ADVERTISEMENT

ಗ್ರಾಮೀಣ ಭಾಗದಲ್ಲಿ ಶಿಶು ಮರಣ ಹೆಚ್ಚು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 9:45 IST
Last Updated 9 ನವೆಂಬರ್ 2017, 9:45 IST

ತುಮಕೂರು: ‘ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಶಿಶು ಮರಣ ಪ್ರಮಾಣ ಇಳಿಕೆಯಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಎಚ್.ವಿ.ರಂಗಸ್ವಾಮಿ ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಶಿಶು ಮರಣ ಪ್ರಮಾಣ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

‘ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲಿಯೇ ಶಿಶು ಮರಣ ಪ್ರಮಾಣ ಅಧಿಕವಾಗಿದೆ. ಈ ಪ್ರಮಾಣ ತಗ್ಗಿಸಲು ಇಲಾಖೆ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದೆ’ ಎಂದರು.

‘ಒಂದು ವರ್ಷದಲ್ಲಿ ಒಂದು ಸಾವಿರ ಮಕ್ಕಳು ಜನಿಸಿದರೆ ಎಷ್ಟು ಮಕ್ಕಳು ಒಂದು ವರ್ಷ ಪೂರೈಸುತ್ತಾರೆ, ಎಷ್ಟು ಮಕ್ಕಳು ಒಂದು ವರ್ಷದ ಒಳಗೆ ಮೃತಪಡುತ್ತಾರೆ ಎನ್ನುವ ಅಂಕಿ ಅಂಶಗಳ ಅಡಿಯಲ್ಲಿ ಶಿಶು ಮರಣ ಪ್ರಮಾಣ ನಿರ್ಧರಿಸಲಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಒಂದು ದೇಶ ಅಥವಾ ಪ್ರದೇಶದ ಜನರ ಆರೋಗ್ಯದ ಮಟ್ಟ ಯಾವ ರೀತಿ ಇದೆ ಎನ್ನುವುದೂ ಆ ದೇಶದ ಅಭಿವೃದ್ಧಿಯ ಸೂಚ್ಯಂಕವಾಗುತ್ತದೆ. ಮನೆಗಳಲ್ಲಿ ಆಗುವ ಹೆರಿಗೆಗಳನ್ನು ತಪ್ಪಿಸಲು ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಉಪಕೇಂದ್ರಗಳಲ್ಲಿ ಹೆರಿಗೆ ಆಗಬೇಕು’ ಎಂದು ವಿವರಿಸಿದರು.

‘ಜಿಲ್ಲೆಯ 144 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 48ರಲ್ಲಿ ಹೆರಿಗೆ ಸೇವೆಗೆ ವಿಶೇಷ ಸೌಲಭ್ಯವನ್ನು ಒದಗಿಸಲಾಗಿದೆ. ಇವು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತವೆ. ನುರಿತ ಸಿಬ್ಬಂದಿ ಇದ್ದಾರೆ’ ಎಂದರು.

‘2007–08ನೇ ಸಾಲಿನಲ್ಲಿ 863 ಶಿಶುಗಳು ರಾಜ್ಯದಲ್ಲಿ ಮೃತಪಟ್ಟಿದ್ದವು. 2016–17ರಲ್ಲಿ 446 ಶಿಶುಗಳು ಸಾವನ್ನಪ್ಪಿವೆ. 10 ವರ್ಷಗಳಲ್ಲಿ ಶೇ 50ರಷ್ಟು ಸಾವಿನ ಪ್ರಮಾಣ ತಗ್ಗಿದೆ. ಹೀಗಿದ್ದರೂ ನಮ್ಮಲ್ಲಿ ಸಾವಿನ ವೇಗವನ್ನು ತಗ್ಗಿಸುವ ಪ್ರಮಾಣ ಕಡಿಮೆ ಇದೆ’ ಎಂದು ವಿಷಾದಿಸಿದರು.

‘ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಶಿಶು ಮರಣ ಪ್ರಮಾಣ ಕಡಿಮೆ ಇದೆ. ಆದರೆ ಕೇರಳ ಮತ್ತು ತಮಿಳುನಾಡಿಗೆ ಹೋಲಿಸಿದರೆ ನಮ್ಮಲ್ಲಿ ಸಾವಿನ ಪ್ರಮಾಣ ಹೆಚ್ಚಿದೆ’ ಎಂದು ತಿಳಿಸಿದರು. ಜಿಲ್ಲಾಪಂಚಾಯಿತಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ವೀರಭದ್ರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.