ADVERTISEMENT

ಅಣ್ಣೆ ಹೂವಿನ ಉಯ್ಯಾಲೆ

ಹಳ್ಳಿ ಸುರೇಶ
Published 17 ಜನವರಿ 2016, 9:12 IST
Last Updated 17 ಜನವರಿ 2016, 9:12 IST
ಅಣ್ಣೆ ಹೂವಿನ ಉಯ್ಯಾಲೆ
ಅಣ್ಣೆ ಹೂವಿನ ಉಯ್ಯಾಲೆ   

ತುದಿಯಲ್ಲಿ ಒಂದಿಷ್ಟೇ ತೆಳು ಕೆಂಪು, ಉಳಿದಿದ್ದೆಲ್ಲ ತಿಳಿ ಬಿಳಿ. ಶೃಂಗ ಗುಚ್ಚದಂತೆ ನವಿರಾಗಿ ಬಿರಿದಿರುವ ಇದು ಅಣ್ಣೆ ಹೂ. ಹುರುಳಿ ಹೊಲಗಳಲ್ಲಿ ಹಾಲು ಚೆಲ್ಲಿದಂತೆ ತೊನೆಯುತ್ತಿರುವ ಹೂವಿಗೆ ಈಗ ಬೆಸೆದಿದೆ ಜೇನಿನ ನಂಟು.

ಹೊಲಗಳಲ್ಲಿ ಸಹಜವಾಗಿ ಬೆಳೆಯುವ ಅಣ್ಣೆ ಸೊಪ್ಪಿನ ಬಗ್ಗೆ ಕೇಳದೇ ಇರುವ ಗ್ರಾಮೀಣ ಜನರಿಲ್ಲ. ಬಲ್ಲವರೇ ಬಲ್ಲರು ಅಣ್ಣೆ ಸೊಪ್ಪಿನ ಸಾರಿನ ಸವಿರುಚಿ. ಆರೋಗ್ಯ ದೃಷ್ಟಿಯಿಂದಲೂ ಈ ಸೊಪ್ಪು ಹೆಸರುವಾಸಿ. ಸುಗ್ಗಿ ಕಾಲದಲ್ಲಿ ಹೊಲದ ಕಟಾವು ಮುಗಿದಾಗ ರಾಸುಗಳ ಮೇವಿಗೆ ನಾನಿದ್ದೇನೆಂದು ನೆರವಾಗುವ ಅಣ್ಣೆಯ ಉಪಯೋಗ ತರಹೇವಾರಿ.

ಇಷ್ಟೆಲ್ಲ ಇದ್ದರೂ ಇದಕ್ಕೆ ಹೊಲದಲ್ಲಿ ಹುಟ್ಟುವ ‘ಕಳೆ’ ಎಂಬ ಅಪಖ್ಯಾತಿ ತಪ್ಪಿಲ್ಲ. ಬರದಲ್ಲೂ ಬೆಳೆದು ಕಳೆಗಟ್ಟುವ ಅಣ್ಣೆಗೆ ಸರಿ ಸಾಟಿ ಇಲ್ಲ. ಇಂಥ ಅಣ್ಣೆ ಗಿಡಕ್ಕೆ ಈಗ ಹೂವು ಹೊತ್ತು ತೊನೆಯುವ ಕಾಲ. ತಿಪಟೂರು ತಾಲ್ಲೂಕಿನ ಬಹುತೇಕ ಕಡೆ ಹುರುಳಿ, ಅರಳು ಗಿಡದ ಹೊಲಗಳಲ್ಲಿ ಎಲ್ಲಿ ನೋಡಿದರೂ ಅಣ್ಣೆ ಹೂವು ಬೆಳ್ಳಿ ಮೋಡದಂತೆ ಆವರಿಸಿದೆ. ನಮ್ಮ ಪಾಲಿಗೆ ಇದಾದರೂ ಇದೆ ಎಂಬಂತೆ ಜೇನು ನೊಣಗಳು ಮುತ್ತಿಕೊಂಡಿವೆ. ವಾಲಾಡುವ ಬಿಳಿ ಹೂ, ಜೇಂಕರಿಸುವ ಜೇನು ವಿಶಿಷ್ಟ ಸನ್ನಿವೇಶವನ್ನೇ ಸೃಷ್ಟಿಸಿವೆ.

ಈ ಕಾಲದಲ್ಲಿ ಚಿಟ್ಟ ಜೇನುಗಳು ಹೆಚ್ಚು. ಇವಕ್ಕೆಲ್ಲಾ ಅಣ್ಣೆ ಹೂವಿನ ಮಕರಂದ ಆಧಾರ. ಹಾಗಾಗಿಯೇ ಚಿಟ್ಟ ಜೇನು ತುಪ್ಪ ಬಲು ರುಚಿ ಎನ್ನುತ್ತಾರೆ. ಈ ಜೇನು ತುಪ್ಪದಲ್ಲಿ ಔಷಧ ಗುಣವೂ ಹೆಚ್ಚಂತೆ. ಈ ಜೇನು ಸಿಕ್ಕರೆ ಸಂಗ್ರಹಿಸಿಟ್ಟುಕೊಂಡು ಅನಾರೋಗ್ಯ ಸಂದರ್ಭ ಮಕ್ಕಳಿಗೆ ಬಳಸುವುದುಂಟು.

ಅಣ್ಣೆ-ಜೇನಿನ ನಂಟು ಈ ಪರಿಯಾದರೆ ಈಗ ಹಳ್ಳಿಗಳಲ್ಲಿ ರೈತರ ಮನೆ ಮುಂದೆ ಕಾಣುವ ಹೊಲದಲ್ಲಿ ಕಿತ್ತು ತಂದ ಹುಲ್ಲಿನಲ್ಲಿ ಅಣ್ಣೆ ಸೊಪ್ಪೇ ಹೆಚ್ಚು. ಹೊಲ, ಬದುಗಳಲ್ಲಿ ಹುಲ್ಲು ಮುಗಿಯುವ ಈ ವೇಳೆಗೆ ಸರಿಯಾಗಿ ಇನ್ನೂ ಹಸಿರು ಉಳಿಸಿಕೊಂಡು ಬಿಳಿ ಹೂ ಮುಡಿದಿರುವ ಅಣ್ಣೆ ಸೊಪ್ಪು ರಾಸುಗಳಿಗೆ ಬಲು ಅಚ್ಚು ಮೆಚ್ಚು. ಹಾಕಿದರೆ ಸಾಕು ಸೊಗಸಾಗಿ ಮೇಯುತ್ತವೆ.

ರಾಸುಗಳ ಹಾಲು ಹೆಚ್ಚಲು ಮತ್ತು ಅವುಗಳ ಆರೋಗ್ಯಕ್ಕೂ ಇದು ಒಳ್ಳೆಯದು ಎಂಬ ನಂಬಿಕೆ ಇದೆ. ‘ಹಿಂದೆ ಬರಗಾಲ ಬಂದಿದ್ದಾಗ ರಾಗಿ ಜತೆ ಅಣ್ಣೆ ಬೀಜವನ್ನೂ ಬೀಸಿ ಮುದ್ದೆ ಮಾಡುತ್ತಿದ್ದೆವು’ ಎಂದು ಹಿರಿಯರು ನೆನಪಿಸುತ್ತಾರೆ. ಅಣ್ಣೆ ಗಿಡ ಮತ್ತು ಹೂ ಜನಪದ ಹಾಡುಗಳಲ್ಲೂ ಬಳಕೆಯಾಗಿದೆ.

ಜನಪದ ಪ್ರಕಾರವಾದ ಕರಪಾಲದ ಉಪ ಕತೆಯೊಂದರಲ್ಲಿ ಅಣ್ಣೆ ಹೂ ಪ್ರಸ್ತಾಪವಾಗುತ್ತದೆ. ಮುಖ್ಯ ಕತೆಗಾರ ಕತೆ ಕಟ್ಟುತ್ತಾ ‘ಹಣ್ಣಣ್ಣು ಮುದುಕ. ಮುಖವೆಲ್ಲಾ ಸುಕ್ಕು. ಕೈಕಾಲು ಅದುರು...’ ಎಂದು ಮುದುಕನ ವಿವರಣೆ ಕೊಡಲು ಮುಂದಾಗುತ್ತಾನೆ. ಪಕ್ಕದ ಸಾತ್ ಕೊಡುವ ಕಲಾವಿದ ‘ವಯಸ್ಸಾಗಿತ್ತು ಅನ್ನೋದಕ್ಕೆ ಅಷ್ಟೆಲ್ಲಾ ವಿವರಣೆ ಯಾಕೆ. ಒಟ್ಟಿನಲ್ಲಿ ಅಣ್ಣೆ ಹೂವಿನ ತಲೆಯವನು ಅನ್ನು ಸಾಕು’ ಎಂದು ಚಟಾಕಿ ಹಾರಿಸುವ ಪ್ರಸಂಗವಿದೆ.

ಅಣ್ಣೆಗೂ ರೈತರಿಗೂ ಅವಿನಾಭಾವ ಸಂಬಂಧವಿದೆ. ಈ ಹೂವಿಲ್ಲದೆ ದೀಪಾವಳಿಯೇ ಆಗದು ಎಂಬಷ್ಟರ ಮಟ್ಟಿಗೆ ಮೆರುಗು ಉಳಿಸಿಕೊಂಡಿದೆ. ಮನೆ ಮುಂದೆ ಸೆಗಣಿಯಿಂದ ಹಾಕುವ ಕೆರಕಕ್ಕೆ ಅಣ್ಣೆ ಹೂ ಮುಡಿಸುವುದು ವಾಡಿಕೆ. ಅಣ್ಣೆ ಹೂ ಮುಡಿಸಿದ ಕೆರಕಪ್ಪನ ಸೊಗಸೇ ಬೇರೆ.

ಕಣದಲ್ಲಿ ರಾಶಿ ಪೂಜೆ ಮಾಡುವಾಗಲೂ ಅಣ್ಣೆ ಹೂವಿನಿಂದ ಸಿಂಗರಿಸುತ್ತಾರೆ. ಮಕ್ಕಳು ಅಣ್ಣೆ ಹೂವಿನಿಂದ ಹಾರ ಮಾಡಿ ಆಟವಾಡುತ್ತಾರೆ. ಇಂಥ ಅಣ್ಣೆ ಹೂವಿಗೂ ಈಗ ಒಂಥರಾ ಸುಗ್ಗಿ ಕಾಲ. ಬೀಜವೆಲ್ಲಾ ಬಲಿತಿರುವ ಅಣ್ಣೆ ಹೂವು ಆ ಮೂಲಕ ತನ್ನ ವಂಶ ಬೆಳೆಸುತ್ತದೆ. ಮೇವಿನ ರೂಪದಲ್ಲಿ ಹಸು, ಕುರಿ ಹೊಟ್ಟೆ ಸೇರಿ ಬೀಜ ವಿಸ್ತರಿಸುತ್ತದೆ.

ನಾಟಿ ವೈದ್ಯದಲ್ಲಿ ಅಣ್ಣೆ ಬೀಜಕ್ಕೆ ಸೊಪ್ಪಿನಷ್ಟೇ ಪ್ರಾಧಾನ್ಯತೆ ಇದೆ. ನಾಟಿ ವೈದ್ಯದಲ್ಲಿ ಕೋಲಾಣಿ ಎಂದು ಕರೆಯುವ ಅಣ್ಣೆ ಬೀಜವನ್ನು ಮೂಲವ್ಯಾಧಿ ಗುಣಪಡಿಸಲು ಬಳಸುತ್ತಾರೆ ಎನ್ನುತ್ತಾರೆ ಪಂಡಿತ ಪರಮಶಿವಯ್ಯ. ಅಣ್ಣೆ ಬೀಜದ ಜತೆ ನಾಲ್ಕೈದು ರೀತಿ ಬೀಜ ಮತ್ತು ಸೊಪ್ಪು ಬೆರೆಸಿ ಮಾಡುವ ಔಷಧ ಮೂಲವ್ಯಾಧಿಗೆ ರಾಮ ಬಾಣವಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.