ADVERTISEMENT

ಅಸಡ್ಡೆ ತೋರುವ ಪಿಡಿಒ ವಿರುದ್ಧ ಕ್ರಮ

ಉದ್ಯೋಗ ಖಾತರಿ ಯೋಜನೆ ಪ್ರಗತಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2017, 10:04 IST
Last Updated 13 ಜನವರಿ 2017, 10:04 IST
ಗುಬ್ಬಿ: ಉದ್ಯೋಗ ಖಾತರಿ ಯೋಜನೆ ಬಗ್ಗೆ ಅಸಡ್ಡೆ ತೋರುವ ಹಾಗೂ ಸಕಾಲಕ್ಕೆ ಹಣಪಾವತಿ ಮಾಡದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕರಿಯಪ್ಪ ಎಚ್ಚರಿಕೆ ನೀಡಿದರು.
 
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನರೇಗಾ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಪ್ರತಿ ಪಿಡಿಒ ನರೇಗಾ ಬಗ್ಗೆ ಅಸಡ್ಡೆ ತೋರುತ್ತಿದ್ದೀರಿ. ಯಾರು ಕಳಪೆ ಗುರಿ ಮುಟ್ಟುತ್ತಿರೋ, ಅವರ ವಿರುದ್ಧ ಕಠಿಣ ಕ್ರಮ ಹಾಗೂ ₹ 1 ಸಾವಿರ ದಂಡ ವಿಧಿಸಲಾಗುವುದು ಎಂದರು. 
 
‘ಜಿಲ್ಲೆಯಲ್ಲಿ ಇ-ಹಾಜರಾತಿ ಕಡ್ಡಾಯವಾಗಿದೆ. ಹೆಚ್ಚು ಪಿಡಿಒಗಳು ಇ–ಹಾಜರಾತಿ ಹಾಕುವರು. ಆದರೆ ಹಿಂದಿರುಗುವಾಗ ‘ಲಾಗ್ ಔಟ್’ ಆಗುತ್ತಿಲ್ಲ.  ನೀವುಗಳು ಕಚೇರಿಯಲ್ಲೇ ವಾಸ ಮಾಡುತ್ತಿರಾ? ಎಂದು ಪ್ರಶ್ನಿಸಿದರು.
 
ಪ್ರತಿ ಪಂಚಾಯಿತಿಯಿಂದ ತಲಾ 10 ಕೃಷಿ ಹೊಂಡ, ಕೊಟ್ಟಿಗೆ ನಿರ್ಮಾಣವಾಗಬೇಕು ಎಂದು  ಅಕ್ಟೋಬರ್‌ನಲ್ಲಿ ಹೇಳಿದ್ದರೂ ಚಾಲನೆ ನೀಡಿಲ್ಲ. ಜ.12ರ ಸ್ವಾಮಿ ವಿವೇಕಾನಂದ ಜಯಂತಿಯಂದು ನರೇಗಾ ಅಡಿ ನಿರ್ಮಾಣವಾಗಿರುವ ಕನಿಷ್ಠ ಮೂರು ಕ್ರೀಡಾಂಗಣಗಳನ್ನು ಉದ್ಘಾಟಿಸಬೇಕು ಎಂದು ತಾಕೀತು ಮಾಡಿದರು. 
 ಕೃಷಿ ಹೊಂಡ ನಿರ್ಮಾಣದ ಕುರಿತು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚಿಕ್ಕಪ್ಪಯ್ಯ ಅಸಮಾಧಾನ ವ್ಯಕ್ತಪಡಿಸಿದರು.  
 
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಜೆ.ಶಾಂತರಾಂ ಮಾತನಾಡಿ, ‘ಪಿಡಿಒಗಳಿಗೆ ಯೋಜನೆಗಳ ಬಗ್ಗೆ ಸಮರ್ಪಕ ಮಾಹಿತಿ ಲಭ್ಯವಾಗದಿದ್ದಲ್ಲಿ ಇಲಾಖೆ ಸಂಪರ್ಕಿಸಿ. ಅರ್ಧ ತಿಳಿದವರಿಂದ ತಪ್ಪು ಮಾಹಿತಿ ತಿಳಿದು, ಕಾಮಗಾರಿ ನಡೆಸಬೇಡಿ’ ಎಂದರು.
 
ರೇಷ್ಮೆ ಇಲಾಖೆಯಲ್ಲಿ ಇಬ್ಬರು ಸಿಬ್ಬಂದಿ ಇದ್ದೇವೆ. ಯಾವುದೇ ಮೂಲ ಸೌಕರ್ಯ ಇಲ್ಲ. ತಾಲ್ಲೂಕಿನಲ್ಲಿ ತೋಟಗಾರಿಕಾ ಬೆಳೆಗೆ ರೈತರು ಆದ್ಯತೆ ನೀಡುತ್ತಿದ್ದು ನಿಗದಿತ ಗುರಿಮುಟ್ಟಲು ಸಾಧ್ಯವಾಗುತ್ತಿಲ್ಲ ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರು ಅಳಲು ತೋಡಿಕೊಂಡರು. 
 
ಅಮ್ಮನಘಟ್ಟ, ನಿಟ್ಟೂರು, ಶಿವಪುರ, ಹೊಸಕೆರೆ, ಅಂಕಸಂದ್ರ, ಕೊಂಡ್ಲಿ, ಹಾಗಲವಾಡಿ, ಅಮ್ಮನಘಟ್ಟ, ಪೆದ್ದನಹಳ್ಳಿ, ಎಂ.ಎಚ್.ಪಟ್ಟಣ ಪಂಚಾಯಿತಿಗಳು ನರೇಗಾ ಯೋಜನೆಯಡಿ ಕಾರ್ಮಿಕರಿಗೆ ನಿಗದಿತ ದಿನಗಳ ಕೆಲಸ ನೀಡಿಲ್ಲ ಎನ್ನುವ ದೂರುಗಳು ಕೇಳಿ ಬಂದವು. 
 
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿವಪ್ರಕಾಶ್, ಯೋಜನಾಧಿಕಾರಿ ರಂಗಸ್ವಾಮಿ ಇತರರು ಇದ್ದರು. 
 
**
ಒಳ್ಳೆ ಜಾಗ ನೋಡ್ಕೋ
16 ಸಾವಿರ ಕೃಷಿ ಹೊಂಡ ನಿರ್ಮಾಣ ಮಾಡಲು ಸರ್ಕಾರ ಸೂಚಿಸಿದೆ. ಆದರೆ ಇಲ್ಲಿ ಒಂದೂ ಕೃಷಿ ಹೊಂಡ ಆಗಿಲ್ಲ. ನೀನೇನ್ ಮಾಡ್ತೀಯಾ. ಫೀಲ್ಡ್‌ಗೆ ಹೋಗಿದ್ರೆ ಈ ರೀತಿ ಆಗುತ್ತಿರಲಿಲ್ಲ. ಇಒ ನಿನಗೆ ಕೆಲಸ ಮಾಡುವುದಕ್ಕೆ ಆಗಲ್ಲ. ಸಸ್ಪೆಂಡ್ ಆಗುವುದರಲ್ಲಿ ಒಳ್ಳೆ ಜಾಗ ನೋಡ್ಕೋ
–ಕರಿಯಪ್ಪ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ 
 
**
ಕಡತ ನಾಪತ್ತೆ
ಶಿವಪುರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಗ್ರಾಮ ಪಂಚಾಯಿತಿ ಕ್ರೀಡಾಂಗಣ ನಿರ್ಮಾಣ ಮಾಡಿದೆ. ಆದರೆ ಇದಕ್ಕೆ ಸಂಬಂಧಿಸಿದ ಕಡತ ಇಲ್ಲ. ಅಲ್ಲದೆ ಈಗಿರುವ ಬಹುತೇಕ ಕಡತಗಳಲ್ಲಿ ದಾಖಲೆಗಳು ಸರಿಯಿಲ್ಲ. ಆದರೂ ಬಿಲ್ ಪಾವತಿ ಮಾಡಿದ್ದಾರೆ ಎಂದು ಪಿಡಿಒ ಕಷ್ಟ ತೋಡಿಕೊಂಡರು.  

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.