ADVERTISEMENT

ವಿದ್ಯುತ್‌ ಸಮಸ್ಯೆ ನಿವಾರಣೆ: ಭರವಸೆ

ಸೊರಬ: ಜೇಡಗೇರಿ ಈಗ ‘ವಿದ್ಯುತ್ ಬಾಕಿ ಮುಕ್ತ ಗ್ರಾಮ’

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 5:22 IST
Last Updated 11 ಜನವರಿ 2017, 5:22 IST

ಸೊರಬ: ‘ಗ್ರಾಮೀಣ ಭಾಗದಲ್ಲಿ ರೈತರು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆ ನಿವಾರಿಸಲು ಸರ್ಕಾರ ಹಾಗೂ ಮೆಸ್ಕಾಂ ಶ್ರಮಿಸುತ್ತಿದೆ’ ಎಂದು ಮೆಸ್ಕಾಂ ಎಂಜಿನಿಯರ್ ವಿನಯ್ ಕುಮಾರ್ ಹೇಳಿದರು.

ತಾಲ್ಲೂಕಿನ ಜೇಡಗೇರಿ ಗ್ರಾಮದಲ್ಲಿ ಗ್ರಾಮ ಸಮಿತಿ ಮಂಗಳವಾರ ಹಮ್ಮಿಕೊಂಡಿದ್ದ ಮೆಸ್ಕಾಂ ವಿದ್ಯುತ್ ಬಾಕಿ ಮುಕ್ತ ಗ್ರಾಮ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗ್ರಾಮೀಣ ಭಾಗದಲ್ಲಿ ಅನೇಕರು ವಿದ್ಯುತ್ ಶುಲ್ಕವನ್ನು ಬಾಕಿ ಇಟ್ಟುಕೊಂಡಿದ್ದಾರೆ. ಆದರೆ, ಜೇಡಗೇರಿ ಗ್ರಾಮದವರು ಎಲ್ಲ ವಿದ್ಯುತ್ ಬಾಕಿಯನ್ನು ಮರು
ಪಾವತಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಈ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆಯನ್ನು ನಿವಾರಿಸಲು ನಿಗಮವು ಪ್ರಾಮಾಣಿಕ ಪ್ರಯತ್ನ ನಡೆಸಲಿದೆ’ ಎಂದು ಅವರು ತಿಳಿಸಿದರು.

ಗ್ರಾಮದ ಮುಖಂಡ ತಂಡಿಗೆ ರಂಗಪ್ಪ ಮಾತನಾಡಿ, ‘ಜೇಡಗೇರಿ ಗ್ರಾಮದಲ್ಲಿ ಎಲ್ಲರೂ ಒಗ್ಗೂಡಿ ಮೆಸ್ಕಾಂನ ಶುಲ್ಕವನ್ನು ಸಂಪೂರ್ಣ ಮರುಪಾವತಿ ಮಾಡುವ ಮೂಲಕ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಬೇಡಿಕೆ ಇಟ್ಟಿದ್ದೇವೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ವೇಳೆ ವಿದ್ಯುತ್‌ ಅಗತ್ಯವಿದೆ. ಬರಗಾಲವೂ ಇರುವುದರಿಂದ ದೀರ್ಘಾವಧಿ ಬೆಳೆಗಳನ್ನು ಉಳಿಸಿಕೊಳ್ಳಲು ಪಂಪ್‌ಸೆಟ್‌ಗಳಿಗೆ ವಿದ್ಯುತ್ ಅಗತ್ಯವಾಗಿದೆ’ ಎಂದು ಹೇಳಿದರು.

ಇತಿಹಾಸ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ಮಾತನಾಡಿ, ‘ಮೆಸ್ಕಾಂ ಅಧಿಕಾರಿಗಳನ್ನು ಮನೆ ಬಾಗಿಲಿಗೆ ಕರೆದು, ವಿದ್ಯುತ್ ಬಾಕಿಯನ್ನು ಮರು ಪಾವತಿ ಮಾಡುತ್ತಿರುವುದು ಇತರ ಗ್ರಾಮಗಳಿಗೆ ಮಾದರಿಯಾಗಿದೆ. ಸೌಲಭ್ಯ ಕೇಳುವುದರ ಜತೆಗೆ ನಿಗಮಗಳಿಗೆ ಸ್ಪಂದಿಸುವ ಮನೋಭಾವ ಎಲ್ಲ ನಾಗರಿಕರಲ್ಲಿ ಮೂಡಿದಾಗ ನೆಮ್ಮದಿ
ಯಿಂದ ಸಹಬಾಳ್ವೆ ನಡೆಸಲು ಸಾಧ್ಯವಿದೆ’ ಎಂದು ಹೇಳಿದರು.

ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದ ಗೌಡ ಜೇಡಗೇರಿ ಮಾತನಾಡಿ, ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಗ್ರಾಮಸ್ಥರೆಲ್ಲ ಒಗ್ಗೂಡಿ ವಿದ್ಯುತ್ ಬಿಲ್‌ನ್ನು ಪ್ರತಿ ತಿಂಗಳ ಮೊದಲ ಮಂಗಳವಾರ ಪಾವತಿಸುವ ಮೂಲಕ ವಿದ್ಯುತ್ ಬಾಕಿ ಮುಕ್ತ ಗ್ರಾಮವನ್ನಾಗಿ ಮಾಡಲಾಗುತ್ತಿದೆ. ಇಲಾಖೆಯವರು ನಿಗದಿ ಪಡಿಸಿದ ದಿನದಂದು ಗ್ರಾಮದ ದೇವತೆ ಮಾರಿಕಾಂಬಾ ಸನ್ನಿಧಿಯಲ್ಲಿ ವಿದ್ಯುತ್ ಶುಲ್ಕವನ್ನು ಸಂಗ್ರಹಿಸಬೇಕು’ ಎಂದು ವಿನಂತಿಸಿದರು.

ಗ್ರಾಮ ಸಮಿತಿ ಅಧ್ಯಕ್ಷ ನೇಮಪ್ಪ, ಕಾರ್ಯದರ್ಶಿ ಮೇಘರಾಜ, ಲಕ್ಷ್ಮಣಪ್ಪ, ಕುಮಾರ, ಗಣಪತಿ, ಆನಂದಪ್ಪ, ಚಂದ್ರಶೇಖರ ಗೌಡ, ಹೇಮಪ್ಪ, ಕಾಳಪ್ಪ, ವೀರಭದ್ರಗೌಡ, ನಿಂಗಪ್ಪ, ಮೆಸ್ಕಾಂ ಇಲಾಖೆಯ ದಿಲೀಪ್, ಗುರುಪಾದಯ್ಯ, ಸಿದ್ದೇಶ್, ಅನೀಲ್‌, ವೀರೇಶ್ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.