ADVERTISEMENT

ಕಾಲಮಿತಿಯಲ್ಲಿ ಅನುದಾನ ಬಳಸಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 7:22 IST
Last Updated 14 ಜುಲೈ 2017, 7:22 IST

ತುಮಕೂರು: ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಪಿ) ಮತ್ತು ಗಿರಿಜನ ಉಪ ಯೋಜನೆಯಡಿ (ಟಿಎಸ್‌ಪಿ) ಒದಗಿಸುವ ಅನುದಾನವನ್ನು ಕಾಲಮಿತಿಯೊಳಗೆ ವೆಚ್ಚ ಮಾಡಬೇಕು ಎಂದು ಯೋಜನೆ ಸಲಹೆಗಾರ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಈ ವೆಂಕಟಯ್ಯ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆ ಕಾರ್ಯಕ್ರಮಗಳ ಅನುಷ್ಠಾನ ಕುರಿತಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಜನರು ಹೆಚ್ಚಾಗಿ ವಾಸಿಸುವ ಸ್ಥಳಗಳಲ್ಲಿ ಅನುದಾನ ಬಳಕೆ ಮಾಡಬೇಕು ಎಂದು ಹೇಳಿದರು.

ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಈಗಾಗಲೇ ರೂಪಿಸಿರುವ ಶಾಸನದ ಮಾದರಿಯಲ್ಲಿಯೇ ರಾಜ್ಯದಲ್ಲಿಯೂ ಎಸ್‌ಸಿಪಿ ಹಾಗೂ ಟಿಎಸ್‌ಪಿ ಕಾಯ್ದೆ 2013ನ್ನು ರೂಪಿಸಲಾಗಿದೆ. ಈ ವರ್ಷದಲ್ಲಿ ಒದಗಿಸಿದ ಅನುದಾನ ಬಳಕೆಯಾಗದಿದ್ದರೆ ಮುಂದಿನ ವರ್ಷ ಸಿಗುವ ಅನುದಾನಕ್ಕೆ ಸೇರ್ಪಡೆ ಮಾಡುವ ಅವಕಾಶ ಕಲ್ಪಿಸಲಾಗಿದೆ.

ADVERTISEMENT

ಈ ಯೋಜನೆಯಡಿ ಒದಗಿಸಿರುವ ಅನುದಾನವನ್ನು ಉದ್ದೇಶಪೂರ್ವಕವಾಗಿ ಬಳಕೆ ಮಾಡದ ಅಧಿಕಾರಿಗೆ ಶಿಕ್ಷಿಸುವ ಬಗ್ಗೆ ಕಾಯ್ದೆಯಲ್ಲಿ ವಿವರಿಸಲಾಗಿದೆ ಎಂದು ತಿಳಿಸಿದರು.
ಕಳೆದ ಮೂರು ವರ್ಷಗಳಿಂದ ಈ ಯೋಜನೆಗೆ ₹ 50 ಸಾವಿರ ಕೋಟಿಗೂ ಹೆಚ್ಚು ಅನುದಾನ ಒದಗಿಸಲಾಗಿದೆ. ಇಷ್ಟೊಂದು ಅನುದಾನ ಒದಗಿಸಿದರೂ ಪರಿಣಾಮಕಾರಿ ಅನುಷ್ಠಾನಗೊಳಿಸದಿದ್ದರೆ ಯೋಜನೆ ಯಶಸ್ವಿಯಾಗುವುದಿಲ್ಲ ಎಂದರು.

ಯೋಜನೆಯನ್ನು ಯಶಸ್ವಿಗೊಳಿಸಲು ಅನುಷ್ಠಾನಾಧಿಕಾರಿಗಳಿಗೆ ತರಬೇತಿ ಮುಖ್ಯ. ಹೀಗಾಗಿ, ಈ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸರ್ಕಾರದ ಯೋಜನೆಗಳ ಪೈಕಿ ಬ್ಯಾಂಕಿನ ಸಾಲ ಪಡೆಯಬೇಕಾದ ಯೋಜನೆಗಳಲ್ಲಿ ₹ 2 ಕೋಟಿ ವರೆಗೂ ಸರ್ಕಾರದ ಭದ್ರತೆ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಆದೇಶದಲ್ಲಿ ತಿಳಿಸಿದೆ. ಸರ್ಕಾರದ ಭದ್ರತೆಯ ನೆಪವೊಡ್ಡಿ ಸಾಲ ನೀಡದ ಬ್ಯಾಂಕುಗಳ ಬಗ್ಗೆ ಜಿಲ್ಲಾಧಿಕಾರಿ ಮೂಲಕ ವರದಿಯನ್ನು ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕು ಎಂದು ಇಲಾಖೆ ಜಂಟಿ ನಿರ್ದೇಶಕ ದೇವರಾಜ್ ಅವರಿಗೆ ಸೂಚಿಸಿದರು.

ಗಂಗಾ ಕಲ್ಯಾಣ, ಕೃಷಿ ಯಂತ್ರೋಪಕರಣ ಉಪಕರಣಗಳ ವಿತರಣೆಯನ್ನು ಮಾಡುವಾಗ ಜಿಲ್ಲೆಯಲ್ಲಿರುವ 4.40ಲಕ್ಷ ರೈತರ ಪೈಕಿ 45 ಸಾವಿರ ಪರಿಶಿಷ್ಟ ಜಾತಿ  ಸಮುದಾಯಕ್ಕೆ ಸೇರಿದ ರೈತರಿದ್ದಾರೆ.  ಈ ಸಮುದಾಯದ ರೈತರು ಹೆಚ್ಚಿಗೆ ಇರುವ ಪ್ರದೇಶದಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಮಾತನಾಡಿ,ಪರಿಶಿಷ್ಟ ಜಾತಿ ಮತ್ತು ಪಂಗಡದಲ್ಲೂ ಬಡವರಲ್ಲಿ ಬಡವರು ಇದ್ದಾರೆ.  ಹಕ್ಕಿಪಿಕ್ಕಿ, ಹಂದಿಜೋಗಿ ಮತ್ತಿತರ ಸಮುದಾಯಗಳಿಗೆ ಯೋಜನೆಯ ಸೌಲಭ್ಯಗಳು ದೊರೆಯುವಂತಾಗಬೇಕು. ಇಂತಹ ಸಮುದಾಯಗಳನ್ನು ಗುರ್ತಿಸಿ ಸೌಲಭ್ಯಗಳನ್ನು ನೀಡುವುದು ನಿಜಕ್ಕೂ ಸವಾಲಿನ ಕೆಲಸ. 

ಜಿಲ್ಲಾಡಳಿತ ಸಮರ್ಪಕವಾಗಿ ಕಾರ್ಯನಿರ್ವಹಿಸಿ ಯೋಜನೆ ಫಲ ನಿರ್ದಿಷ್ಟ ಸಮುದಾಯಕ್ಕೆ ತಲುಪಿಸಲು ಪ್ರಯತ್ನ ಮಾಡಲಿದೆ ಎಂದು ತಿಳಿಸಿದರು.ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ನಿರ್ದೇಶಕ ಡಾ. ವಿ.ಸೌಂದರರಾಜ, ಜಂಟಿ ನಿರ್ದೇಶಕ ಡಾ. ದೇವರಾಜ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.