ADVERTISEMENT

21ಕ್ಕೆ ಶಾಸನ ರಚನಾ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 5:05 IST
Last Updated 18 ಫೆಬ್ರುವರಿ 2017, 5:05 IST
ಶಿವಮೊಗ್ಗ:  ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಫೆ. 21ರಂದು ವಿಧಾನ ಮಂಡಲದ ಅಧೀನ ಶಾಸನ ರಚನಾ ಸಮಿತಿ ಸಭೆ ನಡೆಯಲಿದೆ. 
 
ಸಮಿತಿಯ ಅಧ್ಯಕ್ಷ ಸಿದ್ದು ಬಿ.ನ್ಯಾಮಗೌಡ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಜಿಲ್ಲೆಯಲ್ಲಿ ಅಧೀನ ಶಾಸನಗಳ ಸಮಿತಿ ಸಭೆ ನಡೆಯುತ್ತಿರುವುದು ಇತಿಹಾಸದಲ್ಲಿ ಇದೇ ಮೊದಲು ಎಂದು ಶಾಸಕ ಕೆ.ಬಿ. ಪ್ರಸನ್ನಕುಮಾರ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
 
ಸಭೆಯಲ್ಲಿ ಪ್ರಮುಖವಾಗಿ ಜಲ ಸಂಪನ್ಮೂಲ ಇಲಾಖೆಗೆ ಸಂಬಂಧಿಸಿದ ವಿಷಯಗಳು ಚರ್ಚೆಗೆ ಬರಲಿವೆ. ತಾವೂ ಕೂಡ ಸಮಿತಿಯ ಸದಸ್ಯ. ಶಿವಮೊಗ್ಗದಲ್ಲಿ ಸಭೆ ನಡೆಸಬೇಕು ಎಂಬ ಮನವಿಗೆ ಸಮಿತಿ ಸ್ಪಂದಿಸಿದೆ ಎಂದು ಮಾಹಿತಿ ನೀಡಿದರು.
 
ಗಾಜನೂರು ಜಲಾಶಯ ಸುತ್ತಲ ಪ್ರದೇಶವನ್ನು ಮೈಸೂರಿನ ಬೃಂದಾವನ ಮಾದರಿಯಲ್ಲಿ ಅಭಿವೃದ್ದಿಪಡಿಸುವುದು, ಜಲಾಶಯದಲ್ಲಿ ಸಂಗ್ರಹವಾಗಿರುವ ಹೂಳು, ಮರಳು ತೆರೆವುಗೊಳಿಸುವ ಕುರಿತು ಚರ್ಚಿಸಲಾಗುವುದು. ಸಮಿತಿ ತೆಗೆದುಕೊಂಡ ನಿರ್ಧಾರವನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.ಆರು ದಿನಗಳ ಕಾಲ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ತಮಗೆ ಹಲವು ವಿಚಾರ ಪ್ರಸ್ತಾಪ ಮಾಡುವ ಅವಕಾಶ ದೊರಕಿತು.
 
ರಾಜ್ಯದಲ್ಲಿ ಶಿಥಿಲವಾಸ್ಥೆ ತಲುಪಿರುವ ಗುರುಭವನಗಳ ದುಸ್ಥಿತಿ, ಹೊಸ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ದೊರೆತಿದೆ. ಶಿಕ್ಷಣ ಸಚಿವರು ಶಿವಮೊಗ್ಗದ  ಗುರುಭವನ ನಿರ್ಮಾಣಕ್ಕೆ ₹ 50 ಲಕ್ಷ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಆಂಧ್ರ, ತಮಿಳುನಾಡು ರಾಜ್ಯಗಳಲ್ಲಿ ಮಧುಮೇಹ ರೋಗ ಹತೋಟಿಗೆ ತರಲು ಉಚಿತವಾಗಿ ಮೆಟಾಬೋಲಿಕ್ ಸರ್ಜರಿ ಮಾಡಲಾಗುತ್ತಿದೆ.
 
ಸುಮಾರು ₹ 3ರಿಂದ 4 ಲಕ್ಷ ತಗುಲುವ ಈ ಶಸ್ತ್ರ ಚಿಕಿತ್ಸೆಯನ್ನು ಆರೋಗ್ಯ ಯೋಜನೆಗಳಲ್ಲಿ ಸೇರಿಸಿದರೆ ಬಡವರಿಗೆ ಅನುಕೂಲವಾ ಗುತ್ತದೆ. ಅದಕ್ಕೆ ಆರೋಗ್ಯ ಸಚಿವರು ಸ್ಪಂದಿಸಿದ್ದಾರೆ  ಎಂದು ವಿವರಿಸಿದರು.
 
ನಗರದ ಆಲ್ಕೋಳದಲ್ಲಿರುವ ಸ್ತ್ರೀಶಕ್ತಿ ಭವನ ಚಿಕ್ಕದಾಗಿದೆ. ಸಂಘಟನೆಯಲ್ಲಿ ಸಾವಿರಾರು ಮಹಿಳೆಯರು ತೊಡಗಿಕೊಂಡಿದ್ದಾರೆ. ಹೀಗಾಗಿ ಬೃಹತ್ ಭವನ ನಿರ್ಮಿಸಲಾಗುವುದು. ಆದಾಯ ಪ್ರಮಾಣ ಪತ್ರ ಪಡೆಯಲು ಇರುವ ಆದಾಯ ಮಿತಿ ₹ 1 ಲಕ್ಷಕ್ಕೆ ಹೆಚ್ಚಳ ಮಾಡಲಾಗುತ್ತಿದೆ.  ಶಿವಮೊಗ್ಗ ನಗರಕ್ಕೆ ಹೊರ ವರ್ತುಲ ರಸ್ತೆ ಕಾಮಗಾರಿ ಪ್ರಾರಂಭಿಸಬೇಕು.  ಹಳೆಯ ಕಾರಾಗೃಹ ಸ್ಥಳಾಂತರಗೊಳಿಸಿ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ ಮಾದರಿಯಲ್ಲಿ ಅಭಿವೃದ್ದಿಗೊಳಿಸಬೇಕು. ಮೆಗ್ಗಾನ್ ಆಸ್ಪತ್ರೆಯಲ್ಲಿ ಜಯದೇವ ಹೃದಯ ತಪಾಸಣಾ ಘಟಕ ಪ್ರಾರಂಭಿಸಬೇಕು ಎಂಬ ಮನವಿಗೆ ಸರ್ಕಾರ ಸ್ಪಂದಿಸಿದೆ ಎಂದು ಮಾಹಿತಿ ನೀಡಿದರು.
 
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಎನ್. ರಮೇಶ್, ಪಂಡಿತ್‌ ವಿಶ್ವನಾಥ್ (ಕಾಶಿ), ದೀಪಕ್ ಸಿಂಗ್, ಎ.ಎಚ್.ಸುನಿಲ್, ನಾಗರಾಜ್ ಉಪಸ್ಥಿತರಿದ್ದರು.
 
* ಮಾಜಿ ಸಚಿವ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ತೊರೆಯುವುದಿಲ್ಲ.  ಬಿಜೆಪಿ ಸಂಸ್ಕೃತಿ ಅವರಿಗೆ ಒಗ್ಗುವುದಿಲ್ಲ.
–ಕೆ.ಬಿ. ಪ್ರಸನ್ನಕುಮಾರ್,  ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.