ADVERTISEMENT

ಹೋರಿ ಬೆದರಿಸುವ ಸ್ಪರ್ಧೆಗೆ ಕಡಿವಾಣ

ಆಯೋಜಕರು, ಪ್ರೋತ್ಸಾಹಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಆದೇಶ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 11:25 IST
Last Updated 12 ಜನವರಿ 2017, 11:25 IST
ಶಿವಮೊಗ್ಗ: ಜಿಲ್ಲೆಯ ಯಾವುದೇ ಭಾಗದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನಡೆದರೆ, ಆಯೋಜಕರು ಹಾಗೂ ಪ್ರೋತ್ಸಾಹಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ್ ಖರೆ ಎಲ್ಲ ಠಾಣೆಗಳಿಗೂ ಆದೇಶಿಸಿದ್ದಾರೆ.
 
ಸೊರಬ ತಾಲ್ಲೂಕು ತಲ್ಲೂರಿನಲ್ಲಿ ಈಚೆಗೆ ನಡೆದ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಇಬ್ಬರು ಮೃತಪಟ್ಟು, ಹಲವರು ಗಾಯಗೊಂಡ ನಂತರ ಹಲವು ಕಠಿಣ ಕ್ರಮ ಕೈಗೊಳ್ಳಲಾಗಿದೆ. ಸ್ಪರ್ಧೆ ಆಯೋಜಿಸಿದ್ದ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಾನ್‌ಸ್ಟೆಬಲ್‌ ಅಮಾನತು ಮಾಡಲಾಗಿದೆ. ಸಿಪಿಐ ಹಾಗೂ ಪಿಎಸ್‌ಐ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಯಾವ ಸ್ಥಳದಲ್ಲೂ ಭವಿಷ್ಯದಲ್ಲಿ ಸ್ಪರ್ಧೆ ನಡೆಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
 
ಮತ್ತೊಬ್ಬನ ಬಂಧನ: ನಗರದ ಪುರಲೆ ರಸ್ತೆಯ ಅನುಪಿನಕಟ್ಟೆ ಬಳಿ ಮಂಗಳವಾರ ಸಂಜೆ ದರೋಡೆಗೆ ಯತ್ನಿಸಿ, ಕಾಲಿಗೆ ಪೊಲೀಸರ ಗುಂಡೇಟು ತಗುಲಿದ್ದ ಆರೋಪಿ ಇರ್ಫಾನ್‌ ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿ ನರಸಯ್ಯನನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
 
ಆಟೊರಿಕ್ಷಾ ಮೀಟರ್‌ ಕಡ್ಡಾಯ: ಆಟೊರಿಕ್ಷಾಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಬೇಕು. ನಿಗದಿಪಡಿಸಿದ ದರ ಮಾತ್ರ ಪಡೆಯಬೇಕು. ಹೆಚ್ಚಿನ ದರ ವಸೂಲಿ ಮಾಡಿದರೆ ಕ್ರಮ ಜರುಗಿಸಲಾಗುವುದು. ಅದಕ್ಕಾಗಿ ಶೀಘ್ರ ಸಹಾಯವಾಣಿ ಆರಂಭಿಸಲಾಗುವುದು ಎಂದರು.
 
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನ್ಸೆಂಟ್ ಶಾಂತಕುಮಾರ್‌ ಉಪಸ್ಥಿತರಿದ್ದರು. 
 
***
ಒಂಬತ್ತು ಅಂತರಜಿಲ್ಲಾ ಆರೋಪಿಗಳ ಸೆರೆ 
ಶಿಕಾರಿಪುರ ವ್ಯಾಪ್ತಿಯಲ್ಲಿ ಕಳೆದ ಹಲವು ತಿಂಗಳಿನಿಂದ ಮನೆ, ದೇವಸ್ಥಾನ, ವಾಹನ ಕಳವು ಮಾಡುತ್ತಿದ್ದ 9 ಅಂತರ ಜಿಲ್ಲಾ ಆರೋಪಿಗಳನ್ನು ಶಿಕಾರಿಪುರ ಪೊಲೀಸರು ಬಂಧಿಸಿದ್ದಾರೆ.
 
ದಾದಾಪೀರ್ ಅಲಿಯಾಸ್ ಸೈಯದ್, ಪರ್ವಸ್‌ ಅಹಮದ್, ಜಿಯಾಉಲ್ಲಾ, ಜುಬೇರ್ ಅಹಮದ್‌, ಇನಾಯತ್ ಉಲ್ಲಾ, ಇರ್ಫಾನ್ ಅಹಮದ್‌, ಅಬ್ದುಲ್ ಹಮೀದ್, ಫಾರೂಕ್ ಉಲ್ಲಾ ಮತ್ತು ಕರಿಯಾ ಬಂಧಿತ ಆರೋಪಿಗಳು.
 
ಆರೋಪಿಗಳಿಂದ ₹ 13.70 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಅಭಿನವ್ ಖರೆ ಮಾಹಿತಿ ನೀಡಿದರು.
 
ಎಲ್ಲ ಆರೋಪಿಗಳೂ ಶಿರಾಳಕೊಪ್ಪದವರು. 27ರಿಂದ 32 ವರ್ಷದ ಒಳಗಿನ ಇವರು ಗಾರೆ ಕೆಲಸ, ಕೂಲಿ ಮಾಡುತ್ತಾ ಈ ಕೃತ್ಯಕ್ಕೆ ಇಳಿದಿದ್ದರು.
 
ಶಿವಮೊಗ್ಗ, ಉತ್ತರ ಕನ್ನಡ, ಹಾವೇರಿ, ದಾವಣಗೆರೆ ಮತ್ತು ಉಡುಪಿ ಜಿಲ್ಲೆಗಳ ವಿವಿಧೆಡೆ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಇದುವರೆಗೂ 13 ಮನೆ ಕಳವು, 26 ದೇವಸ್ಥಾನ ಹಾಗೂ ಬೈಕ್‌ ಕಳವು ಮಾಡಿದ್ದಾರೆ.  
 
ಶಿಕಾರಿಪುರ ಡಿವೈಎಸ್‌ಪಿ ಸುಧಾಕರ ನಾಯ್ಕ, ಸಿಪಿಐ ಹರೀಶ್ ಕೆ.ಪಟೇಲ್, ಶಿರಾಳಕೊಪ್ಪ ಪಿಎಸ್ಐ ಗುರುರಾಜ ಮೈಲಾರ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
 
***
2016ರಲ್ಲಿ 320 ಜನರ ಸಾವು
* ರಸ್ತೆ ಅಪಘಾತದಲ್ಲಿ 2016ರಲ್ಲಿ 320 ಜನರು ಮೃತಪಟ್ಟಿದ್ದಾರೆ. 2015ರಲ್ಲಿ  363 ಜನರು ಪ್ರಾಣ ಕಳೆದುಕೊಂಡಿದ್ದರು.
 
* 2016ರಲ್ಲಿ 2724 ಜನರು ಗಾಯಗೊಂಡರೆ. 2015ರಲ್ಲಿ 2577 ಜನ ಗಾಯಗೊಂಡಿದ್ದರು. 
 
* ನಿಯಮ ಉಲ್ಲಂಘಿಸಿ ವಾಹನ ಚಲಾಯಿಸಿದ 1,12,801 ಪ್ರಕರಣ ದಾಖಲಿಸಿ, ₹ 1.62 ಕೋಟಿ ದಂಡ ವಸೂಲು ಮಾಡಲಾಗಿದೆ ಎಂದು ಎಸ್‌ಪಿ ಅಭಿನವ ಖರೆ ತಿಳಿಸಿದರು.
 
***
ಪೊಲೀಸ್ ಅಧಿಕಾರಿಗಳ ಮೊಬೈಲ್‌ಗೆ ಸಾರ್ವಜನಿಕರು ಮಾಡುವ ಯಾವುದೇ ಕರೆಗಳನ್ನು ಸ್ವೀಕರಿಸಬೇಕು. ಅವರ ದೂರು, ಮಾಹಿತಿ ಕೇಳಬೇಕು. ಕರೆ ಸ್ವೀಕರಿಸದೇ ನಿರ್ಲಕ್ಷ್ಯ ಮಾಡಿದರೆ ಕ್ರಮ ಜರುಗಿಸಲಾಗುವುದು.
-ಅಭಿನವ್ ಖರೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.