ADVERTISEMENT

ಗ್ಯಾಸ್ ಕಂಪೆನಿಯವರಿಂದ ಗ್ರಾಹಕರಿಗೆ ಕಿರುಕುಳ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 11:14 IST
Last Updated 19 ಜುಲೈ 2017, 11:14 IST
ಗುಬ್ಬಿಯ ರಾಯವಾರ ರಸ್ತೆಯಲ್ಲಿ ನಿತ್ಯ ನಿಲ್ಲುವ ಗ್ಯಾಸ್ ವಿತರಣಾ ಕಂಪೆನಿ ವಾಹನಗಳಿಂದ ನಡೆದಾಡುವ ಪಾದಚಾರಿಗಳಿಗೆ ಕಿರಿಕಿರಿ
ಗುಬ್ಬಿಯ ರಾಯವಾರ ರಸ್ತೆಯಲ್ಲಿ ನಿತ್ಯ ನಿಲ್ಲುವ ಗ್ಯಾಸ್ ವಿತರಣಾ ಕಂಪೆನಿ ವಾಹನಗಳಿಂದ ನಡೆದಾಡುವ ಪಾದಚಾರಿಗಳಿಗೆ ಕಿರಿಕಿರಿ   

ಗುಬ್ಬಿ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಅರಣ್ಯದಂಚಿನ ಬಡ ಕುಟುಂಬಗಳಿಗೆ ಅರಣ್ಯ ಇಲಾಖೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಹಾಗೂ ಒಲೆ ವಿತರಿಸಿ ಅರಣ್ಯ ನಾಶ ತಪ್ಪಿಸುವ ಉದ್ದೇಶ ವೈಫಲ್ಯ ಕಾಣುತ್ತಿದೆ. ಗ್ಯಾಸ್ ವಿತರಕರ ಅಸಮರ್ಪಕ ಸೇವೆಯಿಂದ ಸಿಲಿಂಡರ್ ಖಾಲಿಯಾಗಿ ಮತ್ತೆ ಸೌದೆ ಒಲೆ ಹಚ್ಚುವಂತಾಗಿದೆ. ಇದರಿಂದ ಸರ್ಕಾರದ ಬೃಹತ್ ಯೋಜನೆ ತಾಲ್ಲೂಕಿನಲ್ಲಿ ನೆಲ ಕಚ್ಚುವಂತೆ ಕಾಣುತ್ತಿದೆ.

‘ಸಮರ್ಪಕ ಸೇವೆ ನೀಡುತ್ತೇವೆ. ನಮಗೆ ಗ್ಯಾಸ್ ವಿತರಿಸುವ ಯೋಜನೆ ಕೊಡಿ’ ಎಂದು ಅರಣ್ಯ ಇಲಾಖೆಯೊಂದಿಗೆ ಮಾಡಿಕೊಂಡಿದ್ದ ಗ್ಯಾಸ್ ವಿತರಣಾ ಕಂಪೆನಿಗಳು ಮಾಡಿಕೊಂಡಿದ್ದ ಒಡಂಬಡಿಕೆ ಹುಸಿಯಾಗಿದೆ. ಸಿಲಿಂಡರ್ ವಿತರಿಸಿ 6 ತಿಂಗಳು ಕಳೆದಿದೆ.

ಆದರೆ ಗ್ಯಾಸ್ ವಿತರಣಾ ಪುಸ್ತಕ ಮಾತ್ರ ಗ್ರಾಹಕನ ಕೈ ಸೇರಿಲ್ಲ. ಪಟ್ಟಣದ ಶ್ರೀಪ್ರಥಮ್ ಇಂಡೇನ್ ಗ್ಯಾಸ್ ಕಚೇರಿ ಸ್ಥಳಾಂತರ ಮಾಡಿದ್ದರಿಂದ ಗ್ರಾಹಕರು ಕಚೇರಿ ಹುಡುಕಾಟಕ್ಕಾಗಿ ಸುತ್ತಾಡಿದ್ದಾರೆ. ಇದರಿಂದ ಪುಸ್ತಕ ಪಡೆಯಲು, ವರ್ಗಾವಣೆ ಮಾಡಿಸಿಕೊಳ್ಳಲು ಗ್ರಾಹಕರು ನೂತನ ಕಚೇರಿಯತ್ತ ಬಂದರೂ ನಾನಾ ಕಾರಣ ಕೇಳಿ ವಾಪಸ್‌ ಕಳುಹಿಸುತ್ತಿದ್ದಾರೆ. ಇದರಿಂದ ಗ್ರಾಹಕರ ಪರದಾಟ ಮುಂದುವರಿದಿದೆ.

ADVERTISEMENT

‘ತಾಲ್ಲೂಕಿನ 50ಕ್ಕೂ ಹೆಚ್ಚು ಕುಟುಂಬಗಳಿಗೆ ಈ ವರೆವಿಗೂ ಗ್ಯಾಸ್ ವಿತರಣಾ ಪುಸ್ತಕ ನೀಡಿಲ್ಲ. ಕೇಳಿದರೆ ಸಿಲಿಂಡರ್ ನೀಡಿದ ಸ್ಥಳದಲ್ಲೇ ಪುಸ್ತಕ ವಿತರಿಸುತ್ತೇವೆ ಎಂದು ಹೇಳುತ್ತಿದ್ದಾರೆ. ನಿಮ್ಮ ನಂಬರ್ ಹೇಳಿ, ಆಧಾರ್ ತನ್ನಿ. ಅರ್ಜಿ ಹುಡುಕಬೇಕು. ಗ್ಯಾಸ್ ಯಾರ ಹೆಸರಿಗೆ ಇರೋದು. ಅವರನ್ನೇ ಕರೆದು ತನ್ನಿ ಎಂದು ಸಬೂಬು ಹೇಳುತ್ತಾರೆ’ ಎಂದು ಗ್ರಾಹಕರು ಅಳಲು ತೋಡಿಕೊಳ್ಳುತ್ತಾರೆ. 

‘ನಮ್ಮ ಮನೆಗೆ ಗ್ಯಾಸ್ ಸೌಲಭ್ಯವನ್ನು ಅರಣ್ಯ ಇಲಾಖೆ ನೀಡಿದೆ. ನಮ್ಮೂರಿಗೆ ಗ್ಯಾಸ್ ಕಂಪೆನಿಯವರು ಸಿಲಿಂಡರ್ ತಂದು ವಿತರಿಸುತ್ತಾರೆ. ಆದರೆ ಈವರೆವಿಗೂ ಗ್ಯಾಸ್ ಬುಕ್ ವಿತರಿಸುವ ಸೌಜನ್ಯ ತೋರುತ್ತಿಲ್ಲ’ ಎನ್ನುತ್ತಾರೆ ದೊಡ್ಡಗುಣಿಯ ಗ್ರಾಹಕ ನಾಗರಾಜು.

ಕಳೆದ 6 ತಿಂಗಳ ಹಿಂದೆ ಸಿಲಿಂಡರ್ ಹಾಗೂ ಒಲೆಯನ್ನು ಕುಟುಂಬಗಳಿದ್ದಲ್ಲಿಗೆ ಹೋಗಿ ಕಂಪೆನಿಗಳು ವಿತರಿಸಿದವು. ಅರಣ್ಯ ಇಲಾಖೆಯಿಂದ ಹಣ ಪೂರ್ಣ ಜಮಾ ಆಗುತ್ತಿದ್ದಂತೆ, ಗ್ರಾಹಕರೇ ತನ್ನ ಕಚೇರಿ ಇದ್ದಲ್ಲಿಗೆ ಬಂದು ವಿತರಣಾ ಪುಸ್ತಕ ಪಡೆಯಲಿ ಎಂದು ಗುಬ್ಬಿ ಪ್ರಥಮ ಗ್ಯಾಸ್ ಕಂಪೆನಿ ಹೇಳುತ್ತಿದೆ’ ಎಂದರು.

ಮೊದಲು ನೀಡಿದ್ದ ಸಿಲಿಂಡರ್‌ಗೆ ವಿತರಣಾ ಪುಸ್ತಕ ನೀಡಿಲ್ಲ. ಈಗಾಗಲೇ ನೀಡಿದ ಸಿಲಿಂಡರ್‌ ಸಂಪರ್ಕಕ್ಕೆ ಸಮರ್ಪಕ ಸೇವೆ ಇಲ್ಲ. ಹೊಸ ಸಂಪರ್ಕ ಪಡೆಯುವವರ ಪಾಡು ಹೇಳತೀರದು.

ಪಾದಚಾರಿಗಳಿಗೆ ಕಿರಿಕಿರಿ
ಶಿವಗಂಗಾ ಬುಕ್ ಸ್ಟೋರ್ ಪಕ್ಕ ಇರುವ ಗ್ಯಾಸ್ ವಿತರಣಾ ಕೇಂದ್ರ ಕಚೇರಿ ಎದುರು ಗ್ಯಾಸ್ ಸಿಲಿಂಡರ್ ತುಂಬಿದ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಇಲ್ಲಿನ ರಸ್ತೆಯಲ್ಲಿ ಶುಭೋದಯ, ಶ್ರೀನಿವಾಸ್, ವಿವೇಕಾನಂದ ಶಾಲೆ ಮಕ್ಕಳು ನಡೆದು ತಾಲ್ಲೂಕು ಕಚೇರಿಗೆ ಬರುವ ಮಂದಿ ನಡೆದು ಹೋಗುತ್ತಾರೆ. ಎದುರಿಗೆ ಬರುವ ವಾಹನಗಳ ಸಂಚಾರ ಹಾಗೂ ಸಿಲಿಂಡರ್ ವಾಹನಗಳ ದಟ್ಟಣೆಯಿಂದ ಪಾದಾಚಾರಿಗಳಿಗೆ ಕಿರಿಕಿಯಾಗುತ್ತಿದೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.