ADVERTISEMENT

ಸೊರಬ ರಸ್ತೆ ಶೀಘ್ರ ವಿಸ್ತರಣೆ

ವಿವಿಧ ಸವಲತ್ತು ವಿತರಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2018, 9:22 IST
Last Updated 3 ಮಾರ್ಚ್ 2018, 9:22 IST
ಸಾಗರದ ನಗರಸಭೆ ಆವರಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಮನೆ ಮಂಜೂರಾತಿ ಪತ್ರವನ್ನು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ವಿತರಿಸಿದರು.
ಸಾಗರದ ನಗರಸಭೆ ಆವರಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಮನೆ ಮಂಜೂರಾತಿ ಪತ್ರವನ್ನು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ವಿತರಿಸಿದರು.   

ಸಾಗರ: ಸಾರ್ವಜನಿಕರ ಬಹುಕಾಲದ ಬೇಡಿಕೆಯಂತೆ ನಗರವ್ಯಾಪ್ತಿಯ ಸೊರಬ ರಸ್ತೆ ವಿಸ್ತರಣೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ಮೊದಲ ಹಂತದಲ್ಲಿ ಸರ್ಕಾರ ಈ ಕಾಮಗಾರಿಗೆ ₹ 20 ಕೋಟಿ ಬಿಡುಗಡೆ ಮಾಡಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.

ಇಲ್ಲಿನ ನಗರಸಭೆ ಆವರಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಮನೆ ಮಂಜೂರಾತಿ ಪತ್ರ, ಸ್ತ್ರೀಶಕ್ತಿ ಗುಂಪುಗಳಿಗೆ ಆವರ್ತ ನಿಧಿ, ಅಂಗವಿಕಲರಿಗೆ ದ್ವಿಚಕ್ರ ವಾಹನ ವಿತರಿಸಿ ಅವರು ಮಾತನಾಡಿದರು.

ಸೊರಬ ರಸ್ತೆ ವಿಸ್ತರಣೆ ಕಾಮಗಾರಿ ₹ 45 ಕೋಟಿ ವೆಚ್ಚದಲ್ಲಿ ನಡೆಯಲಿದೆ. ರಸ್ತೆ ವಿಸ್ತರಣೆಯಿಂದ ತಮ್ಮ ಆಸ್ತಿ ಕಳೆದುಕೊಳ್ಳುವವರಿಗೆ ಪರಿಹಾರ ನೀಡಲು ಯೋಜನೆ ರೂಪಿಸಲಾಗಿದೆ. ಪರಿಹಾರ ವಿತರಣೆ ಕಾರ್ಯ ಸಮರ್ಪಕವಾಗಿ ನಡೆಯಲಿದೆ ಎಂದರು.

ADVERTISEMENT

ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ನಗರವ್ಯಾಪ್ತಿಯ ಐದು ಕೊಳಚೆ ಪ್ರದೇಶ ಅಭಿವೃದ್ಧಿಗೆ ₹ 1.25 ಕೋಟಿ ಬಿಡುಗಡೆಯಾಗಿದೆ. ಕೊಳಗೇರಿ ಪ್ರದೇಶದಲ್ಲಿ ರಸ್ತೆ, ಚರಂಡಿ ಸೇರಿದಂತೆ ವಿವಿಧ ಕಾಮಗಾರಿ ನಡೆಯಲಿದೆ. ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 1588 ಮನೆಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.

ನಗರವನ್ನು ಸುಂದರವಾಗಿಡಲು ಶ್ರಮಿಸುವ ಪೌರಕಾರ್ಮಿಕರಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗೃಹಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಅರ್ಹ ಫಲಾನುಭವಿಗಳಿಗೆ ಇದರ ಪ್ರಯೋಜನ ದೊರಕುವಂತೆ ನೋಡಿಕೊಳ್ಳುವ ಜವಾಬ್ದಾರಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮೇಲೆ ಇದೆ ಎಂದರು.

ನಗರಸಭೆ ಅಧ್ಯಕ್ಷೆ ಬೀಬಿ ಫಸಿಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಎಸ್.ಜೆ.ಸರಸ್ವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ್‌ಕುಮಾರ್, ಸದಸ್ಯರಾದ ಸುಂದರ್‌ಸಿಂಗ್, ಲಲಿತಮ್ಮ, ಗಣಾಧೀಶ, ಆರ್.ಶ್ರೀನಿವಾಸ, ವೀಣಾ ಪರಮೇಶ್ವರ್, ಎನ್.ಲಲಿತಮ್ಮ, ನಾಗರತ್ನ, ಜಿಲ್ಲಾಧಿಕಾರಿಗಳ ಕಚೇರಿಯ ನಗರಾಭಿವೃದ್ಧಿ ಕೋಶದ ಅಧಿಕಾರಿ ಪ್ರಮೋದ್ ಹಾಜರಿದ್ದರು.

ಚೇತನಾ ಪ್ರಾರ್ಥಿಸಿದರು. ಪೌರಾಯುಕ್ತ ಎಸ್.ರಾಜು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ್ ವಂದಿಸಿದರು. ನರಸಿಂಹಮೂರ್ತಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.