ADVERTISEMENT

‘ದೇವರಲ್ಲಿ ವಿಶ್ವಾಸವಿಲ್ಲ, ಹೋರಾಟದಲ್ಲಿ ವಿಶ್ವಾಸ’

ಕೋಣಂದೂರು ಲಿಂಗಪ್ಪ ಅಭಿನಂದನಾ ಸಮಾರಂಭದಲ್ಲಿ ಕಾಗೋಡು ತಿಮ್ಮಪ್ಪ

​ಪ್ರಜಾವಾಣಿ ವಾರ್ತೆ
Published 26 ಜನವರಿ 2015, 10:18 IST
Last Updated 26 ಜನವರಿ 2015, 10:18 IST
ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರಿನಲ್ಲಿ ಭಾನುವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಹಿರಿಯ ಸಮಾಜವಾದಿ ಹೋರಾಟಗಾರ ಕೋಣಂದೂರು ಲಿಂಗಪ್ಪ ಅವರನ್ನು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅಭಿನಂದಿಸಿದರು.
ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರಿನಲ್ಲಿ ಭಾನುವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಹಿರಿಯ ಸಮಾಜವಾದಿ ಹೋರಾಟಗಾರ ಕೋಣಂದೂರು ಲಿಂಗಪ್ಪ ಅವರನ್ನು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅಭಿನಂದಿಸಿದರು.   

ತೀರ್ಥಹಳ್ಳಿ: ‘ನನಗೆ ದೇವರಲ್ಲಿ ವಿಶ್ವಾಸವಿಲ್ಲ. ಹೋರಾಟದಲ್ಲಿ ವಿಶ್ವಾಸವಿದೆ’ ಭೂಮಿಯ ಹಕ್ಕಿಗಾಗಿ ಕೊನೆಯ ಹೋರಾಟ ಆರಂಭಿಸಿದ್ದೇನೆ’ ಎಂದು ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.

ಭಾನುವಾರ ತಾಲ್ಲೂಕಿನ ಕೋಣಂದೂರು ಶರಾವತಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಸಮಾಜವಾದಿ ಹೋರಾಟಗಾರ ಕೋಣಂದೂರು ಲಿಂಗಪ್ಪ ಅವರಿಗೆ ದೇವರಾಜ ಅರಸು, ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರಶಸ್ತಿ ಹಿನ್ನೆಲೆಯಲ್ಲಿ ಅಭಿನಂದನಾ ಕಾರ್ಯಕ್ರಮ ಹಾಗೂ ಕೋಣಂದೂರು ಲಿಂಗಪ್ಪ ಅವರ ಕುರಿತ ಅಭಿನಂದನಾ ಗ್ರಂಥ ‘ಕೌತುಕ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಕೋಣಂದೂರು ಲಿಂಗಪ್ಪ ಅವರನ್ನು ಅಭಿನಂದಿಸಿ ಮಾತನಾಡಿದರು.

ತೀರ್ಥಹಳ್ಳಿ ಹೋರಾಟಕ್ಕೆ ಹೆಸರು ಪಡೆದ ಊರು.ಕೋಣಂದೂರು ಲಿಂಗಪ್ಪ ಅವರು ಶಾಂತವೇರಿ ಗೋಪಾಲಗೌಡರ ಮಾರ್ಗದರ್ಶನದ ಮೂಲಕ ಶಿಷ್ಯರಾಗಿ ಬೆಳೆದವರು. ರಾಜಕಾರಣ ಸಮಾಜದ ಹೋರಾಟದ ಕೆಲಸ ಎಂದು ಭಾವಿಸಿಕೊಂಡು ಹೋರಾಟಕ್ಕೆ ತಮ್ಮನ್ನು ತೊಡಗಿಸಿಕೊಂಡವರು ಎಂದರು.

ನಿಜವಾದ ಸಮಾಜವಾದಿಗಳಿಗೆ ಈ ಭೂಮಿಯ ಹೋರಾಟ ಅಪರೂಪದ ಹೋರಾಟ. ಇದನ್ನು ಮಾಡದಿದ್ದರೆ ಅರಣ್ಯ ಭೂಮಿಯಲ್ಲಿ ಇದ್ದವರಿಗೆ ಭೂಮಿ ಸಿಕ್ಕುವುದಿಲ್ಲ. ಅಧಿಕಾರಿಗಳು ದಿಕ್ಕು ತಪ್ಪಿಸಿದ್ದಾರೆ. ಅವರನ್ನು ದಾರಿಗೆ ತರಬೇಕು. ಚುನಾವಣೆಗಳಲ್ಲಿ ಸೋತರೂ ಚಿಂತೆಯಿಲ್ಲದೆ ಹುಲಿಗಳಾಗಿ ಕಾದಾಡಿದ್ದೇವೆ ಎಂದು ತಮ್ಮ ಹೋರಾಟದ ದಿನಗಳನ್ನು ಕಾಗೋಡು ಸ್ಮರಿಸಿದರು.

ಅರಣ್ಯ ಹಕ್ಕಿಗಾಗಿ ಹೋರಾಟ ಅನಿವಾರ್ಯವಾಗಿದೆ. ಆಲೋಚನೆ, ವಿಚಾರಗಳಿಗೆ ಯಾವತ್ತೂ ಸಾವಿಲ್ಲ. ಅದು ಜೀವಂತ ಇರಬೇಕು ಎಂದರು.

ಅರಣ್ಯ ಹಕ್ಕು ಕಾಯ್ದೆ ಬಗ್ಗೆ ಜನರು ಮಾತನಾಡುತ್ತಿಲ್ಲ. ಏನಾಗಿದೆ ಮಲೆನಾ ಡಿನವರಿಗೆ. ಇವತ್ತು ಕೆಲವು ಸಮಸ್ಯೆ
ಕೃತಕವಾಗಿ ಸೃಷ್ಟಿಯಾಗಿವೆ. ಮನೆ ಕಟ್ಟಿಕೊಳ್ಳುವಾಗ ಜಾಗ ಮಂಜೂರು ಮಾಡಿಸಿಕೊಂಡು ಕಟ್ಟಿದ್ದೇವೆಯೇ? ಎಂದು ಸಭಿಕರನ್ನು ಪ್ರಶ್ನಿಸಿ ಹೋರಾಟಕ್ಕೆ ಸಿದ್ಧರಾಗುವಂತೆ ಎಚ್ಚರಿಸಿದರು.

ಲಿಂಗಪ್ಪ ಅವರನ್ನು ಶಾಸಕರಾಗಿ ಆಯ್ಕೆ ಮಾಡಿರುವುದು ಈ ನೆಲದ ಸಂಸ್ಕೃತಿಯನ್ನು ಎತ್ತಿ ಹಿಡಿದಿದೆ. ಅಂದಿನ ಸುಸಂಸ್ಕೃತ ಜನರು  ಇಂದಿಗೂ ಇದ್ದಾರೆ. ಶಾಂತವೇರಿ ಗೋಪಾಲ ಗೌಡ ರಾಜಕೀಯ ಕಂಡಂತಹ ಅಪರೂಪದ ರಾಜಕಾರಣಿ. ಶಾಸನ ಸಭೆಯಲ್ಲಿ ಹೇಗೆ ಇರಬೇಕು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ಗೋಪಾಲಗೌಡರು ಶಾಸನ ಸಭೆಯಲ್ಲಿ ಆಡಿದ ಮಾತುಗಳನ್ನು ಸ್ಮರಿಸಿಕೊಂಡ ಕಾಗೋಡು ಭಾವುಕರಾದರು.

‘ಕೌತುಕ’ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿದ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ, ಸಮಾಜವಾದಿ ಚಿಂತನೆಯಿಂದ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿ ಬಹಳ ಎತ್ತರಕ್ಕೆ ಏರಲು ಸಾಧ್ಯ ಎಂಬುದಕ್ಕೆ ಕೋಣಂದೂರು ಲಿಂಗಪ್ಪ ಸಾಕ್ಷಿಯಾಗಿದ್ದಾರೆ. ಅವರು ನಡೆದು ಬಂದ ಹಾದಿ ಮಹತ್ವದ್ದು. ಅಂಥವರ ಬದುಕನ್ನು ದಾಖಲಿಸುವುದು ಒಳ್ಳೆಯ ಬೆಳವಣಿಗೆ ಎಂದರು.

ಅಭಿನಂದನಾ ಭಾಷಣ ಮಾಡಿದ ಹಂಪಿ ಕನ್ನಡ ವಿವಿ ಚರಿತ್ರೆ ವಿಭಾಗದ ಮುಖ್ಯಸ್ಥ ಡಾ.ಸಿ.ಆರ್‌.ಗೋವಿಂದರಾಜ್‌ ಕೋಣಂದೂರು ಲಿಂಗಪ್ಪ ಅವರಿಗೆ ಲಭಿಸಿದ ಪ್ರಶಸ್ತಿಗಳು ಅವರ ವ್ಯಕ್ತಿತ್ವವನ್ನು ತಿಳಿಸುತ್ತದೆ.

ಇಂದು ‘ಕರ್ನಾಟಕ’ ಎಂದು ಕರೆಯಲು ಅವರು ಕಾರಣರಾಗಿದ್ದಾರೆ. ಕನ್ನಡ ಚಳವಳಿಗೆ ತಳಪಾಯ ಸೃಷ್ಟಿಸಿಕೊಟ್ಟ ಹೋರಾಟಗಾರ ಎಂದರು.

ತಾಲ್ಲೂಕು ಕಸಾಪ ಅಧ್ಯಕ್ಷ ನೆಂಪೆ ದೇವರಾಜ್‌ ಸಮಾಜವಾದಿ ಹೋರಾಟಗಾ ರರಿಗಿದ್ದ ದೈರ್ಯ ಇಂದಿನ ರಾಜಕಾರಣಿಗಳಿಗಿಲ್ಲ. ಪುರೋಹಿತ ಶಾಹಿ ವ್ಯವಸ್ಥೆಗೆ ವಿರುದ್ಧವಾಗಿದ್ದು ಕೊಂಡೆ ಅವರ ಮತಗಳನ್ನು ಪಡೆದು ಕೋಣಂ ದೂರು ಲಿಂಗಪ್ಪ ಆಯ್ಕೆಯಾಗಿದ್ದರು ಎಂದರು.

‘ಕೌತುಕ‘ ಕೃತಿಯ ಕುರಿತು ಪ್ರಧಾನ ಸಂಪಾದಕ ಡಾ.ಜೆ.ಕೆ.ರಮೇಶ್‌ ಪುಸ್ತಕದಲ್ಲಿ ಅಡಕವಾಗಿರುವ ಮಹತ್ವದ ಕುರಿತು ವಿವರಿಸಿದರು. ಸಭೆಯಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಕುಲಸಚಿವ ಪ್ರೊ.ಎಚ್‌.ಎಸ್‌. ಗಣೇಶ ಮೂರ್ತಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕೋಣಂದೂರು ಲಿಂಗಪ್ಪ ಅಭಿನಂದನಾ ಸಮಿತಿ ಅಧ್ಯಕ್ಷ ಕೆ.ವಿ.ರತ್ನಾಕರ ವಹಿಸಿದ್ದರು. ಅಭಿನಂದನಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೋಣಂದೂರು ಅಶೋಕ್‌, ಬಾಲಚಂದ್ರ ಶೆಟ್ಟಿ ಇತರರು ಉಪಸ್ಥಿತರಿದ್ದರು

ಕೆ.ಜಿ.ಸ್ಮತಾ ಪ್ರಾರ್ಥಿಸಿದರು. ಡಾ.ಆರ್‌.ಎಂ. ಜಗದೀಶ್‌ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತೀಶ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.