ADVERTISEMENT

ಲಿಂಗನಮಕ್ಕಿ: ಕ್ರೆಸ್ಟ್‌ಗೇಟ್ ಮಟ್ಟ ತಲುಪಿದ ನೀರು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2017, 10:31 IST
Last Updated 13 ಸೆಪ್ಟೆಂಬರ್ 2017, 10:31 IST
ಕಾರ್ಗಲ್ ಸಮೀಪದಲ್ಲಿರುವ ಲಿಂಗನಮಕ್ಕಿ ಅಣೆಕಟ್ಟೆಯ ಹಿನ್ನೀರು
ಕಾರ್ಗಲ್ ಸಮೀಪದಲ್ಲಿರುವ ಲಿಂಗನಮಕ್ಕಿ ಅಣೆಕಟ್ಟೆಯ ಹಿನ್ನೀರು   

ಕಾರ್ಗಲ್: ರಾಜ್ಯಕ್ಕೆ ಬೆಳಕು ನೀಡುವಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವ ಲಿಂಗನಮಕ್ಕಿ ಜಲಾಶಯದಲ್ಲಿ ಪ್ರಸಕ್ತ ಸಾಲಿನಲ್ಲಿ (ಸಮುದ್ರ ಮಟ್ಟದಿಂದ 1795 ಅಡಿ) ನೀರು ಕ್ರೆಸ್ಟ್‌ಗೇಟ್‌ ಮಟ್ಟಕ್ಕೆ ಸಂಗ್ರಹವಾಗಿದೆ ಎಂದು ಕೆಪಿಸಿ ಮುಖ್ಯ ಎಂಜಿನಿಯರ್ ಸಿ.ಎಂ. ದಿವಾಕರ್ ಮಾಹಿತಿ ನೀಡಿದ್ದಾರೆ.

ಕ್ರೆಸ್ಟ್ ಗೇಟ್ ಮಟ್ಟವನ್ನು ಈ ಹಿಂದಿನಿಂದಲೂ ‘ಬೆಡ್ ಲೆವೆಲ್’ ಎಂದು ಈ ಭಾಗದ ಉದ್ಯೋಗಿಗಳು ಆಡುಭಾಷೆಯಲ್ಲಿ ಕರೆಯುತ್ತಾರೆ. ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ಒಟ್ಟು ನೀರಿನ ಮಟ್ಟದಲ್ಲಿ ಇದರಿಂದ ಶೇ 50ರಷ್ಟು ಭರ್ತಿಯಾದಂತೆ ಆಗಿದೆ.

ಅಣೆಕಟ್ಟೆಯ 1795 ಅಡಿ ಮಟ್ಟದವರೆಗೆ ಕಾಂಕ್ರೀಟ್ ತೂಬುಗಳನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿಂದ ಮೇಲ್ಭಾಗದವರೆಗೆ ಸುಮಾರು 24 ಅಡಿ ಎತ್ತರದ ಉಕ್ಕಿನ 11 ಕ್ರೆಸ್ಟ್ ಗೇಟ್‌ಗಳನ್ನು ಅಳವಡಿಸಲಾಗಿದೆ. ಕ್ರೆಸ್ಟ್ ಗೇಟ್ ಕೆಳಮಟ್ಟದಿಂದ ಗರಿಷ್ಠ ಮಟ್ಟವಾದ 1819 ಅಡಿಯವರೆಗೆ ಜಲಾಶಯವು ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. 156 ಟಿ.ಎಂ.ಸಿ ಅಡಿ ನೀರು ಸಂಗ್ರಹದ ಸಾಮರ್ಥ್ಯವಿರುವ ಅಣೆಕಟ್ಟೆಯಲ್ಲಿ ಹಾಲಿ 78 ಟಿ.ಎಂ.ಸಿ ಅಡಿ ನೀರು ಸಂಗ್ರಹವಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕಳೆದ ಸಾಲಿನಲ್ಲಿ ಆಗಿರುವ ಮಳೆಗಿಂತ ಈ ಬಾರಿ ಜಲಾನಯನ ಪ್ರದೇಶದಲ್ಲಿ 300 ಮಿ.ಮೀ. ಹೆಚ್ಚು ಮಳೆ ಸುರಿದಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯ ನಿರೀಕ್ಷೆಯಿದ್ದು, ಜಲಶಾಯ ಭರ್ತಿಯಾಗುವ ಆಶಾಭಾವನೆಯನ್ನು ಕೆಪಿಸಿ ಕಾರ್ಯಪಾಲಕ ಎಂಜಿನಿಯರ್ ಶಿವಕುಮಾರ್ ವ್ಯಕ್ತಪಡಿಸಿದ್ದಾರೆ.

ADVERTISEMENT

ಬೆಂಗಳೂರಿನಲ್ಲಿರುವ ವಿದ್ಯುತ್ ವಿತರಣಾ ಜಾಲದ ಕೋರಿಕೆಯಂತೆ ಶರಾವತಿ ಯೋಜನಾ ಪ್ರದೇಶದ ಜಲವಿದ್ಯುತ್ ಘಟಕಗಳಾದ ಲಿಂಗನಮಕ್ಕಿ, ಮಹಾತ್ಮ ಗಾಂಧಿ, ಗೇರುಸೊಪ್ಪ ಟೇಲ್ ರೇಸ್ ಮತ್ತು ಶರಾವತಿ ಜಲವಿದ್ಯುದಾಗಾರಗಳಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.

ಈ ಹಿಂದಿನ ವಿದ್ಯುತ್ ಬೇಡಿಕೆಗಳ ಅಂಕಿಅಂಶಗಳಿಗೆ ಹೋಲಿಸಿಕೊಂಡಲ್ಲಿ ಪ್ರಸಕ್ತ ಸಾಲಿನಲ್ಲಿ ಜಲವಿದ್ಯುತ್ ಉತ್ಪಾದನಾ ಬೇಡಿಕೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಲಿಂಗನಮಕ್ಕಿ ಜಲಾಶಯದ ನೀರು ಕ್ರೆಸ್ಟ್‌ಗೇಟ್ ಮಟ್ಟ ತಲುಪಲು ಸಾಧ್ಯವಾಗಿದೆ ಎಂದು ಕೆಪಿಸಿ ವಿದ್ಯುತ್ ವಿಭಾಗದ ಮುಖ್ಯ ಎಂಜಿನಿಯರ್ ರವಿಚಂದ್ರ ವೈ. ಶಿರಾಲಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.