ADVERTISEMENT

ತಾಲ್ಲೂಕಿನಾದ್ಯಂತ ಹೆಚ್ಚಿದ ಜೂಜಾಟ: ದೂರು

ಪಾವಗಡ: ನಾಗರಿಕ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2017, 10:07 IST
Last Updated 8 ಮಾರ್ಚ್ 2017, 10:07 IST

ಪಾವಗಡ: ತಾಲ್ಲೂಕಿನಾದ್ಯಂತ ಜೂಜಾಟ ಹೆಚ್ಚುತ್ತಿದೆ. ಕಷ್ಟಪಟ್ಟು ದುಡಿದ ಹಣ ಜೂಜಾಟದ ಪಾಲಾಗುತ್ತಿದೆ ಎಂದು ಪುರಸಭೆ ಸದಸ್ಯ ಮಹೇಶ್ ದೂರಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಸಂಜೆ ನಡೆದ ನಾಗರಿಕ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಸ್ಥಳೀಯರು ಸೇರಿದಂತೆ ಆಂಧ್ರದ ಮಡಕಶಿರಾದಿಂದ ಜೂಜಾಟ ನಡೆಸಲು ಬುಕ್ಕಿಗಳು ಬರುತ್ತಿದ್ದಾರೆ. ದಿನವಿಡೀ ದುಡಿದ ಹಣವನ್ನು ಜೂಜಾಟಕ್ಕೆ ಹಾಕಲಾಗುತ್ತಿದೆ. ಇದನ್ನು ನಿಯಂತ್ರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಗ್ರಾಮಗಳ ಕಿರಾಣಿ ಅಂಗಡಿಗಳಲ್ಲಿ ಯತೇಚ್ಚವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಮಹಿಳೆಯರು, ಮಕ್ಕಳಿಗೆ ತೀವ್ರ ಕಸಿವಿಸಿಯಾಗುತ್ತಿದೆ. ಅಕ್ರಮ ಮದ್ಯ ಮಾರಾಟ ಮಳಿಗೆಗಳನ್ನು ತೆರವುಗೊಳಿಸಬೇಕು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ ಒತ್ತಾಯಿಸಿದರು.

ಕಳೆದ ಹಲ ವರ್ಷಗಳ ಪರಿಸ್ಥಿತಿ ಮತ್ತೆ ಮರುಕಳಿಸುತ್ತಿದೆ. ಎರಡು ದಿನಗಳ ಹಿಂದೆ ಆಂಧ್ರ ಮೂಲದವರು ತಿರುಮಣಿ ಕ್ಷೇತ್ರದ ತಾಲ್ಲೂಕು ಪಂಚಾಯಿತಿ ಸದಸ್ಯನನ್ನು ಅಪಹರಿಸಿದ ಘಟನೆ ತಾಲ್ಲೂಕಿನ ಜನತೆಯಲ್ಲಿ ಭಯ ಮೂಡಿಸಿದೆ. ತಿರುಮಣಿ ಸಬ್ ಇನ್‌ಸ್ಪೆಕ್ಟರ್‌ ನಾಗಪ್ಪ ಸ್ಥಾನಕ್ಕೆ ದಕ್ಷ ಅಧಿಕಾರಿ ನಿಯೋಜಿಸಬೇಕು. ಸೋಲಾರ್ ಪಾರ್ಕಿನ ಆಯಕಟ್ಟಿನ ಸ್ಥಳದಲ್ಲಿ ಸಿಸಿ ಟಿವಿ ಅಳವಡಿಸಬೇಕು ಎಂದು ಹನುಮಂತರಾಯಪ್ಪ ಆಗ್ರಹಿಸಿದರು.

ದೊಮ್ಮತಮರಿಯಲ್ಲಿ ಪೊಲೀಸ್ ಚೌಕಿ ನಿರ್ಮಿಸಿ, ಆಭಾಗದ ಜನತೆಗೆ ಅನುಕೂಲ ಮಾಡಬೇಕು ಎಂದು ಕೃಷ್ಣಮೂರ್ತಿ ಒತ್ತಾಯಿಸಿದರು. ಮಹಿಳಾ ಪೇದೆಗಳ ಸಂಖ್ಯೆ ತಾಲ್ಲೂಕಿನಲ್ಲಿ ಕಡಿಮೆ ಇದೆ. ಮಹಿಳಾ ಪೇದೆಗಳನ್ನು ನಿಯೋಜಿಸಿ, ಮಹಿಳಾ ಪೊಲೀಸ್ ಠಾಣೆಯನ್ನು ಆರಂಭಿಸಬೇಕು ಎಂದು ಗುಲ್ಜಾರಮ್ಮ, ವಾಣಿ ಮನವಿ ಮಾಡಿದರು.

ಶಾಸಕ ಕೆ.ಎಂ. ತಿಮ್ಮರಾಯಪ್ಪ ಮಾತನಾಡಿ, ತಾಲ್ಲೂಕಿನ ಪೊಲೀಸ್ ವ್ಯವಸ್ಥೆ ಸದೃಢಗೊಳಿಸಬೇಕಿದೆ. ಅಗತ್ಯ ಸಿಬ್ಬಂದಿ ನಿಯೋಜಿಸಿ ಆಧುನಿಕ ಸೌಲಭ್ಯ ಕಲ್ಪಿಸಬೇಕಿದೆ. ಪೊಲೀಸರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷೆ ಸುಮಾ ಅನಿಲ್ ಮಾತನಾಡಿ, ಪಟ್ಟಣದಲ್ಲಿ ಸರಗಳ್ಳತನ, ವಾಹನ ಕಳವು ಹೆಚ್ಚುತ್ತಿದೆ. ಪೊಲೀಸ್ ಠಾಣಾ ಕಟ್ಟಡ ದುರಸ್ತಿಯಲ್ಲಿದೆ. ನೂತನ ಕಟ್ಟಡ ಮಂಜೂರು ಮಾಡಬೇಕು. ಪ್ರತಿ ಬಡಾವಣೆಗೂ ಪೊಲೀಸ್ ಗಸ್ತು ಹೆಚ್ಚಿಸುವ ಅಗತ್ಯವಿದೆ ಎಂದರು.

ಪೊಲೀಸ್ ವರಿಷ್ಠಾಧಿಕಾರಿ ಇಷಾ ಪಂತ್ ಮಾತನಾಡಿ, ಮಟ್ಕಾ, ಇಸ್ಪೀಟ್ ಜೂಜಾಟ, ಅಕ್ರಮ ಮದ್ಯ ಮಾರಾಟವನ್ನು ಈ ಕೂಡಲೇ ತಡೆಯಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮ ತೆಗೆದುಕೊಳ್ಳುತೇನೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಮೇಲಧಿಕಾರಿಗಳಿಂದ ಅನುಮತಿ ಪಡೆದು ದೊಮ್ಮತಮರಿಯಲ್ಲಿ ಪೊಲೀಸ್ ಚೌಕಿ ಆರಂಭಿಸಲಾಗುವುದು. ಮಹಿಳಾ ಕಾನ್ಟ್ ಟೇಬಲ್ ಗಳನ್ನು ನಿಯೋಜಿಸಲಾಗುವುದು ಎಂದರು. ವೇದಿಕೆಯಲ್ಲಿಯೇ ಮಟ್ಕಾ ಬುಕ್ಕಿಗಳ ಹೆಸರು ಪಡೆದು ಯಾವ ಯಾವ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆಯುತ್ತದೆ ಎಂದು ಮಾಹಿತಿ ಪಡೆದರು.

ಪಟ್ಟಣದಲ್ಲಿ ಮಹಿಳಾ ಸ್ವಯಂ ರಕ್ಷಣಾ ಶಿಬಿರ ನಡೆಸಲಾಗುವುದು. ಅಪಘಾತಗಳನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಇನ್‌ಸ್ಪೆಕ್ಟರ್‌ ಆನಂದ್, ಶ್ರೀಶೈಲಮೂರ್ತಿ, ಸಬ್ ಇನ್‌ಸ್ಪೆಕ್ಟರ್‌ ಮಂಜುನಾಥ್, ಲಕ್ಷ್ಮಿಕಾಂತ್‌, ಮಲ್ಲಿಕಾರ್ಜುನಯ್ಯ, ರೈತ ಮುಖಂಡ ನಾಗಭೂಷಣರೆಡ್ಡಿ, ಪೂಜಾರಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಚೆನ್ನಮಲ್ಲಯ್ಯ, ರಿಜ್ವಾನ್, ವಸಂತ್, ವೆಂಕಟೇಶ್, ನರಸಪ್ಪ, ಕನ್ನಮೇಡಿ ಲೋಕೇಶ್, ಪಜಲುಲ್ಲಾ ಸಾಬ್, ಅನ್ವರ್ ಪಾಷಾ ಇನಾಯತ್ ಲಕ್ಷ್ಮಿನಾರಾಯಣಪ್ಪ, ಸುಶೀಲಮ್ಮ, ಅಮೀರ್ ಇದ್ದರು.

*
ಜೂಜಾಟ ಸಂಪೂರ್ಣವಾಗಿ ನಿಯಂತ್ರಿಸಲಾಗುವುದು. ಅಕ್ರಮ ಮದ್ಯ ಮಾರಾಟ ಕೇಂದ್ರಗಳ ಮೇಲೆ ದಾಳಿ ನಡೆಸಲಾಗುವುದು. ಸಮಸ್ಯೆಗೆ ನನಗೆ ನೇರವಾಗಿ ಕರೆ ಮಾಡಿ.
-ಇಷಾಪಂತ್,
ಪೊಲೀಸ್ ವರಿಷ್ಠಾಧಿಕಾರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.