ADVERTISEMENT

ಸಿದ್ಧರಾಮರ ವಚನ ಸಂಗ್ರಹ ಭಗವದ್ಗೀತೆಗೆ ಸಮ

‘ವಚನಕಾರ ಸಿದ್ಧರಾಮನ ಬದುಕು ಬರಹ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2017, 5:35 IST
Last Updated 13 ಮಾರ್ಚ್ 2017, 5:35 IST

ಶಿವಮೊಗ್ಗ: ‘ವಚನಕಾರ ಸಿದ್ಧರಾಮರ ಇಡೀ ವಚನಗಳ ಸಂಗ್ರಹ ಒಂದು ಭಗವದ್ಗೀತೆ ಇದ್ದಂತೆ’ ಸಾಹಿತಿ ಡಾ.ಕುಮಾರ ಚಲ್ಯ ಹೇಳಿದರು.
ನಗರದ ನಂದಿ ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ‘ವಚನಕಾರ ಸಿದ್ದರಾಮನ ಬದುಕು ಬರಹ ಒಂದು ಅವಲೋಕನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೆರೆ, ಕಟ್ಟೆ, ಬಾವಿಗಳನ್ನು ಕಟ್ಟಿಸಿ ಸಾಮಾಜಿಕ ಕಳಕಳಿ ಮೆರೆದಿದ್ದ ಸಿದ್ಧರಾಮ ಅವರು ಮಾನವೀಯತೆಯ ಸಾಕಾರವಾಗಿದ್ದರು. ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಿದ್ದರು’ ಎಂದರು.

ಸಿದ್ಧರಾಮರು ಲೌಕಿಕ ನೆಲೆಯಲ್ಲೂ ಹಾಗೂ ಅನುಭಾವದ ನೆಲೆಯಲ್ಲೂ ತಮ್ಮ ಪ್ರಭಾವ ಬೀರಿದ್ದಾರೆ. ಜಗತ್ತಿಗೆ ಉತ್ತಮ ಮಾರ್ಗದರ್ಶಕರಾಗಿ ಸಾಮಾಜಿಕ ಕೆಲಸ ನಿರ್ವಹಿಸಿದರೆ, ಇನ್ನೊಂದೆಡೆ ವಚನಗಳ ಮೂಲಕ ತಮ್ಮ ಅನುಭವ, ಜ್ಞಾನ ಹಾಗೂ ಚಿಂತನೆಗಳನ್ನು ನೀಡಿದ್ದಾರೆ. ಒಂದು ರೀತಿ ಯೋಗಿಗಳ ಯೋಗಿ ಸಿದ್ಧರಾಮ ಆಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಗ್ರಾಮೀಣ ವಚನಗಾರರಾಗಿರುವ ಸಿದ್ಧರಾಮರು ಹಳ್ಳಿ, ಹಳ್ಳಿಗಳನ್ನು ಸುತ್ತಿದ್ದಾರೆ. ಸುಮಾರು 68 ಸಾವಿರ ವಚನಗಳನ್ನು ರಚಿಸಿದ್ದಾರೆ. ಪೂಜೆಗೆ ಮನಸ್ಸು ಮುಖ್ಯ. ಆತ್ಮಶುದ್ಧಿ ಇಲ್ಲದಿದ್ದರೆ ಯಾವ ಪೂಜೆಯಿಂದಲೂ ಪ್ರಯೋಜನವಿಲ್ಲ. ಮದುವೆಗೆ ಅಗ್ನಿಸಾಕ್ಷಿಗಿಂತ ಮನಸ್ಸಾಕ್ಷಿಯೇ ಮುಖ್ಯ ಎಂದು ತಮ್ಮ ವಚನಗಳಲ್ಲಿ ಹೇಳಿದ್ದಾರೆ ಎಂದರು.

12ನೇ ಶತಮಾನದ ಅತ್ಯಂತ ಸಾಮಾಜಿಕ ಕಾಳಜಿ ಹೊಂದಿದವರಲ್ಲಿ ಬಸವಣ್ಣ ಹಾಗೂ ಸಿದ್ಧರಾಮರು ಪ್ರಮುಖರು. ಸಿದ್ಧರಾಮರು ಗ್ರಾಮೀಣ ಪ್ರತಿಭೆಯಾಗಿ, ಅಗಾಧ ಆಲೋಚನೆ ಹೊಂದುವ ಮೂಲಕ ದೊಡ್ಡ ವ್ಯಕ್ತಿತ್ವ ಹೊಂದಿದ್ದಾರೆ. ವಚನಗಳ ಮೂಲಕ ಜ್ಞಾನದ ಸಂದೇಶ ನೀಡಿ, ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದಾರೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಬಿ.ಶಂಕರಪ್ಪ ಮಾತನಾಡಿ, ಗುರು ಸಿದ್ಧರಾಮ ಅವರ ವಚನಗಳಲ್ಲಿ ಹೆಚ್ಚಿನ ಭಾಷಾಸಂಪತ್ತು ಕಾಣಬಹುದು. ಇತರ ವಚನಕಾರರಿಗಿಂತ ವಿಶಿಷ್ಟ ಸ್ಥಾನದಲ್ಲಿ ಸಿದ್ಧರಾಮರು ನಿಲ್ಲುತ್ತಾರೆ. ಶ್ರಮಿಕರ, ರೈತರ, ಕಾರ್ಮಿಕರ ಪ್ರತಿನಿಧಿಯಾಗಿ ಸಿದ್ಧರಾಮ ಇದ್ದಾರೆ. ಅವರ ಚಿಂತನೆಗಳು ವಚನಗಳ ವೈವಿಧ್ಯತೆಯನ್ನು ಸಾರುತ್ತವೆ ಎಂದು ಅಭಿಪ್ರಾಯಪಟ್ಟರು.

ಬಸವಕೇಂದ್ರದ ಬಸವ ಮರುಳ ಸಿದ್ಧ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಸಿದ್ಧರಾಮನ ದಿಟ್ಟ ಬದುಕು ಕೊಟ್ಟ ಸಂದೇಶ ಕುರಿತು ಸಾಹಿತಿ ಪ್ರೊ.ಕಿರಣ್ ದೇಸಾಯಿ ಮಾತನಾಡಿದರು. ರಾಜ್ಯ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಬಿ.ಡಿ. ಭೂಕಾಂತ, ನಂದಿ ಮಹಿಳಾ ವೇದಿಕೆಯ ಅಧ್ಯಕ್ಷೆ ಪ್ರಮೀಳಮ್ಮ ರಾಜೇಂದ್ರಪ್ಪ ಇದ್ದರು. ಈಶ್ವರಪ್ಪ ಎಣ್ಣೇರ, ಎ.ಬಸವ ರಾಜಪ್ಪ, ಎಂ.ಎನ್. ಸುಂದರರಾಜ್, ರುದ್ರಮುನಿ ಸಜ್ಜನ್, ಚಂದ್ರಕಲಾ ಅರಸ್ ಇದ್ದರು. ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.