ADVERTISEMENT

ಎದ್ದು ನಿಲ್ಲಲು ಎಷ್ಟು ಕಾಲ ಬೇಕೋ

ಬಾರದ ಮಳೆ ನೀಡಿದ ಗುದ್ದಿಗೆ ರೈತರು ಕಂಗಾಲು* ದನ–ಕರುಗಳ ನೀರಿಗೂ ದಮ್ಮಯ್ಯಗುಡ್ಡೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2015, 10:00 IST
Last Updated 31 ಆಗಸ್ಟ್ 2015, 10:00 IST

ತುರುವೇಕೆರೆ: ರೈತರಲ್ಲಿ ಮುಂಗಾರಿನ ಸಂಭ್ರಮ ಕಾಣುತ್ತಿಲ್ಲ. ಉಳುಮೆ, ಬಿತ್ತನೆಗೆ ಕೆಲವರು ಮಳೆಯ ಮೇಲಿನ ನಂಬಿಕೆ ಕಳೆದುಕೊಂಡು ಸುಮ್ಮನಾಗಿದ್ದಾರೆ. ರವಷ್ಟು ನಂಬಿಕೆ ಉಳಿಸಿಕೊಂಡ ಕೆಲವರಲ್ಲೂ ಅದು ದಿನದಿನಕ್ಕೆ ಕರಗುತ್ತಿದೆ.

ತಾಲ್ಲೂಕಿನಲ್ಲಿ ಈ ಬಾರಿ ಪೂರ್ವ ಮುಂಗಾರು, ಮುಂಗಾರು ಮಳೆ ಸಮರ್ಪಕವಾಗಿ ಬೀಳದೆ  ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ. ಬೆಲೆ ಕುಸಿತ, ಸಾಲ ಬಾಧೆ ಹಾಗೂ ಕುಡಿಯುವ ನೀರಿಗೆ ಹಾಹಾಕಾರದಂಥ ಸಮಸ್ಯೆಗಳು ಹೈರಾಣು  ಮಾಡಿವೆ.

ನಷ್ಟಕ್ಕೀಡಾದರು: ಪೂರ್ವಮುಂಗಾರು ಉತ್ತಮ ಮಳೆಯಾಗಿ ಹೆಸರು, ಅಲಸಂದೆ, ಉದ್ದು,  ಇನ್ನಿತರ ಬೆಳೆಗಳನ್ನು ಬಿತ್ತನೆ ಮಾಡಿದ್ದರು.  ಆ ನಂತರ ಮಳೆ ಪೂರ್ಣ ಕೈ ಕೊಟ್ಟಿದ್ದರಿಂದ ರೈತರು ನಷ್ಟಕ್ಕೊಳಗಾದರು.  ಈ ಬಾರಿ ಮುಂಗಾರು ಬೆಳೆಗಳಾದ ರಾಗಿ, ಜೋಳ, ಸಾಸಿವೆ, ಅವರೆ, ಹರಳು, ತೊಗರಿ, ನವಣೆ, ಹುಚ್ಚೆಳ್ಳು, ಹುರುಳಿ, ಸಜ್ಜೆ, ಹಾರಕ, ಹರಳು, ಭತ್ತ ಬಿತ್ತನೆ ಮಾಡಲು ಭೂಮಿ ಹದಗೊಳಿಸಿಕೊಂಡು, ಮಳೆ ನಿರೀಕ್ಷೆಯಲ್ಲಿದ್ದರು ರೈತರು. ಜೂನ್  ಅಂತ್ಯವಾದರೂ ಮಳೆ ಬಾರದೆ, ಜುಲೈ ಮಧ್ಯಭಾಗದಲ್ಲಿ ಸೋನೆ ಮಳೆ ಆಗಿದ್ದರಿಂದ ಒಂದಿಷ್ಟು ನೆಮ್ಮದಿ ತಂದಿತ್ತು. ಆದರೆ ಮೊದಲೇ ಕೈ ಸುಟ್ಟುಕೊಂಡಿದ್ದರಿಂದ  ಯಾರೂ ಬಿತ್ತನೆಗೆ ಮುಂದಾಗಲಿಲ್ಲ.

ಆದರೆ, ಮತ್ತೆ ಮಖೆ ಮಳೆ ರೈತರಿಗೆ ಆಶಾ ಭಾವನೆ ಮೂಡಿಸಿತು.  ಅಲ್ಲಲ್ಲಿ ಉತ್ತಮ ಮಳೆ  ಬಿದ್ದಿದ್ದರಿಂದ ರೈತರು ಬಿತ್ತನೆ  ಕಾರ್ಯ ಚುರುಕುಗೊಳಿಸಿದರು. ಇದೀಗ ಬಿತ್ತನೆ ಮುಗಿಸಿದ ರೈತರು ಮುಗಿಲ ಕಡೆ ಮುಖ ಮಾಡಿದ್ದಾರೆ.

ಜನ ಆಡಿಕೊಳ್ಳುತ್ತಾರೆ: ಆರಂಭದಲ್ಲಿ  ಮುಂಗಾರು  ಮಳೆ ಕೈಕೊಟ್ಟಿದ್ದರಿಂದ  2  ಬಾರಿ  ಬೀಜ , ಗೊಬ್ಬರ, ಆಳು, ಕಾಳು,  ಉಳುಮೆಗಾಗಿ ಖರ್ಚು ಮಾಡಲಾಗಿದೆ.  ಹಾಕಿದ ಹಣವೂ ವಾಪಸ್ ಬರುವುದಿಲ್ಲ ಭೂಮಿ ಖಾಲಿ ಬಿಟ್ಟರೆ ಎಲ್ಲಿ ಜನ ಆಡಿಕೊಳ್ಳುತ್ತಾರೆ, ಮತ್ತು ಮನೆ ಮಟ್ಟಿಗೆ ಬೆಳೆ ಕೈಗೆ ಸಿಕ್ಕರೆ ಸಾಕು ಎಂಬ ಕಾರಣಕ್ಕೆ ಕೃಷಿ ಮಾಡಬೇಕಿದೆ ಎನ್ನುತ್ತಾರೆ ಯರದೇಹಳ್ಳಿ ರೈತ ಸುರೇಶ್.

‘ವ್ಯವಸಾಯ ಪಕ್ಕಾ ಜುಗಾರಿ ಇದ್ದಂತೆ.  ಸರಿಯಾಗಿ ಮಳೆ ಆದರಷ್ಟೇ  ರೈತನಿಗೆ ಕೈ ತುಂಬಾ  ಲಾಭ.  ಇಲ್ಲಾಂದ್ರೆ  ನಸೀಬು ಖೋತಾ ಹೊಡೆತಂತಾಗುತ್ತದೆ. ಕಳೆದ ವರ್ಷ ಅಷ್ಟೋಇಷ್ಟೋ ಮಳೆಯಾಗಿ ದವಸ– ಧಾನ್ಯ, ಹಸು–ಕರುಗಳಿಗೆ  ಮೇವಾದರೂ ಸಿಕ್ಕಿತ್ತು. ಈ ಬಾರಿ ಮಕ್ಕಳು, ಜಾನುವಾರು ಸಾಕುವುದು ದುಸ್ತರ ಆಗುತ್ತದೆ’ ಎಂದು ತಲೆ ತಗ್ಗಿಸಿದರು ರೈತ ಟಿ.ಪಾಳ್ಯದ ರಾಜು. ವಡಕೇಘಟ್ಟದ  ಸಂತೋಷ ಅವರದೂ ಇದೇ ಚಿಂತೆ.

ನೆಲ ಕಚ್ಚಿತು ತೆಂಗು: ನಾಲ್ಕೈದು ವರ್ಷಗಳಿಂದ  ತಾಲ್ಲೂಕಿನಲ್ಲಿ ಮಳೆ ಕಣ್ಣಾಮುಚ್ಚಾಲೆ ಆಟ  ಮುಂದುವರಿದಿದೆ. ಮಳೆ ಬೀಳುವ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗಿದೆ. ಅಂತರ್ಜಲ ಮಟ್ಟ ಕುಸಿದು ಕೆರೆ, ಬಾವಿಗಳು ಒಣಗಿವೆ. ಹೇಮಾವತಿ ನೆಚ್ಚಿಕೊಂಡಿದ್ದ  ರೈತರಿಗೂ ನೀರಿಲ್ಲ. ಹೀಗಾಗಿ ಅಲ್ಪ–ಸ್ವಲ್ಪ ತೆಂಗು, ಅಡಿಕೆ ಮರಗಳು ಸುಳಿ ಒಣಗಿವೆ.  ಇನ್ನೊಂದೆಡೆ  ಕಪ್ಪುತಲೆ, ಕೆಂಪು ಮೂತಿ ಹುಳು ಮತ್ತು  ರೈನೋಸಾರಸ್‌ಗಳಿಂದ  ರಸ ಸೋರುವಿಕೆ, ಸುಳಿ ಕೊಳೆತ ಹಾಗೂ  ಅಣಬೆ ರೋಗಗಳು ದಬ್ಬೇಘಟ್ಟ, ತಿಪಟೂರಿನ ಗಡಿಭಾಗದ ಪ್ರದೇಶಗಳಲ್ಲಿ ಕಾಣಿಸಿಕೊಂಡು ಮರಗಳು ನೆಲಕಚ್ಚಿವೆ.

ತೆಂಗನ್ನು ಏನಾದರೂ ಮಾಡಿ ಉಳಿಸಿಕೊಳ್ಳಬೇಕು ಎಂಬ ಹಟಕ್ಕೆ ಬಿದ್ದ ರೈತರು ಸಾಲ ಮಾಡಿ ಸಾವಿರಾರು ಅಡಿ ಕೊಳವೆ ಬಾವಿ ಕೊರೆಸಿದ್ದಾರೆ. ಅಲ್ಲೂ ನೀರಿಲ್ಲ. ಈಗಾಗಲೇ ಕೊರೆದ ಕೊಳವೆಬಾವಿಗಳಲ್ಲೂ  ನೀರು ಕಡಿಮೆಯಾಗಿ ಮೋಟಾರ್‌ ಗ್ಯಾಪ್ ಹೊಡೆಯುತ್ತಾ ರೈತರನ್ನು ಮತ್ತಷ್ಟು ದೀನಸ್ಥಿತಿಗೆ ದೂಡಿದೆ. 

ಕುಡಿಯುವ ನೀರಿಗೂ ತತ್ವಾರ: ಮಳೆ ಕ್ಷೀಣಿಸಿದ್ದರಿಂದ ಅಂತರ್ಜಲದ ಮಟ್ಟ ಕುಸಿದು, ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರವಾಗಿದೆ. ಗ್ರಾ.ಪಂ. ಯಿಂದ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಕೊರೆಸಿದ ಕೊಳವೆ ಬಾವಿಗಳಲ್ಲಿ ನೀರು ಗ್ಯಾಪ್ ಹೊಡೆಯುತ್ತಿದೆ.

ತಿಂಗಳಿಂದ ಈಚೆಗೆ ವಿದ್ಯುತ್ ವ್ಯತ್ಯಯ ಹೆಚ್ಚಾಗಿದೆ. ದಿನದಲ್ಲಿ ಒಂದೆರಡು ಗಂಟೆ ಮಾತ್ರ ವಿದ್ಯುತ್ ಪೂರೈಕೆ ಇರುತ್ತದೆ. ಗ್ರಾಮದಲ್ಲಿರುವ ಒಂದೆರಡು ಸಿಸ್ಟನ್‌ಗಳಿಗೆ ನೀರು ತುಂಬಿಸಿಕೊಳ್ಳುವುದರಲ್ಲಿ  ವಿದ್ಯುತ್ ಕಡಿತವಾಗುತ್ತದೆ.  ಅಷ್ಟು ನೀರು ಸಾವಿರಾರು ಜನರಿಗೆ  ಕುಡಿಯಲು, ಮನೆ ಕೆಲಸಗಳಿಗೆ ಸಾಕಾಗುವುದಿಲ್ಲ. ಅಕ್ಕ–ಪಕ್ಕದ ತೋಟಗಳಿಗೆ  ನೀರು ತರಲು ಹೋಗಿ,  ತೋಟದ ಮಾಲೀಕರಿಂದ ಬೈಗುಳ  ಕೇಳಬೇಕಾಗುತ್ತದೆ. ಇನ್ನು ಹ್ಯಾಂಡ್ ಪಂಪ್‌ಗಳನ್ನು ಗಂಟೆಗಟ್ಟಲೆ ಒತ್ತಿದರೂ ಬೊಗಸೆ ನೀರು ಸಿಗುವುದೂ ದುರ್ಲಭ.

ಎರಡು ದಿನ ನೀರು: ಹಲವು ಶಾಲೆಗಳಲ್ಲಿ ನೀರಿನ ಸಮಸ್ಯೆ ಇದೆ. ಕೆರೆ–ಕಟ್ಟೆಗಳು ಒಣಗಿ, ದನ–ಕರುಗಳಿಗೆ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ ಎಂದು ವಿವಿಧ ಗ್ರಾಮಸ್ಥರು ‘ಪ್ರಜಾವಾಣಿ’ಗೆ  ತಿಳಿಸಿದರು.

ಪಟ್ಟಣದಲ್ಲಿ  ವಾರಕ್ಕೆ ಎರಡು ದಿನ ಮಾತ್ರ ಕುಡಿಯುವ ನೀರು ಬಿಡುತ್ತಾರೆ. ಅದರಲ್ಲೇ ಮನೆ ಕೆಲಸ– ಕಾರ್ಯಗಳು ಆಗಬೇಕು. ಆದ್ದರಿಂದ ಮುನಿಯೂರು ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಹೋಗಿ ದಿನವೂ ನೂರಾರು ಮಂದಿ ನೀರು ತೆಗೆದುಕೊಂಡು ಬರುತ್ತಾರೆ. ವಿದ್ಯುತ್ ವ್ಯತ್ಯ ಹೆಚ್ಚಾಗಿ, ಗಂಟೆಗಟ್ಟಲೆ ಕಾಯ್ದು ಬರಿಗೈಲಿ ಬರಬೇಕಾಗುತ್ತದೆ ಎಂದು ಪಟ್ಟಣವಾಸಿ ಶ್ರೀಧರ್ ಹೇಳಿದರು. 

ಅತ್ಯಂತ ಕಡಿಮೆ ಮಳೆ: ದಂಡಿನಶಿವರ ಮತ್ತು  ದಬ್ಬೇಘಟ್ಟ ಹೋಬಳಿಗಳಲ್ಲಿ ಅತ್ಯಂತ ಕಡಿಮೆ ಮಳೆಯಾಗಿದೆ. ವಾರ್ಷಿಕ ವಾಡಿಕೆ ಮಳೆ 665.9 ಮಿ.ಮೀ. ಇದೆ. ಜುಲೈ ತಿಂಗಳಲ್ಲಿ ಬಿದ್ದ ಮಳೆ 16.9 ಮಿ.ಮೀ. ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ. ತಾಲ್ಲೂಕಿನ ರೈತರು ಆಹಾರ ಬೆಳೆಯಾಗಿ ರಾಗಿಯನ್ನು, ವಾಣಿಜ್ಯ ಬೆಳೆಯಾಗಿ ತೆಂಗನ್ನು ನಂಬಿದ್ದಾರೆ. ಈ ಎರಡು ಬೆಳೆಗೆ ಹೆಚ್ಚಿನ ಮಳೆಯ ಅವಶ್ಯಕತೆ ಇದೆ. ಈ ಬಾರಿ  ಬಿತ್ತನೆಗೆ ಸರಿಯಾಗಿ ಮಳೆ ಬೀಳದಿದ್ದರಿಂದ ಹೆಚ್ಚು ಫಸಲು ಸಿಗುವುದಿಲ್ಲ. ಇವುಗಳನ್ನೇ ನಂಬಿದ ರೈತರು ಚಿಂತೆಯಲ್ಲಿದ್ದಾರೆ.

ಬಿತ್ತನೆ ಹಿನ್ನಡೆಯಾದ ಹೋಬಳಿ
ಬೆನಕಿನಕೆರೆ, ಗೂರಲಮಠ, ಮಲ್ಲೇನಹಳ್ಳಿ, ಆಲದಹಳ್ಳಿ, ಯರದೇಹಳ್ಳಿ,  ನರಿಗೇಹಳ್ಳಿ, ಎ.ಹೊಸಹಳ್ಳಿ, ನೀರುಗುಂದ, ಅಜ್ಜೇನಹಳ್ಳಿ, ಬಾಣಸಂದ್ರ, ಆನೇಕೆರೆ, ವಡಕೇಘಟ್ಟ, ದಬ್ಬೇಘಟ್ಟ, ದಂಡಿನಶಿವರ, ಮಾಯಸಂದ್ರ, ಸಂಪಿಗೆ ಮತ್ತು ಕಸಬಾ.

ತಾಲ್ಲೂಕಿನಲ್ಲಿ   ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿಲ್ಲ.  ಅಗತ್ಯ ಕಂಡುಬಂದರೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುವುದು. - ಕೆ.ಆನಂದ್ ಕುಮಾರ್
ಕಾರ್ಯನಿರ್ವಹಣಾಧಿಕಾರಿ

ಬ್ಯಾಂಕ್, ಹಣಕಾಸು ಸಂಸ್ಥೆಗಳು ಕೃಷಿ ಸಾಲ ಮರುಪಾವತಿಗೆ ಒತ್ತಾಯಿಸಬಾರದು. ಸರ್ಕಾರವು ಸಾಲ ಮನ್ನಾ ಮಾಡಿ, ತಾಲ್ಲೂಕನ್ನು ಬರಗಾಲಪೀಡಿತ ಎಂದು ಘೋಷಿಸಬೇಕು.
- ಶ್ರೀನಿವಾಸಗೌಡ,
ರೈತ ಸಂಘದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.