ADVERTISEMENT

ಅಧಿಕಾರಿಗಳ ಬೇಜವಾಬ್ದಾರಿಗೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 5:14 IST
Last Updated 16 ಏಪ್ರಿಲ್ 2017, 5:14 IST
ಅಧಿಕಾರಿಗಳ ಬೇಜವಾಬ್ದಾರಿಗೆ ಅಸಮಾಧಾನ
ಅಧಿಕಾರಿಗಳ ಬೇಜವಾಬ್ದಾರಿಗೆ ಅಸಮಾಧಾನ   

ಪಾವಗಡ: ತಾಲ್ಲೂಕಿನ ಬಹುತೇಕ ಗ್ರಾಮಗಳ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಆದರೆ ಕಿಲಾರ್ಲಹಳ್ಳಿ, ಕಿಲಾರ್ಲಹಳ್ಳಿ ತಾಂಡಾದ ಕೊಳವೆ ಬಾವಿಯಲ್ಲಿ ನೀರಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಜನರು ಗುಟುಕು ನೀರಿಗಾಗಿ ಖಾಸಗಿ ಕೊಳವೆ ಬಾವಿಗಳಿಗೆ ಅಲೆಯಬೇಕಿದೆ.

ನೀರು ಪೂರೈಸುವ ಸಲುವಾಗಿ ಕಿಲಾರ್ಲಹಳ್ಳಿ ಗ್ರಾಮದಲ್ಲಿ 4 ಕೊಳವೆ ಬಾವಿ ಕೊರೆಸಲಾಗಿತ್ತು. ಅವುಗಳಲ್ಲಿ 2 ಕೊಳವೆ ಬಾವಿ ಬತ್ತಿವೆ. ಎರಡು ಕೊಳವೆ ಬಾವಿಗಳಲ್ಲಿ ಸಾಕಷ್ಟು ನೀರಿದೆ. ಆದರೆ ಪೈಪ್‌ಲೈನ್, ಶೇಖರಣಾ ತೊಟ್ಟಿಗಳ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಕಿಲಾರ್ಲಹಳ್ಳಿ, ಕಿಲಾರ್ಲಹಳ್ಳಿ ತಾಂಡಾ ಹಾಗೂ ಕಾಲೊನಿ ಜನರು ಖಾಸಗಿ ಜಮೀನುಗಳಲ್ಲಿರುವ ಕೃಷಿ ಪಂಪ್‌ಸೆಟ್ ಗಳಿಂದ ನೀರು ತರಬೇಕಿದೆ.

‘ತಾಂಡಾಕ್ಕೆ ಕೇವಲ ಒಂದು ಸಾರ್ವಜನಿಕ ನಲ್ಲಿ ಅಳವಡಿಸಲಾಗಿದೆ. ತಾಂಡಾದ ಸುಮಾರು 400 ಜನರು ಇದೇ ನಲ್ಲಿಯಿಂದ ನೀರು ಸಂಗ್ರಹಿಸಬೇಕು.  ತಾಂಡಾಕ್ಕೆ ನೀರು ಪೂರೈಸುವ ಪೈಪ್‌ಲೈನ್ ಏಳು ಕಡೆ ಒಡೆದಿದೆ. ಸಾಕಷ್ಟು ನೀರು ಪೋಲಾಗುತ್ತಿದೆ. ಹೀಗಾಗಿ ಕಡಿಮೆ  ನೀರು ನಲ್ಲಿಯಲ್ಲಿ ಬರುತ್ತದೆ. ಒಂದು ಬಿಂದಿಗೆ ನೀರು ಸಂಗ್ರಹಿಸಲು ಗಂಟೆಗಟ್ಟಲೆ ಕಾಯಬೇಕು’ ಎಂದು ಮಹಿಳೆಯರ ದೂರುವರು.

ADVERTISEMENT

‘ಜನರು ಬೆಳಿಗ್ಗೆ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಮನೆ ಸೇರುವ ವೇಳೆಗೆ ರಾತ್ರಿಯಾಗಿರುತ್ತದೆ. ಆಗ ಬಿಂದಿಗೆ ಹಿಡಿದು ನೀರಿಗೆ ಹುಡುಕಾಟ ನಡೆಸಬೇಕಿದೆ’ ಎಂದು ಮಹಿಳೆಯರು ಅಳಲು ತೋಡಿಕೊಂಡರು.‘ಪೈಪ್‌ಲೈನ್ ದುರಸ್ತಿಪಡಿಸಿ, ಹೆಚ್ಚುವರಿ ನಲ್ಲಿ ಅಳವಡಿಸಬೇಕು. ನೀರು ಶೇಖರಣಾ ತೊಟ್ಟಿ ನಿರ್ಮಿಸಿ ಸದಾ ನೀರು ಲಭ್ಯವಾಗುವ ವ್ಯವಸ್ಥೆ ಮಾಡಬೇಕು’ ಎಂದು ಗ್ರಾಮಸ್ಥರು ಆಗ್ರಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.