ADVERTISEMENT

ಹಿನ್ನೀರು ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2017, 6:42 IST
Last Updated 13 ಡಿಸೆಂಬರ್ 2017, 6:42 IST

ಹೊಸನಗರ: ತಾಲ್ಲೂಕಿನ ಶರಾವತಿ ಹಿನ್ನೀರಿನ ಪ್ರದೇಶ ನಿಟ್ಟೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆಸರೆ ಹಾಗೂ ಹೊಸನಾಡು ಗ್ರಾಮದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಬಾರದು ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಉದ್ದೇಶಿತ ಕಲ್ಲು ಗಣಿಗಾರಿಕೆ ಪ್ರದೇಶವು ಕೆಸರೆ ಗ್ರಾಮದ ಸರ್ವೆ ಸಂಖ್ಯೆ 18 ಹಾಗೂ ಹೊಸನಾಡು ಗ್ರಾಮದ ಸರ್ವೆ ಸಂಖ್ಯೆ 205 ಗೋಮಾಳ ಆಗಿದೆ. ಸುಮಾರು 14 ಫಲಾನುಭವಿಗಳಿಗೆ ಈ ಪ್ರದೇಶದಲ್ಲಿ ಬಗರ್ ಹುಕುಂ ಜಮೀನು ಮಂಜೂರಾಗಿದೆ ಎಂದು ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ.

ಕುಂದಾಪುರದ ಮೆ.ತಿಮ್ಮಪ್ಪ ಶೇರಿಗಾರ್ ಗುತ್ತಿಗೆದಾರ ಕಂಪೆನಿಗೆ ಕ್ರಷರ್ ಘಟಕ ಸ್ಥಾಪನೆ, ಕಲ್ಲು ಗಣಿಗಾರಿಕೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಪರವಾನಗಿ (ಬಿ1) ನೀಡಿದೆ. ಈ ಪ್ರದೇಶವು ಕಸ್ತೂರಿರಂಗನ್ ವರದಿಯ ವ್ಯಾಪ್ತಿಯಲ್ಲಿದೆ.

ADVERTISEMENT

ಇಲ್ಲಿಂದ ಕೇವಲ 50ರಿಂದ 100 ಮೀಟರ್ ದೂರದಲ್ಲಿ ಪರಿಶಿಷ್ಟ ಜಾತಿ ಕಾಲೊನಿ ಸೇರಿದಂತೆ 40ಕ್ಕೂ ಹೆಚ್ಚು ಮನೆಗಳಿವೆ. ಸುತ್ತಲೂ ದಟ್ಟವಾದ ಅರಣ್ಯದ ಇರುವ ಈ ಪ್ರದೇಶದಲ್ಲಿ ದಲಿತರು, ಹಿಂದುಳಿದ ವರ್ಗದ ಆರಾಧ್ಯ ದೈವ ಕಾಲಭೈರವೇಶ್ವರ, ನೆತ್ತಿಹಕ್ಕಲು, ಭೂತದ ಗುಡಿಗಳುಇವೆ.

ಗಣಿಗಾರಿಕೆ ಪ್ರದೇಶದ ಪಕ್ಕದ ರಸ್ತೆಯಲ್ಲಿ ಕುದುರೆಬೀರಪ್ಪ ಸರ್ಕಲ್ ಶಾಲೆಗೆ, ಅಂಗನವಾಡಿಗೆ ಮಕ್ಕಳು ನಡೆದುಕೊಂಡು ಹೋಗಬೇಕಾಗಿದೆ. ಗ್ರಾಮಸ್ಥರು ಗ್ರಾಮ ಪಂಚಾಯ್ತಿ ಕೇಂದ್ರಕ್ಕೆ ತೆರಳಲು ಇರುವ ಏಕೈಕ ಮಾರ್ಗ ಇದಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನಿರಾಕ್ಷೇಪಣಾ ಪತ್ರಕ್ಕೆ ಆಕ್ಷೇಪ: ವಾಸದ ಮನೆ, ಕೃಷಿ ಜಮೀನು ಸಮೀಪ ಇರುವುದರಿಂದ ನಿಟ್ಟೂರು ಗ್ರಾಮ ಪಂಚಾಯ್ತಿ ಕೂಡ ಗಣಿಗಾರಿಕೆಯಲ್ಲಿ ಸ್ಫೋಟಕ ಸಾಮಗ್ರಿ ಬಳಸಲು ನಿರಾಕ್ಷೇಪಣಾ ಪತ್ರ ನೀಡಲು ನಿರಾಕರಿಸಿದೆ.

ಬಗರ್ ಹುಕುಂ ಅಧ್ಯಕ್ಷರ ಭೇಟಿ: ಸಾಗರ ತಾಲ್ಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ ಗ್ರಾಮಸ್ಥರ ಮನವಿಯ ಮೇರೆಗೆ ಭಾನುವಾರ ಭೇಟಿ ನೀಡಿ ಗಣಿಗಾರಿಕೆಗೆ ಅನುಮತಿ ನೀಡದಂತೆ ಜಿಲ್ಲಾಧಿಕಾರಿಯನ್ನು ಒತ್ತಾಯಿಸುವುದಾಗಿ ಭರವಸೆ ನೀಡಿದರು.

ಉದ್ದೇಶಿತ ಗಣಿಗಾರಿಕೆ ಸಮೀಪದ ವಾಸದ ಮನೆ, ಜಮೀನು, ದಟ್ಟವಾದ ಕಾಡು, ಬಗರ್‌ಹುಕುಂ ಜಮೀನು ಮಂಜೂರು ಆಗಿರುವುದರಿಂದ ಕಾಯಂ ಪರವಾನಗಿಯನ್ನು (ಸಿ1) ನೀಡದಿರಲು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಮನವಿ ಮಾಡುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದರು.

ಕೇವಿಯಟ್ ಪ್ರಕರಣ ದಾಖಲು: ಗಣಿಗಾರಿಕೆಗೆ ತೊಂದರೆ ಕೊಡದಂತೆ ಮಾಲೀಕರು ಹೊಸನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಗ್ರಾಮದ ಕೆಸರೆ ಗ್ರಾಮದ ಏಳು ಮಂದಿಯ ಮೇಲೆ ಕೇವಿಯಟ್ ಪ್ರಕರಣ ದಾಖಲಿಸಿದ್ದಾರೆ. ಗಣಿಗಾರಿಕೆಯ ಮೇಲ್ವಿಚಾರಕ ಉದಯ ನಾಯಕ್ ಎಂಬುವವರು ಗ್ರಾಮಸ್ಥರಿಗೆ ಅನಗತ್ಯ ಕಿರುಕುಳ, ಜೀವ ಬೆದರಿಕೆ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಬಗರ್‌ಹುಕುಂ ಅಧ್ಯಕ್ಷರ ಬಳಿ ಅಳಲು ತೋಡಿಕೊಂಡರು. ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಕೂಡ್ಲುಕೊಪ್ಪ ಸುರೇಶ, ನರಸಿಂಹ ಪೂಜಾರಿ, ಚಂದ್ರಶೇಖರ ಶೆಟ್ಟಿ, ವಿಶ್ವನಾಥ ಇದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.