ADVERTISEMENT

ಹಣ, ಹೆಂಡ, ತೋಳ್ಬಲ ಮೆಟ್ಟಿ ನಿಲ್ಲಿ

‌ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪ ಕರೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 11:25 IST
Last Updated 21 ಏಪ್ರಿಲ್ 2018, 11:25 IST

ಸೊರಬ: ಈ ಬಾರಿಯ ಚುನಾವಣೆಯನ್ನು ತಾಲ್ಲೂಕಿನ ಮತದಾರರು ಪ್ರತಿಷ್ಠೆಯ ಚುನಾವಣೆಯನ್ನಾಗಿ ಪರಿಗಣಿಸದೇ ಹಣ, ಹೆಂಡ ಹಾಗೂ ತೋಳ್ಬಲವನ್ನು ಮೆಟ್ಟಿ ನಿಲ್ಲಬೇಕು ಎಂದು ಎಂದು ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಕರೆ ನೀಡಿದರು.

ಶುಕ್ರವಾರ ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ನಂತರ ತಮ್ಮ ಅಪಾರ ಬೆಂಬಲಿಗರೊಂದಿಗೆ ಪಟ್ಟಣದಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು, ನಿರಂತರವಾಗಿ ಬಡವರಿಗೆ ಗೇಣಿದಾರರಿಂದ ಭೂಮಿ ಕೊಡಿಸಲು ಪ್ರಯತ್ನಿಸಿದ್ದರು. ಆದರೆ ಅವರು ಬಡವರ ಬಗ್ಗೆ ಹೊಂದಿದ್ದ ಕಾಳಜಿ ಇಂದು ಕ್ಷೇತ್ರದಲ್ಲಿ ಇಲ್ಲವಾಗಿದೆ. ಶಾಸಕ ಮಧು ಬಂಗಾರಪ್ಪ ಹಕ್ಕುಪತ್ರ ಕೊಡುವ ನೆಪದಲ್ಲಿ ಅರ್ಹರಿಗೆ ಭೂಮಿಯ ಹಕ್ಕು ನೀಡದೇ ಸ್ಥಿತಿವಂತರಿಗೆ ನೀಡಿದ್ದಾರೆ. ತಾಲ್ಲೂಕಿನಲ್ಲಿ ಶಾಂತಿ ನೆಲೆಸಲು ಹಾಗೂ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ADVERTISEMENT

ತಾಲ್ಲೂಕಿನಲ್ಲಿ ಯಾವ ಭಾಗದ ರೈತರಿಗೂ ತೊಂದರೆಯಾಗದಂತೆ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲು ಪ್ರಧಾನಿ ಮೋದಿ ಹಾಗೂ ಯಡಿಯೂರಪ್ಪ ಸಿದ್ಧವಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕಿತ್ತೊಗೆದು ಬಿಜೆಪಿ ಸರ್ಕಾರ ರಚಿಸಲು ತಾಲ್ಲೂಕಿನ ಜನತೆಯ ಜಬಾಬ್ದಾರಿ ಹೆಚ್ಚಿದೆ ಎಂದರು.

ಶಿಕಾರಿಪುರ ಶಾಸಕ ಬಿ.ವೈ.ರಾಘವೇಂದ್ರ ಮಾತನಾಡಿ, ‘ಸೊರಬದಲ್ಲಿ ಅಶ್ವಮೇಧ ಕುದುರೆಯನ್ನು ಕಟ್ಟಿ ಹಾಕಲು ಯಾರಿಂದಲೂ ಸಾಧ್ಯವಿಲ್ಲ. ಬಗರ್‌ಹುಕುಂ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸಿರುವ ಮಧು ಬಂಗಾರಪ್ಪ ಪಂದ್ಯಾವಳಿಯಲ್ಲಿನ ಚಾಂಪಿಯನ್ ರೀತಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಕಂದಾಯ ಸಚಿವ ಕಾಗೊಡು ತಿಮ್ಮಪ್ಪ ಅವರು ಜಿಲ್ಲೆಯಲ್ಲಿ 29ಸಾವಿರ ಬಗರ್‌ಹುಕುಂ ಅರ್ಜಿಗಳು ಬಾಕಿ ಉಳಿದಿವೆ. ಅದರಲ್ಲಿ ಸೊರಬದಲ್ಲಿಯೇ 7ಸಾವಿರ ಅರ್ಜಿ ಬಾಕಿ ಉಳಿದಿವೆ ಎಂದು ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಹೀಗಿರುವಾಗ ಶಾಸಕರು ಪ್ರಚಾರಕ್ಕಾಗಿ ಬಗರ್ ಹುಕುಂ ಹೆಸರು ಬಳಸಿಕೊಳ್ಳುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

‘ಕ್ರಾಂತಿ ರಂಗದಿಂದ ಗೆದ್ದ ಎಸ್. ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ನಿರಾಕರಿಸಿ ಅವಮಾನ ಮಾಡಿದ ದೇವೇಗೌಡ ಅವರ ಜೊತೆ ಮಧು ಬಂಗಾರಪ್ಪ ಇರುವುದು ದೊಡ್ಡ ಅವಮಾನ’ ಎಂದು ಕುಟುಕಿದರು.

ಎಸ್.ದತ್ತಾತ್ರಿ ಮಾತನಾಡಿ, ಕೇಂದ್ರದಲ್ಲಿ ಪ್ರಧಾನ ನರೇಂದ್ರ ಮೋದಿ ಆಡಳಿತವನ್ನು ದೇಶದೆಲ್ಲೆಡೆ ಜನತೆ ಒಪ್ಪಿದ್ದು, ಮತ್ತೊಮ್ಮೆ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ರಾಜ್ಯದ ಜನರ ಆಸೆಯಾಗಿದೆ. ಶಾಸಕರ ದಬ್ಬಾಳಿಕೆ ಕೊನೆಗಾಣಿಸಲು ಕುಮಾರ್ ಬಂಗಾರಪ್ಪ ಅವರನ್ನು ಬೆಂಬಲಿಸಬೇಕು’ ಎಂದರು.

ಕುಮಾರ್ ಬಂಗಾರಪ್ಪ ಪತ್ನಿ ವಿದ್ಯುಲ್ಲತಾ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಎ.ಎಲ್.ಅರವಿಂದ್, ಜಿಲ್ಲಾ ಪಂಚಾಯ್ತಿ ಸದಸ್ಯ ಸತೀಶ್ ಅರ್ಜುನಪ್ಪ, ನಿರಂಜನ್, ಕುಸಮಾ ಪಾಟೀಲ್, ದಯಾನಂದ, ಅಗಡಿ ಅಶೋಕ್, ದೇವೇಂದ್ರಪ್ಪ, ಉಮೇಶಗೌಡ, ಕೀರ್ತಿ, ಪಾಣಿ ರಾಜಪ್ಪ, ಪುರುಷೋತ್ತಮ್, ಉಮೇಶ್ ಉಡುಗಣಿ ಹಾಜರಿದ್ದರು.

ಕುಮಾರ್ ಬಂಗಾರಪ್ಪ ಆಸ್ತಿ ವಿವರ

4ಒಟ್ಟು ನಗದು ‌₹ 1.49 ಕೋಟಿ.

4ಸಾಲ ₹ 95.16ಲಕ್ಷ

4ಪತ್ನಿ ಹೆಸರಿನಲ್ಲಿ 3.18ಲಕ್ಷ ಬ್ಯಾಂಕ್ ಖಾತೆಯಲ್ಲಿದೆ.

4ಚಿನ್ನಾಭರಣ 3500 ಗ್ರಾಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.