ADVERTISEMENT

ಶಾಲೆ ಆಚೆಗಿನ ಕಲಿಕೆಯೆಡೆಗೆ ಕುತೂಹಲ ಇರಲಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 8:55 IST
Last Updated 15 ಏಪ್ರಿಲ್ 2017, 8:55 IST

ತೀರ್ಥಹಳ್ಳಿ: ‘ನೆಮ್ಮದಿಯ ಬದುಕಿಗೆ ಕಾರಣರಾದ ಅಂಬೇಡ್ಕರ್‌ ಅವರನ್ನು ಸ್ಮರಿಸಬೇಕು. ಸಮಾಜದಲ್ಲಿ ಅಂತ್ಯಜ ರಿಗೂ ಸಮಾನತೆ ತಂದುಕೊಟ್ಟ  ಅಂಬೇ ಡ್ಕರ್‌ ಇಡೀ ಸಮಾಜದ  ಕಣ್ಣು ತೆರೆಸಿದರು’ ಎಂದು  ಹಿರಿಯ ಸಾಹಿತಿ ನಾ.ಡಿಸೋಜ ಅಭಿಪ್ರಾಯಪಟ್ಟರು.

ಸಾಗರದ ಸ್ಪಂದನ ರಂಗತಂಡ  ಸಮೀಪದ ಕುಪ್ಪಳಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 10 ದಿನಗಳ ರಾಜ್ಯಮಟ್ಟದ ಮಕ್ಕಳ ರಂಗ ತರಬೇತಿ ಶಿಬಿರದಲ್ಲಿ ಮಾತನಾಡಿದರು.‘ಮಕ್ಕಳಲ್ಲಿ ಅಂಬೇಡ್ಕರ್‌ ಕುರಿತು ಸರಿಯಾದ ತಿಳಿವಳಿಕೆ ಮೂಡಬೇಕು. ಮಕ್ಕಳು ಈಗಿನಿಂದಲೇ  ಹೆಚ್ಚಿನ ಓದಿಗೆ ತೆರೆದುಕೊಳ್ಳಬೇಕು. ಅನೇಕ ವಿಚಾರಗಳನ್ನು ಬೇಸಿಗೆ ರಜೆ ಸಂದರ್ಭದಲ್ಲಿ ಮಕ್ಕಳು ಕಲಿಯಲು ಅವಕಾಶವಿದ್ದು ಶಾಲೆ ಆಚೆಗಿನ ಕಲಿಕೆಯೆ ಡೆಗೆ ಕುತೂಹಲ ಇರಲಿ’ ಎಂದರು.

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಖಜಾಂಚಿ ದೇವಂಗಿ ಮನುದೇವ್‌ ಶಿಬಿರಕ್ಕೆ ಚಾಲನೆ ನೀಡಿ, ‘ಕುವೆಂಪು ಬಾಳಿ ಬದುಕಿದ ಪರಿಸರದಲ್ಲಿ  ರಾಜ್ಯದ ನಾನಾ ಕಡೆಗಳಿಂದ ಬಂದಿರುವ ಮಕ್ಕಳಲ್ಲಿ ವಿಶ್ವಪ್ರಜ್ಞೆ ಮೂಡಲಿ’ ಎಂದು ಹಾರೈಸಿದರು.

ADVERTISEMENT

ಶಿಬಿರದ ಮಾರ್ಗದರ್ಶಕ ಕಡಿದಾಳ್‌ ಶಾಮಣ್ಣ ಮಾತನಾಡಿ, ‘ಮಕ್ಕಳ ಸೃಜನಶೀಲತೆ ಬೆಳವಣಿಗೆಯಲ್ಲಿ ತನ್ನ ಸುತ್ತಲಿನ ಪರಿಸರದ ಅರಿವು ಮುಖ್ಯ. ಕುವೆಂಪು ಅವರ ಸಾಹಿತ್ಯ ಅವರ ಬಾಲ್ಯದ ಪರಿಸರದ ಪ್ರಭಾವದಿಂದಲೇ ರೂಪು ಪಡೆದಿದೆ. ಮಕ್ಕಳಲ್ಲಿ  ತಿಳಿದುಕೊಳ್ಳುವ ಕುತೂಹಲ ಸಹಜವಾಗಿಯೇ ಇರುತ್ತದೆ. ಅದನ್ನು ಪೋಷಕರು ಕಮರದಂತೆ  ಕಾಪಾಡಿ ಕೊಳ್ಳಬೇಕು. ರಂಗಭೂಮಿಯಲ್ಲಿ ಮಕ್ಕಳ ಮನೋವಿಕಾಸ ಸಾಧ್ಯವಿದೆ’ ಎಂದರು.

ಸಮಾರಂಭದಲ್ಲಿ  ಉದಯ್‌ ಜಾದೂಗಾರ್‌, ಪತ್ರಕರ್ತ ಶೃಂಗೇಶ್‌, ಸ್ಪಂದನ ಸಂಸ್ಥೆಯ ರಿಯಾಜ್‌, ವಿಜಯಶ್ರೀ ಉಪಸ್ಥಿತರಿದ್ದರು. ಶಿಬಿರದ ನಿರ್ದೇಶಕಿ ಎಂ.ವಿ. ಪ್ರತಿಭಾ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.