ADVERTISEMENT

ಸೇತುವೆಗಾಗಿ ಕಲ್ಲುಕೊಪ್ಪ ಹಳ್ಳದ ಮೊರೆ

ರೈತನ ಸಾವು ತಂದ ನೋವು; ಕುಗ್ರಾಮಕ್ಕೆ ಸಾಂತ್ವನ ಹೇಳಲು ಜನಪ್ರತಿನಿಧಿಗಳ ದಂಡು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2015, 8:51 IST
Last Updated 3 ಆಗಸ್ಟ್ 2015, 8:51 IST

ರಿಪ್ಪನ್‌ಪೇಟೆ: ಸ್ವಾತಂತ್ರ್ಯ ಬಂದು 6 ದಶಕ ಕಳೆದರೂ  ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯಗಳ ಕೊರತೆ ಇನ್ನೂ ನೀಗಿಲ್ಲ. ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಕಲ್ಕೊಪ್ಪ ಗ್ರಾಮ ಈಚೆಗೆ ರೈತ ಸಾವಿನ ದುರಂತಕ್ಕೆ ಸಿಲುಕಿದೆ.

ರೈತ ಕುಟುಂಬಕ್ಕೆ ಸಾಂತ್ವನ ಹೇಳಲು ಜಿಲ್ಲಾ ಉಸ್ತುವಾರಿ ಸಚಿವರಾದಿಯಾಗಿ ಈ ಕುಗ್ರಾಮಕ್ಕೆ ರಾಜಕೀಯ ನಾಯಕರ ದಂಡು ಬಂದಿತ್ತು.
ಈ ಗ್ರಾಮಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ತಮ್ಮ ವಾಹನಗಳು ಹಳ್ಳಿಗಾಡಿನ ರಸ್ತೆಯಲ್ಲಿ ಸಾಗದೆ ಇದ್ದಾಗ ಪಾದಯಾತ್ರೆ ಮೂಲಕ ತೆರಳಿ  ಮಾಧ್ಯಮ ಪ್ರತಿನಿಧಿಗಳ ಮುಂದೆ ಅಷ್ಟೂ ಇಷ್ಟೂ ವೈಯಕ್ತಿಕ  ಪರಿಹಾರ ನೀಡಿ ಮರಳಿದ್ದರು.

ಆದರೆ, ಸುಮಾರು 40–50 ಮನೆ ಇರುವ ಕಲ್ಲುಕೊಪ್ಪ –ಜಂಬಳ್ಳಿ ಗ್ರಾಮದ ಮಧ್ಯೆ ಹಳ್ಳವಿದ್ದು, ಈ ಹಳ್ಳ ದಾಟಿ ಅಂಗನವಾಡಿಯಿಂದ ಪದವಿವರೆಗಿನ ಮಕ್ಕಳು ಶಾಲೆ ಕಾಲೇಜಿಗೆ ತೆರಳಬೇಕು.  ಶಾಲೆಯ ಮಕ್ಕಳನ್ನು ಹಳ್ಳ ದಾಟಿಸಿ ಬಿಟ್ಟು ಕರೆ ತರುವುದೇ  ಪೋಷಕರಿಗೆ ದೊಡ್ಡ ಸವಾಲಾಗಿದೆ.

ಈ ಹಳ್ಳ ದಾಟಲು ಕೊಳವೆ ರಿಂಗಿನ ಸೇತುವೆ ಇತ್ತು. ಅಬ್ಬರದ ಮಳೆಗೆ ತೇಲಿ ಬಂದ ಮರದ ದಿಮ್ಮಿ, ಗಿಡ ಗಂಟಿಗಳು ಸಿಲುಕಿ ಶಿಥಿಲಗೊಂಡಿದೆ ಎಂದು ಇಲ್ಲಿನ ಗ್ರಾಮಸ್ಥರು ಹೇಳುತ್ತಾರೆ.

ಜಿಲ್ಲಾ ಪಂಚಾಯ್ತಿ, ವಿಧಾನಸಭಾ ಸದಸ್ಯರ  ಅನುದಾನದಲ್ಲಿ 4 ವರ್ಷಗಳ ಹಿಂದೆ ಸೇತುವೆ ನಿರ್ಮಿಸುವುದಾಗಿ ಅಳಿದುಳಿದ ಮೋರಿಗಳನ್ನು ಕಿತ್ತು ಹಾಕಿದ್ದಾರೆ. ಆದರೆ, ಅದು ಇನ್ನೂ  ಕಾರ್ಯರೂಪಕ್ಕೆ ಬಂದಿಲ್ಲ. 

ಕಗ್ಗತ್ತಲ ರಾತ್ರಿಯಲ್ಲಿ ವಿಷ ಕುಡಿದು ಜೀವನ್ಮರಣದ ಸ್ಥಿತಿಯಲ್ಲಿದ್ದ ರೈತನನ್ನು  ಗೋಣಿ ತಾಟಿನಲ್ಲಿ ಮನೆಯಿಂದ ಸುಮಾರು 1 ಕಿ.ಮೀ. ದೂರದ ಹರಿವ ಹಳ್ಳದ ಈಚೆ ದಡಕ್ಕೆ ತಂದು ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಒಯ್ದಾಗ ಸಮಯ ಮೀರಿತ್ತು. ರಸ್ತೆ ಸಂಪರ್ಕ ಇದ್ದಿದ್ದರೆ ಆತ ಉಳಿಯುತ್ತಿದ್ದ ಎನ್ನುವುದು ಆ ಕುಟುಂಬದ ಅಳಲು.

ತಮ್ಮ ರಾಜಕೀಯ ಭವಿಷ್ಯದ ಮೇಲೆ ಕಣ್ಣಿಟ್ಟಿರುವ ನಾಯಕರಿಗೆ ಈ ರೈತನ ಸಾವು ಒಂದು ಪಾಠ ಆಗಬಹುದು.  ಹಳ್ಳಿ ಗಾಡಿನ ಜನರ ಮೇಲೆ  ಕಾಳಜಿ ಇದ್ದರೆ,  ಈ ಭಾಗದ ಜನರ ಮೂಲ ಸಮಸ್ಯೆಗೆ  ಪರಿಹಾರ ಕಲ್ಪಿಸಲಿ ಎಂದು ಸ್ಥಳೀಯ ನಾಗರಿಕರು ಒತ್ತಾಯಿಸುತ್ತಾ ಬಂದಿದ್ದಾರೆ. ಜನರ ಜತೆಗೆ ಹಳ್ಳ ಕೂಡ ಸೇತುವೆಗಾಗಿ ಮೊರೆ ಇಡುತ್ತಿದೆ. ಆದರೆ, ಅವರ ಮೊರೆ ಅರಣ್ಯರೋದನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.