ADVERTISEMENT

‘ಸಾಂಕ್ರಾಮಿಕ ರೋಗ: ಮುಂಜಾಗ್ರತೆ ಅಗತ್ಯ’

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 6:21 IST
Last Updated 8 ಫೆಬ್ರುವರಿ 2017, 6:21 IST

ಸಾಗರ: ‘ಮಕ್ಕಳಿಗೆ ಹರಡಬಹುದಾದ ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಪೋಷಕರು ಮುಂಜಾಗ್ರತೆ ವಹಿಸಬೇಕು’ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಹೇಳಿದರು.

ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮಂಗಳವಾರ ಹಮ್ಮಿಕೊಂಡಿದ್ದ ದಡಾರ ಮತ್ತು ರುಬೆಲ್ಲಾ (ಜರ್ಮನ್ ದಡಾರ) ಲಸಿಕಾ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಂಕ್ರಾಮಿಕ ರೋಗಗಳನ್ನು ತಡೆಯಲು ಅಗತ್ಯವಿರುವ ಲಸಿಕೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಪೂರೈಕೆಯಾಗುತ್ತಿವೆ. ಕೆಲವರು ಸರ್ಕಾರಿ ಆಸ್ಪತ್ರೆಗಳಿಗೆ ಬರಲು ಹಿಂದೇಟು ಹಾಕುತ್ತಿರುವುದು ಬೇಸರದ ಸಂಗತಿ’ ಎಂದರು.

‘ಕಾಯಿಲೆಗಳು ಬಂದ ನಂತರ ಪರಿತಪಿಸುವುದಕ್ಕಿಂತ ಬಾರದಂತೆ ಜಾಗ್ರತೆ ವಹಿಸಬೇಕು. ಮಕ್ಕಳಿಗೆ ಸಾಂಕ್ರಾಮಿಕ ರೋಗಗಳು ಬಹು ಬೇಗ ಹರಡುತ್ತವೆ. ಪರಿಸರದ ನೈರ್ಮಲ್ಯ ಕಾಪಾಡಿಕೊಳ್ಳಬೇಕು’ ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಆರ್‌.ಸಿ.ಮಂಜುನಾಥ್‌ ಮಾತನಾಡಿ, ‘9 ತಿಂಗಳಿನಿಂದ 15 ವರ್ಷದೊಳಗಿನ ಮಕ್ಕಳಿಗೆ ದಡಾರ ಹಾಗೂ ರುಬೆಲ್ಲಾ ಕಾಯಿಲೆ ಬಾರದಂತೆ ತಡೆಗಟ್ಟಲು ಲಸಿಕೆ ನೀಡಲಾಗುತ್ತಿದ್ದು,  ಈ ವಯಸ್ಸಿನ ಪ್ರತಿ ಮಗುವು ಇದರ ಪ್ರಯೋಜನ ಪಡೆಯಬೇಕು’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಎನ್‌.ಉಷಾ ಮಾತನಾಡಿ, ‘ಫೆ.7ರಿಂದ 27ರವರೆಗೆ ನಡೆಯಲಿರುವ ದಡಾರ ಮತ್ತು ರುಬೆಲ್ಲಾ ಲಸಿಕೆ ಅಭಿಯಾನ ಯಶಸ್ವಿಯಾಗಲು ಸಂಘ ಸಂಸ್ಥೆಗಳು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು’ ಎಂದರು.

ಉಪ ವಿಭಾಗಾಧಿಕಾರಿ ನಾಗರಾಜ್ ಎನ್‌.ಸಿಂಗ್ರೇರ್‌, ತಹಶೀಲ್ದಾರ್ ತುಷಾರ್‌ ಬಿ.ಹೊಸೂರು, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕೆ.ಪಿ.ಅಚ್ಯುತ್‌, ಡಾ.ಪ್ರಕಾಶ್‌ ಬೋಸ್ಲೆ, ಜಿಲ್ಲಾ ಮಲೇರಿಯ ಅಧಿಕಾರಿ ಡಾ.ಕಾಂತರಾಜ್‌, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಲಿಂಗಪ್ಪ, ಆರೋಗ್ಯ ನೌಕರರ ಒಕ್ಕೂಟದ ಅಧ್ಯಕ್ಷ ವೈ.ಮೋಹನ್‌  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.