ADVERTISEMENT

ಕೇಂದ್ರ, ರಾಜ್ಯ ಸರ್ಕಾರದ ಚುನಾವಣೆ ಲಾಬಿ

ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಟಿ.ಗಂಗಾಧರ್‌ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 5:58 IST
Last Updated 22 ಮಾರ್ಚ್ 2017, 5:58 IST

ತುಮಕೂರು: ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಿನ ವರ್ಷ ನಡೆಯುವ ಚುನಾವಣೆಗಾಗಿ ಓಟಿನ ಲಾಬಿ ಆರಂಭಿಸಿವೆ’ಎಂದು ರಾಜ್ಯ ರೈತ ಸಂಘ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಕೆ.ಟಿ.ಗಂಗಾಧರ್‌ ಆರೋಪಿಸಿದರು.

ನಗರದ ರವೀಂದ್ರ ಕಲಾ ನಿಕೇತನದಲ್ಲಿ ಜನಾಂದೋಲನಗಳ ಮಹಾಮೈತ್ರಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
‘ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗುಣಾತ್ಮಕ ರಾಜಕಾರಣ ಬೇಕಾಗಿಲ್ಲ.

5 ವರ್ಷದಿಂದ ರಾಜ್ಯವು ತೀವ್ರ ಬರಗಾಲಕ್ಕೆ ತುತ್ತಾಗಿದ್ದರೂ ರೈತರಿಗೆ ಬೆಳೆ ಪರಿಹಾರ ನೀಡುತ್ತಿಲ್ಲ. ಬೆಳೆ ಪರಿಹಾರದ ಹಣವನ್ನು ಬ್ಯಾಂಕ್‌ ಖಾತೆಗಳಲ್ಲಿ ಇರಿಸಿದ್ದು, ವಿತರಣೆಗೆ ಮೀನಮೇಷ ಎಣಿಸುತ್ತಿವೆ. ಚುನಾವಣೆ ಸಂದರ್ಭದಲ್ಲಿ ಪರಿಹಾರ ಹಣ ಮುಂದಾಗುತ್ತವೆ. ಇಂತಹ ರಣನೀತಿ ಬದಲಾಯಿಸಲು ರೈತರು, ಮಹಿಳೆಯರು ಪಣ ತೊಡಬೇಕು’ ಎಂದು ಸಲಹೆ ನೀಡಿದರು.

‘ಬರದಲ್ಲಿ ಜಾನುವಾರುಗಳಿಗೆ 3 ಕೆ.ಜಿ.ಮೇವು ಸಾಕಾಗಲ್ಲ. 5 ಕೆ.ಜಿ. ಮೇವು ನೀಡಿ ಎಂದು ಮನವಿ ಮಾಡಿದರೆ ಸರ್ಕಾರ ಒಪ್ಪುವುದಿಲ್ಲ. ಬದಲಿಗೆ ಅನ್ನಭಾಗ್ಯ ಅಕ್ಕಿಯನ್ನು 7 ಕೆ.ಜಿ. ಗೆ ಹೆಚ್ಚಿಸಿದೆ. ಸರ್ಕಾರಕ್ಕೆ ಊಟ ಮಾಡಿಸೋದು ಮಾತ್ರ ಗೊತ್ತಿದೆ. ದುಡಿಯುವ ಕೈಗೆ ಕೆಲಸ ನೀಡಿ, ಖರೀದಿ ಸಾಮರ್ಥ್ಯ ಬೆಳೆಸಬೇಕು ಎಂಬುದು ಮರೆತಿದೆ ಎಂದು ಟೀಕಿಸಿದರು.

‘ನೋಟು ಅಮಾನ್ಯೀಕರಣದ ಬಳಿಕ ಅಧಿಕಾರಿಗಳ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿತು. ಭ್ರಷ್ಟರ ಮುಖವಾಡ ಕಳಚಿತು’ ಎಂದು ಪ್ರಶ್ನಿಸಿದರು. ಕರ್ನಾಟಕ ಲಂಚಮುಕ್ತ ಅಭಿಯಾನದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಮಾತನಾಡಿ, ‘ರಾಜ್ಯದಲ್ಲಿ ಭ್ರಷ್ಟಾಚಾರ, ಲಂಚಗುಳಿತನ ತಾಂಡವವಾಡುತ್ತಿದೆ.

ಲೋಕಾಪಾಲ ಸಂಸ್ಥೆ, ಭ್ರಷ್ಟಾಚಾರ ನಿರ್ಮೂಲನೆಗೆ ಪರಿಹಾರ ಕಂಡುಕೊಳ್ಳುವ ಬದಲು ರಾಜಕಾರಣಿಗಳು ಜಿಲೇಬಿ (ಗೌಡ, ಲಿಂಗಾಯತ, ಬ್ರಾಹ್ಮಣ) ಬಗ್ಗೆ ಮಾತನಾಡುತ್ತಿದ್ದಾರೆ.  ಜಾತಿ ರಾಜಕಾರಣ ಮಾಡುವ ಇಂತಹ ನೀಚರಿಗೆ ನಾಚಿಕೆಯಾಗಬೇಕು. ಬಡತನ, ನಿರುದ್ಯೋಗದ ಬಗ್ಗೆ ಮಾತನಾಡುವವರಿಲ್ಲ. ಹಾಗಾಗಿ 26 ಸಂಘಟನೆಗಳು ಸೇರಿ ಜನಾಂದೋಲನಗಳ ಮಹಾಮೈತ್ರಿ ರಚಿಸಲಾಗಿದೆ’ ಎಂದರು.

‘ಚುನಾವಣಾ ರಾಜಕಾರಣದ ವಿರುದ್ಧ ಜನಾಂದೋಲನಗಳ ಮಹಾಮೈತ್ರಿ ಹಮ್ಮಿಕೊಂಡಿರುವ ರಾಜ್ಯವ್ಯಾಪಿ ಜಾಗೃತಿ ಜಾಥಾ ಏ.17 ರಂದು ಮಂಡ್ಯದಿಂದ ಆರಂಭವಾಗಲಿದೆ’ ಎಂದರು.

‘ಜಾಥಾದಲ್ಲಿ ಸರ್ವೋದಯ ಪಕ್ಷದ ಅಧ್ಯಕ್ಷ ದೇವನೂರು ಮಹಾದೇವ, ಸಮಾಜ ಪರಿವರ್ತನಾ ಸಂಸ್ಥೆಯ ಎಸ್‌.ಆರ್‌.ಹಿರೇಮಠ್‌, ರಾಜ್ಯ ರೈತ ಸಂಘ ರಾಜ್ಯ ಘಟಕದ ಅಧ್ಯಕ್ಷ ಕೆ.ಟಿ.ಗಂಗಾಧರ್‌ ಭಾಗವಹಿಸುವರು. ರಾಮನಗರ, ಚಿಕ್ಕಬಳ್ಳಾಪುರ ಮಾರ್ಗವಾಗಿ ಏ.20 ರಂದು ಜಾಥಾ ತುಮಕೂರಿಗೆ ಬರಲಿದೆ. ಬಳಿಕ ಬೃಹತ್‌ ಸಮಾವೇಶ ನಡೆಸಲಾಗುವುದು’ ಎಂದರು.

ದಲಿತ ಸಂಘರ್ಷ ಸಮಿತಿ ಸಂಚಾಲಕ ವೆಂಕಟೇಶ್‌, ಮುನಿಸ್ವಾಮಿ, ಜನಸಂಗ್ರಾಮ ಪರಿಷತ್‌ನ ಸಿ.ಯತಿರಾಜು, ಮಹಿಳಾ ಹೋರಾಟಗಾರ್ತಿ ಸಿರಿಮನೆ ಮಲ್ಲಿಗೆ ಉಪಸ್ಥಿತರಿದ್ದರು.

ADVERTISEMENT

ಭೂಮಿ ಕಿತ್ತುಕೊಳ್ಳುವ ಸಂಚು
‘ಅಭಿವೃದ್ಧಿ ನೆಪದಲ್ಲಿ ಸರ್ಕಾರಗಳು ಫಲವತ್ತಾದ ರೈತರ ಭೂಮಿಯನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಸಿವೆ’ ಎಂದು ಗಂಗಾಧರ್‌ ಆರೋಪಿಸಿದರು. ‘ಆಹಾರ ಉತ್ಪಾದನೆ, ಬಿತ್ತನೆ ಬೀಜಗಳನ್ನು ಕಿತ್ತುಕೊಂಡಿದೆ. ಶಿಶುವಿಹಾರದಿಂದ ಡೀಮ್ಡ್‌ ವಿಶ್ವವಿದ್ಯಾನಿಲಯದವರೆಗೆ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಮೂಲಕ ರಾಜಕಾರಣಿಗಳೇ ಶಿಕ್ಷಣ ಕ್ಷೇತ್ರವನ್ನು ಕೈಯಲ್ಲಿಟ್ಟುಕೊಂಡಿದ್ದಾರೆ. ಅದೇ ರೀತಿ ವೈದ್ಯಕೀಯ ಸೇವೆಗಳನ್ನು ತಮ್ಮ ಕಪಿಮುಷ್ಠಿಯಲ್ಲಿ ಇರಿಸಿಕೊಂಡಿದ್ದಾರೆ. ಇವೆಲ್ಲದರ ಬಗ್ಗೆ ಜನರು ಯೋಚಿಸಬೇಕಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.