ ಸಿನಿಮಾ ನಿರ್ಮಾಣ ಮಾಡುವ ಬಗ್ಗೆ ತರಬೇತಿ ನೀಡುತ್ತೇವೆ. ಒಳ್ಳೆಯ ಸಿನಿಮಾ ನಿರ್ದೇಶಕರಾಗುವ ಅವಕಾಶವನ್ನು ಈ ಶಿಬಿರ ನೀಡಲಿದೆ. ಇಕ್ಬಾಲ್ ಅಹಮದ್ ಗುಡಿ ಸಾಂಸ್ಕೃತಿಕ ಕೇಂದ್ರದ ಮೂಲಕ ಒಂದು ಅರ್ಥಗರ್ಭಿತ ಕಲಾ ಚಟುವಟಿಕೆ ನಡೆಸುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ಶಾಸಕ ಬಿ.ವೈ.ರಾಘವೇಂದ್ರ ಮಾತನಾಡಿ, ‘ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ಕ್ಷೇತ್ರಕ್ಕೆ ಶಿಕಾರಿಪುರ ತಾಲ್ಲೂಕು ಹೆಚ್ಚು ಕೊಡುಗೆ ನೀಡಿದೆ. ವಾಣಿಜ್ಯ ಉದ್ದೇಶಕ್ಕಾಗಿ ಸಿನಿಮಾ ನಿರ್ದೇಶನ ಮಾಡದ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರನ್ನು ಈ ಶಿಬಿರಕ್ಕೆ ಕರೆಸಿ ತರಬೇತಿ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಗುಡಿ ಸಾಂಸ್ಕೃತಿಕ ಕೇಂದ್ರ ನಮ್ಮೆಲ್ಲರ ಆಸ್ತಿಯಾಗಿದೆ. ಈ ಕೇಂದ್ರದ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ’ ಎಂದು ಭರವಸೆ ನೀಡಿದರು. 

ಜೆಡಿಎಸ್ ಮುಖಂಡ ಎಚ್‌.ಟಿ. ಬಳಿಗಾರ್‌ ಮಾತನಾಡಿ, ‘ಸಮಾಜವನ್ನು ತಿದ್ದುವ ಚಲನಚಿತ್ರಗಳನ್ನು ಗಿರೀಶ್‌ ಕಾಸರವಳ್ಳಿ ನೀಡಿದ್ದಾರೆ. ಈ ಶಿಬಿರದಲ್ಲಿ ಗಿರೀಶ್‌ ಕಾಸರವಳ್ಳಿ ಸೇರಿದಂತೆ ಹಲವು ಹಿರಿಯರು ನೀಡುವ ತರಬೇತಿಯನ್ನು ಶಿಬಿರಾರ್ಥಿಗಳು ಸದ್ಬಳಕೆ ಮಾಡಿಕೊಳ್ಳ ಬೇಕು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಗುಡಿ ಸಾಂಸ್ಕೃತಿಕ ಕೇಂದ್ರ ಸಂಸ್ಥಾಪಕ ಇಕ್ಬಾಲ್‌ ಅಹಮದ್‌ ಮಾತನಾಡಿ, ‘ಸಿನಿಮಾ ನಮ್ಮಲ್ಲಿರುವ ಸೂಕ್ಷ್ಮಪ್ರಜ್ಞೆಯನ್ನು ಎಚ್ಚರಿಸುವ ಮಾಧ್ಯಮವಾಗಿದೆ. ಆದರೆ, ಬಂಡವಾಳ ಹಾಕಿ ಹೆಚ್ಚು ಲಾಭ ಪಡೆಯಬೇಕು ಎಂಬ ಆಸೆ ಸಿನಿಮಾ ಮಾಧ್ಯಮದಲ್ಲಿ ಹೆಚ್ಚಾಗಿದೆ. ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಲಾಭದ ಅಪೇಕ್ಷೆ ಇಲ್ಲದೇ ಸಿನಿಮಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ಪ್ರಾಸ್ತಾವಿಕವಾಗಿ ಗುಡಿ ಸಾಂಸ್ಕೃತಿಕ ಕೇಂದ್ರದ ಸಂಚಾಲಕ ಕೆ.ಎಸ್‌. ಹುಚ್ಚರಾಯಪ್ಪ ಮಾತನಾಡಿದರು. ಚಲನಚಿತ್ರ ನಿರ್ದೇಶಕರಾದ ರಾಮ ದಾಸ್‌ ನಾಯ್ಡು, ವೈಭವ್‌ ಬಸವರಾಜ್‌, ಕುರಿಬಾಂಡ್‌ ಕಾರ್ಯಕ್ರಮ ನಿರ್ದೇಶಕ ಇಸ್ಮಾಯಿಲ್‌ ಅಂಬ್ಲಿಗೊಳ್ಳ, ಟಿಎಪಿಸಿಎಂಎಸ್‌ ಅಧ್ಯಕ್ಷ ಭದ್ರಾಪುರ ಹಾಲಪ್ಪ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌.ಪಿ. ನಾಗರಾಜ್‌ಗೌಡ್ರು, ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ಚನ್ನವೀರಪ್ಪ, ಅವರೂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.