ADVERTISEMENT

ಗುಬ್ಬಿಯಲ್ಲಿ ಭಾರೀ ಮಳೆ, ಕುಡಿಯುವ ನೀರಿಗೆ ಪರದಾಟ

​ಪ್ರಜಾವಾಣಿ ವಾರ್ತೆ
Published 4 ಜೂನ್ 2018, 9:19 IST
Last Updated 4 ಜೂನ್ 2018, 9:19 IST
ಗುಬ್ಬಿ-ಚೇಳೂರು ಸಂಪರ್ಕಿಸುವ ರೈಲ್ವೇ ಅಂಡರ್ ಪಾಸ್ ನಲ್ಲಿ ನಿಂತಿದ್ದ ನೀರಿನಲ್ಲಿ ಪ್ರಯಾಣಿಸಲು ವಾಹನ ಸವಾರರು ಪರದಾಡಿದರು
ಗುಬ್ಬಿ-ಚೇಳೂರು ಸಂಪರ್ಕಿಸುವ ರೈಲ್ವೇ ಅಂಡರ್ ಪಾಸ್ ನಲ್ಲಿ ನಿಂತಿದ್ದ ನೀರಿನಲ್ಲಿ ಪ್ರಯಾಣಿಸಲು ವಾಹನ ಸವಾರರು ಪರದಾಡಿದರು   

ಗುಬ್ಬಿ: ಪಟ್ಟಣದಲ್ಲಿ ಭಾನುವಾರ ಧಾರಾಕಾರ ಮಳೆ ಸುರಿಯಿತು. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿನ ಅಂಗಡಿಗಳ ಮುಂದೆ ನೀರು ಹರಿಯುವ ಚರಂಡಿಗಳ ಮಾರ್ಗಗಳು ಕಟ್ಟಿಕೊಂಡಿದ್ದರಿಂದ ರಸ್ತೆಮೇಲೆ ನೀರು ಹರಿಯಿತು. ಪ್ರತಿ ಅಂಗಡಿಗಳ ಮಾಲೀಕರು ಮಣ್ಣು ಸುರಿಸಿ ಅಂಗಡಿಗಳ ಮುಂಭಾಗವನ್ನು ಎತ್ತರಿಸಿಕೊಂಡಿರುವುದರಿಂದ ಚರಂಡಿಗೆ ನೀರು ಹರಿಯುವ ಕಿಂಡಿಮಾರ್ಗಗಳು ಕಟ್ಟಿಕೊಂಡಿವೆ. ಇದರಿಂದ ಪಟ್ಟಣದ ತುಂಬಾ ನೀರು ನಿಲ್ಲುವಂತಾಯಿತು.

ಪಟ್ಟಣದ ಬಸ್ ನಿಲ್ದಾಣ, ಶಿವಗಂಗಾ ಡ್ರೈವಿಂಗ್ ಸ್ಕೂಲ್ ಕಡೆಯಿಂದ ನೀರು ಹರಿದಿದ್ದರಿಂದ ಚನ್ನಬಸವೇಶ್ವರ ಚಲನಚಿತ್ರ ಮಂದಿರದ ಮಾಲೀಕ ಕೀರ್ತಿರಾಜ್ ಮನೆ ಸುತ್ತ ನೀರು ನಿಂತಿದ್ದರಿಂದ ದ್ವೀಪದಂತಾಗಿತ್ತು. ರಸ್ತೆ ಮೇಲೆ ನಿಂತಿದ್ದ ನೀರನ್ನು ಚರಂಡಿಗೆ ನುಗ್ಗಿಸಲು ಸ್ಥಳೀಯರು ಕಡ್ಡಿ, ಹಾರೆ ಹಿಡಿದು ಚುರುಕಾದರು.

ಪಟ್ಟಣದ ಸುಭಾಷ್ ನಗರದ ಸಮೀಪ ಇರುವ ಹಂದಿಜೋಗರ ಜೋಪಡಿಗಳು ನೀರ ನಡುವೆ ತೆಪ್ಪಗಳಂತೆ ಭಾಸವಾದವು. ಪತ್ರೆಮತ್ತಿಘಟ್ಟದ ಮುನಿಕುಮಾರ್ ತಮ್ಮ ತೋಟದಲ್ಲಿ ನೀರು ಹರಿಯುವಿಕೆಯ ಪ್ರಮಾಣ ನೋಡಿ ಸಂತಸಪಟ್ಟರು.

ADVERTISEMENT

ಬಿದರೆ- ಚೇಳೂರು ಸಂಪರ್ಕಿಸುವ ರೈಲ್ವೇ ಅಂಡರ್ ಪಾಸ್ ಹಾಗೂ ಎಂ.ಎನ್.ಕೋಟೆಗೆ ತೆರಳುವ ಸಿಐಟಿ ಕಾಲೇಜು ಹಿಂಭಾಗದ ರೈಲ್ವೇ ಅಂಡರ್‌ಪಾಸ್‌ನಲ್ಲಿ ನೀರು ಹರಿಯುವಿಕೆಯ ಪ್ರಮಾಣ ಹೆಚ್ಚಿದ್ದರಿಂದ ವಾಹನ ಸವಾರರು ನೀರು ಕಡಿಮೆ ಆಗುವವರೆಗೂ ಕಾದು ನಂತರ ಪ್ರಯಾಣ ಬೆಳೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.