ADVERTISEMENT

ಕನ್ನಡದಲ್ಲೇ ಪಿಎಚ್‌.ಡಿ ಪರೀಕ್ಷೆ

ಸಿ.ಕೆ.ಮಹೇಂದ್ರ
Published 24 ನವೆಂಬರ್ 2017, 8:45 IST
Last Updated 24 ನವೆಂಬರ್ 2017, 8:45 IST
ತುಮಕೂರು ವಿ.ವಿಯ ಹೊರ ನೋಟ
ತುಮಕೂರು ವಿ.ವಿಯ ಹೊರ ನೋಟ   

ತುಮಕೂರು: ತುಮಕೂರು ವಿಶ್ವವಿದ್ಯಾ ನಿಲಯ ಇನ್ನು ಮುಂದೆ ಕನ್ನಡದಲ್ಲೇ ಪಿಎಚ್‌.ಡಿ ಪ್ರವೇಶ ಪರೀಕ್ಷೆ ನಡೆಸಲಿದೆ. ಈ ಬಗ್ಗೆ ಶನಿವಾರ (ನ.25ರಂದು) ನಡೆಯುವ ವಿಶೇಷ ಸಿಂಡಿಕೇಟ್‌ ಹಾಗೂ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲಿದೆ ಎಂದು ವಿ.ವಿ. ಮೂಲಗಳು ತಿಳಿಸಿವೆ.

ರಾಜ್ಯದ ಎಲ್ಲ ವಿ.ವಿಗಳಲ್ಲೂ ಪಿಎಚ್‌.ಡಿ ಪ್ರವೇಶ ಪರೀಕ್ಷೆ ಕನ್ನಡ, ಇಂಗ್ಲಿಷ್ ಮಾಧ್ಯಮದಲ್ಲಿ ನಡೆಸಲಾಗುತ್ತಿದೆ. ಆದರೆ ಇಲ್ಲಿ 2010ರಲ್ಲಿ ಇಂಗ್ಲಿಷ್‌ ಮಾಧ್ಯಮದಲ್ಲಿ ಪ್ರವೇಶ ಪರೀಕ್ಷೆ ಕಡ್ಡಾಯಗೊಳಿಸಲಾಗಿತ್ತು. ಆಗ ಇಂಗ್ಲಿಷ್‌ನಲ್ಲಿ ಪರೀಕ್ಷೆ ನಡೆಸಿದ್ದನ್ನು ಖಂಡಿಸಿ  ಕನ್ನಡ ಮಾಧ್ಯಮದ ಹಲ ವಾರು ವಿದ್ಯಾರ್ಥಿಗಳು ‍ಪರೀಕ್ಷೆಯನ್ನು ಬಹಿಷ್ಕರಿಸಿ ಪ್ರತಿಭಟನೆ ದಾಖಲಿಸಿದ್ದರು.

ಅಂದಿನಿಂದಲೂ ಕನ್ನಡ ಮಾಧ್ಯಮ ದಲ್ಲಿ ಪರೀಕ್ಷೆ ನಡೆಸುವಂತೆ ವಿದ್ಯಾರ್ಥಿಗಳು ಒತ್ತಾಯಿಸುತ್ತಲೇ ಬಂದಿದ್ದರು. ಆದರೆ ಕನ್ನಡದಲ್ಲಿ ಪರೀಕ್ಷೆ ನಡೆಸಲು ಯುಜಿಸಿ ನಿಯಮಾವಳಿಯಲ್ಲಿ ಅವಕಾಶ ಇಲ್ಲ ಎಂದು ವಿ.ವಿ ಕನ್ನಡದ ಮಾಧ್ಯಮದ ವಿದ್ಯಾರ್ಥಿಗಳನ್ನು ವಂಚಿಸುತ್ತಾ ಬಂದಿತ್ತು. ಬುಧವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಅವರು ಕನ್ನಡ ಅನುಷ್ಠಾನದ ಪರಿಶೀಲನೆ ವೇಳೆ ವಿ.ವಿಯ ಈ ಕನ್ನಡ ವಿರೋಧಿ ಧೋರಣೆಗೆ ಕೆಂಡಾಮಂಡಲವಾಗಿದ್ದರು. ನಿಯಮವನ್ನು ಬದಲಿಸುವಂತೆ ಸೂಚನೆ ನೀಡಿದ್ದರು.

ADVERTISEMENT

‘ಈ ಸೂಚನೆಯಿಂದ ಎಚ್ಚೆತ್ತು ಕೊಂಡು ವಿ.ವಿಯ ಪ್ರಭಾರ ಕುಲಪತಿ ಪ್ರೊ.ಜಯಶೀಲ ಅವರು ಬುಧವಾರ ಸಂಜೆಯೇ ಪಿಎಚ್‌.ಡಿ ಪರೀಕ್ಷೆಯ ಮಾರ್ದದರ್ಶಿ ನಿಯಮಾವಳಿಗೆ ತಿದ್ದುಪಡಿ ತರುವ ಸಂಬಂಧ ಸಿಂಡಿಕೇಟ್‌ ಸಭೆ ಕರೆಯಲು ಆದೇಶಿಸಿದ್ದಾರೆ. ಎಲ್ಲ ಸಿಂಡಿಕೇಟ್‌ ಸದಸ್ಯರಿಗೆ ತುರ್ತು ಸಂದೇಶ ರವಾನಿಸಲಾಗಿದೆ. ಶನಿವಾರ ಸಭೆಯಲ್ಲಿ  ಹೊಸ ತಿದ್ದುಪಡಿಗೆ  ಸಿಂಡಿಕೇಟ್‌, ಶೈಕ್ಷಣಿಕ ಮಂಡಳಿ ಅನುಮೋದನೆ ಪಡೆದು, ರಾಜ್ಯಪಾಲರಿಗೆ ಕಳುಹಿಸಿ ಕೊಡಲಾಗುವುದು’ ಎಂದು ವಿ.ವಿಯ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

’ಪ್ರಶ್ನೆ ಪತ್ರಿಕೆಗಳು ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮ ಎರಡರಲ್ಲೂ ಇರಲಿವೆ. ವಿದ್ಯಾರ್ಥಿಗಳು ತಾವು ಬಯಸಿದ ಮಾಧ್ಯಮದಲ್ಲಿ ಪರೀಕ್ಷೆ ಬರೆಯಬಹುದು. ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಕನಿಷ್ಠ ಶೇ 50ರಷ್ಟು ಅಂಕ ಪಡೆಯಬೇಕು. ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳು ಕನಿಷ್ಠ ಶೇ 45 ಅಂಕ ಪಡೆಯಬೇಕು. ನಂತರ ಸಂದರ್ಶನ ಎದುರಿಸಬೇಕು. ಪರೀಕ್ಷೆ ಹಾಗೂ ಸಂದರ್ಶನದ ಅಂಕ ಆಧರಿಸಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದು’ ಎಂದು ತಿಳಿಸಿದರು.

ಇಂಗ್ಲಿಷ್‌ನಲ್ಲಿ ಪತ್ರ ವ್ಯವಹಾರ ಇಲ್ಲ: ವಿವಿಧ ವಿಭಾಗಗಳ ನಡುವೆ ನಡೆಯುವ ಪತ್ರ ವ್ಯವಹಾರಗಳು ಸಹ ಕನ್ನಡದಲ್ಲೇ ನಡೆಯಬೇಕು.  ವಿಭಾಗದ ಮುಖ್ಯಸ್ಥರು ಬಳಸುವ ಸೀಲ್‌ಗಳು (ಠಸ್ಸೆ) ಸಹ ಕನ್ನಡದಲ್ಲೇ ಇರಬೇಕು. ಯಾವುದೇ ಕಾರಣಕ್ಕೂ ಇಂಗ್ಲಿಷ್‌ ಬಳಸಬಾರದು ಎಂದು ಸಹ ಸುತ್ತೋಲೆ ಹೊರಡಿಸಲಾಗಿದೆ.

ಪ್ರಾಧಿಕಾರಕ್ಕೆ ಅಭಿನಂದನೆ
’ಇದು ಕನ್ನಡಕ್ಕೆ, ಕನ್ನಡ ಹೋರಾಟಕ್ಕೆ ಸಂದ ಜಯ. ವಿ.ವಿಯ ಕನ್ನಡ ವಿರೋಧಿ ಧೋರಣೆಯನ್ನು ತಡೆದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ವಿ.ವಿ ಶೈಕ್ಷಣಿಕ ಮಂಡಳಿ ಸದಸ್ಯ ಮಂಜುನಾಥ್ ತಿಳಿಸಿದರು.

‘ಪಿಎಚ್‌.ಡಿ ಪ್ರವೇಶ ಪರೀಕ್ಷೆಯನ್ನು ಇಂಗ್ಲಿಷ್‌ನಲ್ಲಿ ನಡೆಸಲಾಗುತ್ತಿರುವ ಕುರಿತ ’ಪ್ರಜಾವಾಣಿ’ಯ ವರದಿಯನ್ನು ಪ್ರಾಧಿಕಾರದ ಅಧ್ಯಕ್ಷರ ಗಮನಕ್ಕೆ ತಂದಿದ್ದೆವು. ಇದನ್ನು ಅವರು ಗಂಭೀರವಾಗಿ ತೆಗೆದುಕೊಂಡರು. ಹೀಗಾಗಿ ಕನ್ನಡ ಅನುಷ್ಠಾನದ ಹೋರಾಟಕ್ಕೆ ಜಯ ಸಿಕ್ಕಿತು’ ಎಂದು ಅವರು ಹೇಳಿದರು.

* * 
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸೂಚನೆಗಳನ್ನು ಜಾರಿಗೊಳಿಸಲು ಕ್ರಮ ತೆಗೆದುಕೊಂಡಿದೆ. ಎಲ್ಲ ವ್ಯವಹಾರ ಕನ್ನಡದಲ್ಲೇ ನಡೆಯಲಿವೆ</p>
ಪ್ರೊ. ಜಯಶೀಲ
ಪ್ರಭಾರ ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.