ADVERTISEMENT

‘ಗ್ರಾಮ ಗದ್ದುಗೆ’ಗೆ ಪರೋಕ್ಷ ಸಮರ

ಮೂರು ತಾಲ್ಲೂಕಿನಿಂದ 82 ಅವಿರೋಧ ಆಯ್ಕೆ, ಒಟ್ಟು ಸದಸ್ಯ ಸ್ಥಾನ 2,958

​ಪ್ರಜಾವಾಣಿ ವಾರ್ತೆ
Published 26 ಮೇ 2015, 7:04 IST
Last Updated 26 ಮೇ 2015, 7:04 IST

ಶಿವಮೊಗ್ಗ: ಗ್ರಾಮ ಪಂಚಾಯ್ತಿ ಚುನಾವಣಾ ಕಣದಲ್ಲಿ ಉಳಿದವರ ಅಂತಿಮಪಟ್ಟಿ ಹೊರಬೀಳುತ್ತಿದಂತೆ ಪಕ್ಷದ ಬೆಂಬಲಿಗರಿಗೆ ‘ಗ್ರಾಮ ಗದ್ದುಗೆ’ ದೊರಕಿಸಲು ಕಾಂಗ್ರೆಸ್‌–ಬಿಜೆಪಿ–ಜೆಡಿಎಸ್‌ ಮಧ್ಯೆ ಪರೋಕ್ಷ ಸಮರ ತೀವ್ರಗೊಂಡಿದೆ.

ಮೂರೂ ಪಕ್ಷಗಳ ಮುಖಂಡರು ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಕಾರ್ಯತಂತ್ರ ಎಣೆಯುತ್ತಿದ್ದಾರೆ. ಪ್ರತಿ ತಾಲ್ಲೂಕಿನ ರಾಜಕೀಯ ಲೆಕ್ಕಾಚಾರ ಹಾಕುತ್ತಿರುವ ಪಕ್ಷಗಳು ಆಯಾ ತಾಲ್ಲೂಕುಗಳ ಗ್ರಾಮ ಪಂಚಾಯ್ತಿಗಳಲ್ಲಿ ಹೆಚ್ಚಿನ ಸ್ಥಾನ ಪಡೆದು ತಮ್ಮ ಬೆಂಬಲಿಗರು ಅಧಿಕಾರ ಹಿಡಿಯಲು ಅಗತ್ಯವಾದ ತಂತ್ರ ರೂಪಿಸುತ್ತಿವೆ. 

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ, ಸೊರಬ ಹಾಗೂ ಭದ್ರಾವತಿಯಲ್ಲಿ ಜೆಡಿಎಸ್‌ ಶಾಸಕರು ಇದ್ದು, ಅಲ್ಲಿ ಆ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಅನುಕೂಲವಾಗಿದೆ. 2013ರ ಚುನಾವಣೆಯ ನಂತರ ಭದ್ರಾವತಿಯಲ್ಲಿ ಕಳೆಗುಂದಿದ್ದ ಕಾಂಗ್ರೆಸ್‌ಗೆ ಬಿ.ಕೆ.ಸಂಗಮೇಶ್‌ ಮತ್ತೆ ಆಗಮಿಸುತ್ತಿದ್ದಾರೆ ಎಂಬ ಸುದ್ದಿ ಆ ಪಕ್ಷಕ್ಕೆ ಹೊಸ ಜೀವ ಕಳೆ ತಂದಿದೆ. ಇದರ ಪರಿಣಾಮ ಪಂಚಾಯ್ತಿ ಚುನಾವಣೆಯ ಮೇಲೂ ಬೀರಲಿದೆ.

ತೀರ್ಥಹಳ್ಳಿ ತಾಲ್ಲೂಕಿನ ಚುನಾವಣಾ ಉಸ್ತುವಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ ಅವರೇ ಸ್ವತಃ ವಹಿಸಿಕೊಂಡಿರುವುದು ಅಲ್ಲಿನ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳಿಗೆ ಆನೆಬಲ ತಂದಿದೆ. ಜತೆಗೆ, ಈಚೆಗಷ್ಟೇ ಕಾಂಗ್ರೆಸ್ ಸೇರಿದ ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಮಂಜುನಾಥ ಗೌಡರ ವೋಟ್‌ ಬ್ಯಾಂಕ್‌ ಆ ಪಕ್ಷದ ಬೆಂಬಲಿಗರಿಗೆ ವರದಾನವಾಗಿದೆ.

ಬಿಜೆಪಿ ಪರ ಮಾಜಿ ಶಾಸಕ ಆರಗ ಜ್ಞಾನೇಂದ್ರ ಬರುಸಿನ ಪ್ರಚಾರ ನಡೆಸುತ್ತಿದ್ದಾರೆ. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕಲಗೋಡು ರತ್ನಾಕರ ಹೊಸನಗರದಲ್ಲಿ ಬೀಡುಬಿಟ್ಟಿದ್ದು, ಕಾಂಗ್ರೆಸ್‌ ಪರ ಪ್ರಚಾರ ನಡೆಸುತ್ತಿದ್ದಾರೆ. ಶಾಸಕ ಮಧುಬಂಗಾರಪ್ಪ ಸೊರಬ–ಹೊಸನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಜೆಡಿಎಸ್‌ ಬೆಂಬಲಿತರ ಗೆಲುವಿಗೆ ಪಣತೊಟ್ಟಿದ್ದಾರೆ.

ಸಾಗರದಲ್ಲಿ ವಿಧಾನಸಭಾಧ್ಯಕ್ಷ ಕಾಗೋಡು ಬೆಂಬಲಿಗರು ಕಾಂಗ್ರೆಸ್ ಪರ, ಮಾಜಿ ಶಾಸಕ ಬೇಳೂರು ಗೋಪಾಲ ಕೃಷ್ಣ ಬಿಜೆಪಿ ಪರ ಪ್ರಚಾರ ಕೈಗೊಂಡಿದ್ದಾರೆ. ಶಿಕಾರಿಪುರದಲ್ಲಿ  ಸಂಸತ್‌  ಸದಸ್ಯ  ಬಿ.ಎಸ್. ಯಡಿಯೂರಪ್ಪ,  ಶಾಸಕ  ಬಿ.ವೈ.ರಾಘ ವೇಂದ್ರ  ಬಿಜೆಪಿ  ಬೆಂಬಲಿತ  ಅಭ್ಯರ್ಥಿ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಲು ಕಾರ್ಯತಂತ್ರ ರೂಪಿಸಿದ್ದಾರೆ.

2013ರ ಚುನಾವಣೆಯಲ್ಲಿ ಪರಾಜಿತರಾದ ಶಾಂತವೀರಪ್ಪ ಗೌಡ, ಕಾಂಗ್ರೆಸ್‌ ಬೆಂಬಲಿತರಿಗೆ ಗ್ರಾಮ ಗದ್ದುಗೆ ದೊರಕಿಸಲು ಅವಿರತ ಶ್ರಮಿಸುತ್ತಿದ್ದಾರೆ. ಸೊರಬ ಕ್ಷೇತ್ರದಲ್ಲಿ ಕುಮಾರ್‌ ಬಂಗಾರಪ್ಪ ಕಾಂಗ್ರೆಸ್ ಬೆಂಬಲಿತರ ಪರ, ಶಿವಮೊಗ್ಗ ಗ್ರಾಮಾಂತರ ಪ್ರದೇಶದಲ್ಲಿ ಶಾಸಕಿ ಶಾರದಾ ಪೂರ್‍ಯಾನಾಯ್ಕ ಜೆಡಿಎಸ್‌ ಪರ ಪ್ರಚಾರಕ್ಕೆ ಇಳಿದಿದ್ದಾರೆ. ಎಲ್ಲ ಪಕ್ಷಗಳ ಜಿಲ್ಲಾ, ತಾಲ್ಲೂಕು ಮುಖಂಡರೂ ಎಲ್ಲೆಡೆ ನಿರಂತರವಾಗಿ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದಾರೆ. 

ಇದಕ್ಕೆಲ್ಲ ನೀತಿ ಸಂಹಿತೆಯ ಹಂಗಿಲ್ಲ
ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿ ಇದ್ದರೂ ಕುಡಿಯುವ ನೀರಿನ ಕಾಮಗಾರಿ ಅನುಷ್ಠಾನಗೊಳಿಸಲು, ಧಾರ್ಮಿಕ, ಸಾಂಸ್ಕೃತಿ ಸಭೆ ನಡೆಸಲು, ನೆರೆಪೀಡಿತ, ಪ್ರಕೃತಿ ವಿಕೋಪ ಪೀಡಿತ ಜನರಿಗೆ ಪರಿಹಾರ ವಿತರಿಸಲು ಅಡ್ಡಿ ಇಲ್ಲ. ಆದರೆ, ರಾಜಕೀಯ ವ್ಯಕ್ತಿಗಳು ಸಭೆ–ಸಮಾರಂಭಗಳಲ್ಲಿ ಭಾಗವಹಿಸಿ, ಆಶ್ವಾಸನೆ ನೀಡುವಂತಿಲ್ಲ.

ಅಭ್ಯರ್ಥಿಗಳಿಗೆ ಚಿಹ್ನೆ ವಿತರಣೆ
ಮೇ 25ರಂದು ಮಧ್ಯಾಹ್ನ 3ಕ್ಕೆ ನಾಮಪತ್ರ ಹಿಂಪಡೆಯುವ ಅವಧಿ ಮುಗಿಯುತ್ತಿದ್ದಂತೆ ಆಯಾ ತಾಲ್ಲೂಕು ಕೇಂದ್ರಗಳಲ್ಲಿಅಭ್ಯರ್ಥಿಗಳಿಗೆ ಚುನಾವಣಾ ಚಿಹ್ನೆ ವಿತರಿಸಲಾಯಿತು.

ADVERTISEMENT

ಕಣದಲ್ಲಿ ಉಳಿದವವರು
ಜಿಲ್ಲೆಯ 263 ಗ್ರಾಮ ಪಂಚಾಯ್ತಿಗಳಿಗೆ ನಡೆಯುತ್ತಿರುವ ಚುನಾವಣೆಗೆ ಒಟ್ಟು 11,466 ನಾಮಪತ್ರ ಸಲ್ಲಿಕೆಯಾಗಿದ್ದವು. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಸೋಮವಾರ ಶಿವಮೊಗ್ಗದಲ್ಲಿ 1637, ಸಾಗರದಲ್ಲಿ 1084, ಶಿಕಾರಿಪುರದಲ್ಲಿ 1087 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಶಿವಮೊಗ್ಗದಲ್ಲಿ 18,  ಸಾಗರದಲ್ಲಿ 37 ಹಾಗೂ ಶಿಕಾರಿಪುರದಲ್ಲಿ 21 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ಉಳಿದ ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆ ಪಡೆದ ಕಾರಣ ಉಳಿದ ಅಭ್ಯರ್ಥಿಗಳ ಆಯ್ಕೆಯನ್ನು ಚುನಾವಣಾ ಅಧಿಕಾರಿಗಳ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.