ADVERTISEMENT

‘ಶಾಸಕರಿಂದ ಸರ್ಕಾರಿ ಕಾರ್ಯಕ್ರಮ ದುರುಪಯೋಗ’

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2017, 6:10 IST
Last Updated 27 ಡಿಸೆಂಬರ್ 2017, 6:10 IST

ಸೊರಬ: ಶಾಸಕ ಮಧು ಬಂಗಾರಪ್ಪ ಜನಪ್ರತಿನಿಧಿಗಳನ್ನು ದೂರವಿಟ್ಟು ಪಕ್ಷದ ಪರವಾಗಿ ಪ್ರಚಾರ ಮಾಡುವ ಮೂಲಕ ಸರ್ಕಾರಿ ಕಾರ್ಯಕ್ರಮಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಆರ್.ಶ್ರೀಧರ್ ಹುಲ್ತಿಕೊಪ್ಪ ಆರೋಪಿಸಿದರು.

ತಾಲ್ಲೂಕಿನ ಅಭಿವೃದ್ಧಿ ಯೋಜನೆಗೆ ಅನುದಾನವನ್ನು ಇಲ್ಲಿಯವರೆಗೂ ತಂದಿಲ್ಲ. ಇಲಾಖೆಯ ಮೂಲಕ ಸರ್ಕಾರದಿಂದ ಅನುಷ್ಠಾನಗೊಂಡ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸುತ್ತಿದ್ದಾರೆಯೇ ಹೊರತು, ಹೊಸದಾಗಿ ಸರ್ಕಾರದಿಂದ ಯಾವ ಅನುದಾನವನ್ನೂ ತಂದಿಲ್ಲ. ಸರ್ಕಾರಿ ಕಾರ್ಯಕ್ರಮಗಳಲ್ಲಿ ತಮ್ಮ ಪಕ್ಷದ ಮುಖಂಡರನ್ನು ವೇದಿಕೆಯಲ್ಲಿ ಕೂರಿಸಿ ಈಗಲೇ ಚುನಾವಣೆಗೆ ಪ್ರಚಾರ ನಡೆಸುತ್ತಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ತಾಲ್ಲೂಕಿನಲ್ಲಿ ನಾಲ್ಕೂವರೆ ವರ್ಷಗಳಲ್ಲಿ ಶಾಸಕರ ಸಾಧನೆ ಕಳಪೆಯಾಗಿದೆ. ಅಭಿವೃದ್ಧಿ ಮಾಡುವ ಮನಸ್ಸು ಇದ್ದರೆ ಮಂತ್ರಿಗಳ ಮನೆ ಬಾಗಿಲಿಗೆ ಓಡಾಡಿ ಅನುದಾನ ತರಬಹುದಿತ್ತು. ಸರ್ಕಾರದಿಂದ ಪ್ರತಿ ವರ್ಷ ಮಂಜೂರಾಗುವ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವುದನ್ನು ಬಿಟ್ಟರೆ ಹೊಸ ಯೋಜನೆ ತರಲು ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಂಡು ಐದು ವರ್ಷಗಳು ಕಳೆದಿವೆ. ಆದರೆ, ಶಾಸಕರು ಉದ್ಘಾಟನೆಗೆ ಮುಂದಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರನ್ನು ಕರೆಸಿ ಉದ್ಘಾಟನೆ ಮಾಡಲಾಗುವುದು ಎಂದು ಹೇಳಿದರು.

ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾದ ನಂತರ ಚಂದ್ರಗುತ್ತಿ ದೇವಸ್ಥಾನದ ಅಭಿವೃದ್ಧಿ ಕೆಲಸಗಳಿಗೆ ವೇಗ ದೊರೆತಿದೆ. ಯಾತ್ರಿ ನಿವಾಸ ಸೇರಿದಂತೆ ಹೊರ ಭಾಗದಿಂದ ಬರುವ ಭಕ್ತರಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದರು.

ಬ್ಲಾಕ್ ಅಧ್ಯಕ್ಷ ಜೆ.ಶಿವಾನಂದಪ್ಪ, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹಗುರವಾಗಿ ಮಾತನಾಡಲು ಬಿಜೆಪಿ ನಾಯಕರ ಕುಮ್ಮಕ್ಕು ಇದೆ. ಸಮಾಜದಲ್ಲಿ ಅಶಾಂತಿ ನೆಲೆಸುವ ನಿಟ್ಟಿನಲ್ಲಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಸಂಸ್ಕೃತಿ ಹೀನ ಮಾತುಗಳನ್ನು ನಿಲ್ಲಿಸದಿದ್ದರೆ ಜನರು ಕ್ಷಮಿಸುವುದಿಲ್ಲ ಎಂದರು.

ಬ್ಲಾಕ್ ಅಧ್ಯಕ್ಷ ಜೆ.ಶಿವಾನಂದಪ್ಪ, ಪಟ್ಟಣ ಪಂಚಾಯ್ತಿ ಸದಸ್ಯ ಸುಜಾಯತ್ ವುಲ್ಲಾ, ರಾಯನ್ ಗೋಪಾಲಪ್ಪ, ಪರಸಪ್ಪ ಕೊಡಕಣಿ, ಕೆರೆಯಪ್ಪ, ಗಜಾನನ, ರಶೀದ್ ಸಾಬ್, ಜಯಶೀಲ ಹೆಚ್ಚೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.