ADVERTISEMENT

ಕನಸಾಗಿಯೇ ಉಳಿದ ಮೈದಾಳ ಕೆರೆ ನೀರು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2017, 10:31 IST
Last Updated 6 ಏಪ್ರಿಲ್ 2017, 10:31 IST
ಕನಸಾಗಿಯೇ ಉಳಿದ ಮೈದಾಳ ಕೆರೆ ನೀರು
ಕನಸಾಗಿಯೇ ಉಳಿದ ಮೈದಾಳ ಕೆರೆ ನೀರು   

ತುಮಕೂರು: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದರೂ ಅದನ್ನು ಬಗೆಹರಿಸುವ ಕಡೆ ನಗರದ ಶಾಸಕರು, ಪಾಲಿಕೆ ಸದಸ್ಯರು ಗಮನ ಹರಿಸುತ್ತಿಲ್ಲ ಎಂಬ ದೂರು ವ್ಯಾಪಕವಾಗಿದೆ.

ಮೈದಾಳ ಕೆರೆಯಿಂದ ನೀರು ತಂದಿದ್ದರೆ  10 ವಾರ್ಡ್‌ಗಳ ನೀರಿನ ಸಮಸ್ಯೆ ನೀಗುತ್ತಿತ್ತು. ಅಲ್ಲದೇ ಈ 10 ವಾರ್ಡ್‌ಗಳಿಗೆ ಬುಗುಡನಹಳ್ಳಿ ಕೆರೆ ಹಾಗೂ ಕೊಳವೆಬಾವಿಗಳಿಂದ ಪೂರೈಸುತ್ತಿದ್ದ ನೀರನ್ನು ಬೇರೆ ವಾರ್ಡ್‌ಗಳಿಗೆ ನೀಡಿ ಸಮಸ್ಯೆ ನೀಗಿಸಿಕೊಳ್ಳಬಹುದಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.

ಮೇಯರ್‌ ರವಿಕುಮಾರ್‌ ಅವರು ಮೈದಾಳ ಕೆರೆಯಿಂದ ನೀರು ತರಲು ಆಸಕ್ತಿವಹಿಸಿದ್ದರೂ ಅವರಿಗೆ ಬೆಂಬಲ ಸಿಕ್ಕಿಲ್ಲ ಎನ್ನಲಾಗಿದೆ. ಮೈದಾಳ ಕೆರೆಯಿಂದ ನಗರದ ವಿದ್ಯಾ ನಗರದಲ್ಲಿರುವ ನೀರು ಶುದ್ಧೀಕರಣ ಘಟಕಕ್ಕೆ ನೀರು ತರುವ ಪ್ರಯತ್ನ ಎರಡು ತಿಂಗಳ ಹಿಂದೆಯೇ ನಡೆದಿತ್ತು. ಕೆರೆಯಿಂದ ನೀರು ಶುದ್ಧೀಕರಣ ಘಟಕದವರೆಗೆ ಕೊಳವೆ ಮಾರ್ಗ ಸಹ ದುರಸ್ತಿಪಡಿಸಲಾಗಿತ್ತು. ಆದರೆ ಮೈದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ವಿರೋಧದ ಕಾರಣ ನೀರು ತರುವ ಪ್ರಯತ್ನ ಕೈಬಿಡಲಾಗಿತ್ತು.

ADVERTISEMENT

ಬುಗುಡನಹಳ್ಳಿ ಕೆರೆಯಲ್ಲಿ ಸದ್ಯ 2.8 ಎಂಸಿಎಫ್‌ಟಿ ಅಡಿ ನೀರು ಇದೆ. (650 ಲಕ್ಷ ಲೀಟರ್‌ ನೀರು ಲಭ್ಯವಿದೆ). ಕೆರೆಯಿಂದ ಪ್ರತಿ ದಿನ  50 ಲಕ್ಷ ಲೀಟರ್‌ ನೀರನ್ನು ಮಾತ್ರ ನಗರಕ್ಕೆ ಪೂರೈಕೆ ಮಾಡಲಾಗುತ್ತಿದೆ. ಕೊಳವೆ ಬಾವಿಗಳಿಂದ 210 ಲಕ್ಷ ಲೀಟರ್‌ ನೀರು ಪೂರೈಸಲಾಗುತ್ತಿದೆ.ನಗರದ ಜನಸಂಖ್ಯೆಗೆ ಪ್ರತಿ ದಿನ 570 ಲಕ್ಷ ಲೀಟರ್‌ ನೀರು  ಪೂರೈಕೆ ಮಾಡಬೇಕಾಗಿದೆ. ಈಗ 260 ಲಕ್ಷ ಲೀಟರ್‌ ನೀರು ಕೊರತೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮೈದಾಳ ಕೆರೆಯಲ್ಲಿ ಎಷ್ಟು ನೀರಿದೆ? ಎಷ್ಟು ನೀರನ್ನು ತೆಗೆದುಕೊಳ್ಳಲು ಅವಕಾಶವಿದೆ ಎಂಬ ಪಾಲಿಕೆ ಪತ್ರಕ್ಕೆ ಸಣ್ಣ ನೀರಾವರಿ ಇಲಾಖೆ ಸ್ಪಂದಿಸುತ್ತಿಲ್ಲ. ಜಿಲ್ಲಾಧಿಕಾರಿ ಸೂಚನೆ ನೀಡಿದರೂ  ಅಧಿಕಾರಿಗಳು ವರದಿ ನೀಡಲು ಮೀನಮೇಷ ಎಣಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
‘ಮೈದಾಳ ಕೆರೆಯಲ್ಲಿ 1.2 ಕೋಟಿ ಘನ ಅಡಿಯಷ್ಟು ನೀರಿದ್ದರೂ ಸಾಕು.  ಇಷ್ಟರಲ್ಲಿ ಅಲ್ಪಸ್ವಲ್ಪ ನೀರು ಪಡೆದರೂ ಸಮಸ್ಯೆ ಬಗೆಹರಿಯಲಿದೆ. ಒಂದೆರಡು ದಿನ ಮಳೆಯಾದರೆ ಮೈದಾಳ ಕೆರೆಗೆ ಉತ್ತಮ ನೀರು ಹರಿದುಬರುತ್ತದೆ. ಇದರಿಂದಾಗಿ ನಗರಕ್ಕೆ ಹೇಮಾವತಿ ನದಿ ನೀರು ಬರುವರೆಗೂ ನೀರಿನ ಸಮಸ್ಯೆ ಸುಧಾರಿಸಬಹುದಾಗಿದೆ’ ಎಂದು ಪಾಲಿಕೆ ಅಧಿಕಾರಿಯೊಬ್ಬರು ಹೇಳಿದರು.

‘ಮೈದಾಳ ಕೆರೆಯ ನೀರನ್ನು ತರುವ ಪ್ರಯತ್ನ ಮಾಡದೇ ಕೊಳವೆಬಾವಿ ಹಾಕಿಸುವ ಪ್ರಕ್ರಿಯೆ ಪಾಲಿಕೆಯಲ್ಲಿ ಆರಂಭಗೊಂಡಿದೆ. ಕೊಳವೆಬಾವಿಗಳನ್ನು, ಖಾಸಗಿ ಟ್ಯಾಂಕರ್‌ಗಳಿಂದ ನೀರು ಖರೀದಿಸಲು ಸದಸ್ಯರು ಇಷ್ಟಪಡುವ ಹಿಂದೆ ಅನೇಕ ಕಾರಣಗಳಿವೆ’ ಎಂದು ಇಮ್ರಾನ್‌ ಪಾಷ ಮಾರ್ಮಿಕವಾಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.