ADVERTISEMENT

‘ವ್ಯಾಪಾರ ಬಂದ್‌: ತನಿಖೆ ನಡೆಸಿ’

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 5:46 IST
Last Updated 24 ಮಾರ್ಚ್ 2017, 5:46 IST

ತೀರ್ಥಹಳ್ಳಿ: ‘ಮಾರ್ಚ್‌ ತಿಂಗಳಿನಲ್ಲಿ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸುವುದರ ಹಿಂದೆ ಬಹುದೊಡ್ಡ ಷಡ್ಯಂತ್ರ ಅಡಗಿದೆ. ಈ ಬಗ್ಗೆ ಮಾರುಕಟ್ಟೆ ಸಚಿವಾಲಯ ಸೂಕ್ತ ತನಿಖೆ ನಡೆಸಬೇಕು’ ಎಂದು ಮಲೆನಾಡು ಸಂಘರ್ಷ ಕ್ರಿಯಾ ಸಮಿತಿ ಸಂಚಾಲಕ ನೆಂಪೆ ದೇವರಾಜ್‌ ಆಗ್ರಹಿಸಿದ್ದಾರೆ.

‘ದೇಶದ ಯಾವುದೇ ಎಪಿಎಂಸಿಗಳಲ್ಲಿ ಇಲ್ಲದ ಹೊಸ ಕಾನೂನನ್ನು ಪರಿಚಯಿಸಿರುವ ಶಿವಮೊಗ್ಗ ಮಂಡಿ ವರ್ತಕರು ಮತ್ತು ಎಪಿಎಂಸಿಯ ದುಷ್ಟಕೂಟ ನಿಧಾನವಾಗಿ ರೈತರನ್ನು ಪಾತಾಳಕ್ಕೆ ಸೇರಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.

‘ಕೆಲವು ರಾಜಕಾರಣಿಗಳು ಮಂಡಿ ಮಾಲೀಕರ ಮರ್ಜಿಗೆ ಒಳಗಾಗಿ ಮಾರುಕಟ್ಟೆಯನ್ನು ನಿಯಂತ್ರಣಕ್ಕೆ ಪಡೆದು ತಮ್ಮ ಇಚ್ಛೆಯಂತೆ ರೈತರನ್ನು ಗಮನಕ್ಕೆ ತೆಗೆದುಕೊಳ್ಳದೇ ವರ್ತಿಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಹಣಕಾಸಿನ ನೆರವು ನೀಡುವ ಮೂಲಕ ಮಂಡಿ ಮಾಲೀಕರು ಮಾರುಕಟ್ಟೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ’ ಎಂದು ಅವರು  ದೂರಿದ್ದಾರೆ.

‘ನೆಲ ಕಚ್ಚಿದ್ದ ಅಡಿಕೆ ಬೆಲೆ ಈಗ ಚೇತರಿಸಿಕೊಳ್ಳುತ್ತಿದೆ. ಇಂಥ ಸಂದರ್ಭದಲ್ಲಿ ಅಡಿಕೆ ಮಾರಾಟ ಮಾಡಲು ರೈತರು ಮುಂದಾದರೆ ಮಾರ್ಚ್‌ ತಿಂಗಳ ಲೆಕ್ಕ ಪತ್ರದ ಆಖೈರು ನೆಪವೊಡ್ಡಿ ಮಂಡಿ ವ್ಯಾಪಾರವನ್ನು ಸ್ಥಗಿತಗೊಳಿಸುತ್ತಾರೆ.

ಈ ಹಿನ್ನೆಲೆಯಲ್ಲಿ ರೈತರ ಬೆಳೆಯನ್ನು ಕಡಿಮೆ ಬೆಲೆಗೆ ಕೊಳ್ಳಲು ಸಂಚು ರೂಪಿಸಿಸುತ್ತಾರೆ. ಆದರೆ, ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಕೊಬ್ಬರಿ ಮಾರುಕಟ್ಟೆಯಾಗಿರುವ ತಿಪಟೂರಿನಲ್ಲಿ ಯಾವುದೇ ಕಾರಣಕ್ಕೂ ವಹಿವಾಟನ್ನು ನಿಲ್ಲಿಸುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.

‘ಮಾರ್ಚ್‌ ತಿಂಗಳಲ್ಲಿ ಸೊಸೈಟಿ, ಬ್ಯಾಂಕ್‌ ಸಾಲ ಮರುಪಾವತಿ ಮಾಡಬೇಕು ಎಂಬ ಉದ್ದೇಶದಿಂದ ಫೆಬ್ರುವರಿ ತಿಂಗಳಲ್ಲಿ ಅಡಿಕೆಯನ್ನು ಅನಿವಾರ್ಯ
ವಾಗಿ ಕಡಿಮೆ ಬೆಲೆಗೆ ರೈತರು ಮಾರಬೇಕಾಗಿದೆ. ದೊಡ್ಡ ವ್ಯವಹಾರ ನಡೆಸುವ ಕಂಪೆನಿಗಳೇ ತಮ್ಮ ವ್ಯಾಪಾರ ವಹಿವಾಟು ನಿಲ್ಲಿಸುವುದಿಲ್ಲ. ಆದರೆ, ಅಡಿಕೆ ಮಂಡಿ ವರ್ತಕರು ಮಾರ್ಚ್‌ ತಿಂಗಳಲ್ಲಿ ವ್ಯಾಪಾರ ನಿಲ್ಲಿಸುವುದು ಎಷ್ಟು ಸರಿ’ ಎಂದು ನೆಂಪೆ ದೇವರಾಜ್‌ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT