ADVERTISEMENT

ಯುವ ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ

​ಪ್ರಜಾವಾಣಿ ವಾರ್ತೆ
Published 19 ಮೇ 2017, 5:10 IST
Last Updated 19 ಮೇ 2017, 5:10 IST

ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್‌ ಯುವ ಘಟಕದ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯ ಮತ ಎಣಿಕೆ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆಯಿತು.
ಪಿಎಲ್‌ಡಿ ಬ್ಯಾಂಕ್ ಕಚೇರಿ ರಸ್ತೆಯ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿ  ಗುರುವಾರ ಮತ ಎಣಿಕೆ ಆಯೋಜಿಸಲಾಗಿತ್ತು.

ಚುನಾವಣಾ ಅಕ್ರಮ ನಡೆದಿದೆ ಎಂದು ಆರೋಪಿಸಿ ಒಂದು ಗುಂಪು ಕಚೇರಿ ಮುಂಭಾಗ ಧರಣಿ ನಡೆಸಿತು. ಈ ವಿಚಾರ ಯುವ ಕಾಂಗ್ರೆಸ್‌ನ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ಮತ ಎಣಿಕೆಯಲ್ಲಿ ಮುಖಂಡ ಎಸ್.ರಂಗನಾಥ್ ಬಣದಲ್ಲಿ ಗುರುತಿಸಿಕೊಂಡಿದ್ದ ಗಿರೀಶ್, ನಿಖಿಲ್ ಹಾಗೂ ನಿತಿನ್ ಎಂಬುವರು ವಿಜೇತರಾದರು. ಉಳಿದ ಹುದ್ದೆಗಳ ಮತ ಎಣಿಕೆ ನಡೆಯುತ್ತಿದ್ದ ವೇಳೆ ಮತ್ತೊಂದು ಬಣದ ಕಾರ್ಯಕರ್ತರು ಫಲಿತಾಂಶದ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. 

ADVERTISEMENT

ವಿಜೇತ ಗುಂಪು ಕಚೇರಿ ಆವರಣದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ನಡೆಸಿತು ಈ ವೇಳೆ ಎರಡೂ  ಬಣಗಳ ನೂರಾರು ಕಾರ್ಯಕರ್ತರು ಜಮಾಯಿಸಿದರು. ಮಾತಿನ ಚಕಮಕಿ ನಡೆಸಿದರು. ಕೆಲವರು ಕೈ ಕೈ ಮಿಲಾಯಿಸಿದರು.

ಈ ಬಾರಿ ಯುವ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆ ಚುನಾವಣೆ ಸಾಕಷ್ಟು ಪೈಪೋಟಿಗೆ ದಾರಿ ಮಾಡಿಕೊಟ್ಟಿತ್ತು. ಪಕ್ಷದ ಪ್ರಭಾವಿ ಮುಖಂಡರ ಪುತ್ರರು ಅಖಾಡದಲ್ಲಿದ್ದರು. 
ಕಳೆದ ಎರಡು ದಿನಗಳ ಹಿಂದೆ ಮತದಾನ ನಡೆದಿತ್ತು.

ಕೊನೆಗೆ ಸ್ಥಳದಲ್ಲಿದ್ದ ಪೊಲೀಸರು ಎರಡೂ ಗುಂಪುಗಳ ಚದುರಿಸಿ, ಪರಿಸ್ಥಿತಿ ತಿಳಿಗೊಳಿಸಿದರು. ಉದ್ವಿಗ್ನ ಪರಿಸ್ಥಿತಿ ಕಾರಣ ಕಾಂಗ್ರೆಸ್‌ ಕಚೇರಿ ಮುಂದಿನ ರಸ್ತೆಯಲ್ಲಿ ಸಂಜೆಯವರೆಗೂ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಕೆಲವು ಸಮಯ ರಸ್ತೆಯ ಎರಡು ಕಡೆ ಬ್ಯಾರಿಕೇಡ್ ಹಾಕಿ ಸಂಚಾರ ನಿರ್ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.