ADVERTISEMENT

ತಾಯಿಗೊಂಡನಹಳ್ಳಿ: ನೀರಿಗೆ ನಿತ್ಯ ಪರದಾಟ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2014, 8:16 IST
Last Updated 21 ಅಕ್ಟೋಬರ್ 2014, 8:16 IST

ಮಧುಗಿರಿ: ತಾಲ್ಲೂಕಿನ ತಾಯಿಗೊಂಡನಹಳ್ಳಿ ಗ್ರಾಮದಲ್ಲಿ ನೀರಿಗಾಗಿ ಗ್ರಾಮಸ್ಥರು ಕಳೆದ ಒಂದು ತಿಂಗಳಿನಿಂದ ಪರದಾಡುತ್ತಿದ್ದಾರೆ.
ಮಹಿಳೆಯರು ನೀರಿಗಾಗಿ ಕೊಳಾಯಿಗಳ ಮುಂದೆ ಬಿಂದಿಗೆ ಮತ್ತು ಪಾತ್ರೆಗಳನ್ನು ಸರದಿ ಸಾಲಿನಲ್ಲಿಟ್ಟು ಕಾಯು­ವುದು ನಿತ್ಯದ ಕಾಯಕವಾಗಿದೆ. ಕೊಳಾಯಿ­ಗಳಲ್ಲಿ ನೀರು ಬಂದರೆ ಮಾತ್ರ ಇವರ ಬದುಕಿಗೆ ನೆಮ್ಮ­ದಿ. ಇಲ್ಲವಾದರೆ ಕೂಲಿ ಕೆಲಸಕ್ಕೆ ಹೋಗಲೂ ಸಾ­ಧ್ಯ­ವಾ­ಗದು ಎಂದು ಗ್ರಾಮಸ್ಥರಾದ ಲಕ್ಷ್ಮಮ್ಮ ದೂರಿದರು.

‘ಜಾನುವಾರುಗಳಿಗೆ ನೀರು ಕುಡಿಸಲು ಬಹುದೂರ ಕರೆದೊಯ್ಯಬೇಕಾಗಿದೆ. ಜಾನುವಾರು ನೀರು ತೊಟ್ಟಿ ನಿರ್ಮಿಸಬೇಕು’ ಎಂದು ಹೈನುಗಾರಿಕೆಯಿಂದ ಬದುಕು ಸಾಗಿಸುವ ಕೋಟಪ್ಪ ಹೇಳಿದರು.

ಗ್ರಾಮದಲ್ಲಿ ನೀರಿನ ಸಿಸ್ಟನ್‌ಗಳಿವೆ. ಆದರೆ ಬೋರ್‌ವೆಲ್‌ನಲ್ಲಿ ನೀರಿನ ಇಳುವರಿ ಕಡಿಮೆ ಇರುವ ಕಾರಣ ನೀರು ಸಿಸ್ಟನ್ ತಲುಪುತ್ತಿಲ್ಲ. ಅಧಿಕಾರಿಗಳಿಗೆ ಈ ವಿಷಯ ತಿಳಿಸಿದರೂ ಪ್ರಯೋಜನವಾಗಿಲ್ಲ. ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿ– ಪರಿಹರಿಸುವ ವ್ಯವಧಾನ ಯಾರಿಗೂ ಇಲ್ಲ’ ಎಂದು ಗ್ರಾಮಸ್ಥರಾದ ಶಿವ­ಕುಮಾರ್, ನಾಗೇಂದ್ರ, ನಂಜಮ್ಮ, ಲಕ್ಷ್ಮಮ್ಮ, ಭಾಗ್ಯಮ್ಮ, ಸಿದ್ದಮ್ಮ, ಕರಿಯಮ್ಮ, ಪುಟ್ಟಗಂಗಮ್ಮ, ಜಯಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮತ್ತೊಂದು ಕೊಳವೆಬಾವಿ: ತಾಯಿಗೊಂಡನಹಳ್ಳಿ ಗ್ರಾಮದ ಸಮೀಪ 6 ತಿಂಗಳ ಹಿಂದೆ 2 ಕೊಳವೆಬಾವಿ ಕೊರೆಸಲಾಗಿತ್ತು. ಸಿಸ್ಟನ್‌ಗಳಿಗೆ ಅಳವಡಿಸಿರುವ ಪೈಪ್‌ಗಳು ಹಾಳಾಗಿವೆ. ಅದನ್ನು ಸರಿಪಡಿಸಲು ಅಧಿ­ಕಾರಿಗಳಿಗೆ ತಿಳಿಸಲಾಗಿದೆ. ಸಮಸ್ಯೆ ಮುಂದುವರಿದರೆ ಹೆಚ್ಚುವರಿ ಕೊಳವೆಬಾವಿ ಕೊರೆಸಿ, ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿ.ಪಂ. ಸದಸ್ಯೆ ಸುಮನಾ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.