ADVERTISEMENT

ದಾಳಿಂಬೆ ಬೆಲೆ ಕುಸಿತ: 20ಕ್ಕೆ ಇಳಿದ ಸಪೋಟಾ

ಸಿ.ಕೆ.ಮಹೇಂದ್ರ
Published 27 ಆಗಸ್ಟ್ 2014, 9:29 IST
Last Updated 27 ಆಗಸ್ಟ್ 2014, 9:29 IST

ತುಮಕೂರು: ತೆಂಗಿನ ತೋಟಗಳಿಗೆ ತಗುಲಿದ ಕೀಟಗಳ ಹಾವಳಿ, ರೋಗಬಾಧೆಯಿಂದಾಗಿ ಪರ್ಯಾಯ ಬೆಳೆಯಾಗಿ ದಾಳಿಂಬೆ ಬೆಳೆಯಲು ಹೊರಟಿರುವ ಕಲ್ಪತರು ನಾಡಿನ ರೈತರಿಗೆ ದಾಳಿಂಬೆಯೂ ಕೈ ಹಿಡಿಯುವಂತೆ ಕಾಣುತ್ತಿಲ್ಲ.

ಕಳೆದ ವರ್ಷದ ಇದೇ ಅವಧಿಯಲ್ಲಿ ಕೆ.ಜಿ.ಗೆ ರೂ150ರಿಂದ 200 ಇದ್ದ ದಾಳಿಂಬೆ ಈಗ ಕೇವಲ ರೂ 30ರಿಂದ 80ಕ್ಕೆ ಕುಸಿದಿದೆ. ತೀವ್ರವಾಗಿ ಕಾಡಿದ ಬರ ದಾಳಿಂಬೆಗೆ ವರದಾನ­ವಾ­ಯಿತು. ಹೀಗಾಗಿ ಅತ್ಯುತ್ತಮ ಇಳುವಳಿಗೆ ಕಾರಣವಾಗಿತ್ತು. ಆದರೀಗ ಬೆಲೆಯೇ ಇಲ್ಲದೇ ಬೆಳೆಗಾರರ ಮುಖದಲ್ಲಿ ನಗು ಮಾಸಿದೆ.

ಜಿಲ್ಲೆಯಲ್ಲಿ ಅಂತರ್ಜಲ ತೀವ್ರವಾಗಿ ಕುಸಿದಿದ್ದು, ತೆಂಗಿನ ಬದಲಿಗೆ ಕಡಿಮೆ ನೀರು ಕೇಳುವ, ಬರ ಪ್ರದೇಶಕ್ಕೆ ಹೇಳಿ ಮಾಡಿಸಿದಂತಿರುವ ದಾಳಿಂಬೆ ಬೆಳೆಯುವಂತೆ ತೋಟಗಾರಿಕಾ ಇಲಾಖೆ ಪ್ರೋತ್ಸಾಹಿಸಿತು. ನೀರಿನ ಅಭಾವದಿಂದ ಕಂಗೆಟ್ಟಿದ್ದ ಹಾಗೂ ದಾಳಿಂಬೆ ಬೆಳೆಯಲ್ಲಿ ಲಕ್ಷ, ಲಕ್ಷ ಲಾಭ ಮಾಡಿ­ಕೊಂಡ ಉದಾಹರಣೆಗಳನ್ನು ಗಮನಿಸಿದ ರೈತರು ನಾಲ್ಕೈದು ವರ್ಷಗಳಿಂದ ಈ ಬೆಳೆಯತ್ತ ಅತೀವ ಆಸಕ್ತಿ ತೋರಿಸಿದ್ದರು.

ಒಂದು ಕಾಲದಲ್ಲಿ ಮಧುಗಿರಿ ತಾಲ್ಲೂಕು ದಾಳಿಂಬೆಗೆ ಪ್ರಸಿದ್ಧಿಯಾಗಿತ್ತು. ಮಧುಗಿರಿಯ ದಾಳಿಂಬೆ ಮೇಲೆ ಪದ್ಯವೂ ರಚಿತವಾಗಿತ್ತು. ನಂತರದ ಕಾಲದಲ್ಲಿ ಮಧುಗಿರಿಯಿಂದ ಜಾಗ ಖಾಲಿ ಮಾಡಿ ಶಿರಾದಲ್ಲಿ ತಳವೂರಿತ್ತು. 2004ರಿಂದ 2009ರ ವರೆಗೂ ಅತಿವೃಷ್ಟಿ ಕಾರಣ ರೋಗಕ್ಕೀಡಾಗಿ ಅಲ್ಲಿನ  ಬೆಳೆಗಾರರು ಸಾಲಗಾರರಾಗಿದ್ದರು. ಸಾಲ ಮನ್ನಾ ಮಾಡುವಂತೆ ಸರ್ಕಾರದ ಮುಂದೆ ಅವರ ಹೋರಾಟ ಇನ್ನೂ ನಿಂತಿಲ್ಲ. ಇಂದು ಜಿಲ್ಲೆ ರಾಜ್ಯದಲ್ಲಿಯೇ ೪ನೇ ಅತಿಹೆಚ್ಚು ದಾಳಿಂಬೆ ಬೆಳೆಯುವ ಪ್ರದೇಶ ಹೊಂದಿದೆ.

2009ರ ನಂತರ ಕಾಣಿಸಿಕೊಂಡ ಬರ ದಾಳಿಂಬೆ ಬೆಳೆಗಾರರ ಪಾಲಿಗೆ ಚಿನ್ನದ ತೆಗೆಯುವ ಬೆಳೆಯಾಗಿ ಪರಿಣಮಿಸಿತು. 2011–12ರಲ್ಲಿ ಕೆ.ಜಿ.ಗೆ ರೂ 350ರ ವರೆಗೂ ಏರಿಕೆ ಕಂಡಿದ್ದು, ರೈತರು ದಾಳಿಂಬೆಯ ಕನಸು ಕಾಣ­ತೊಡಗಿದರು. ಪರಿಣಾಮವಾಗಿ ಶಿರಾದ ಹೊರಗೂ ದಾಳಿಂಬೆ ಬೆಳೆ ಕಾಣಲಾರಂಭಿಸಿತು. ಮಧುಗಿರಿ, ಗುಬ್ಬಿ, ಚಿಕ್ಕ­ನಾಯಕನ­ಹಳ್ಳಿ, ತುಮಕೂರು, ಕುಣಿಗಲ್‌, ತಿಪಟೂರು ತಾಲ್ಲೂಕಿಗೂ ವಿಸ್ತರಿಸಿತು. ಆದರೀಗ ಬೆಲೆ ಇಳಿದಿರುವುದು ಕಂಗಾಲಾಗಿಸಿದೆ.

‘ದಾಳಿಂಬೆ ಕೃಷಿ ಅತಿ ವೆಚ್ಚದಾಯಕ. ಸಲಹೆಗಾರರ ಮಾತು ಕೇಳಿ ಅತಿಯಾಗಿ ವೆಚ್ಚ ಮಾಡಿರುವ ರೈತರು ಸಂಕಷ್ಟಕ್ಕೆ ಸಿಲುಕುವುದು ಖಚಿತ. ಅತ್ಯುತ್ತಮ ಇಳುವರಿ ಪಡೆದಿರುವ ರೈತರು ಈ ಬೆಲೆಯಲ್ಲೂ ಉಸಿರಾಡಬಹುದು. ಉಳಿದವರು ಕಷ್ಟಕ್ಕೆ ಸಿಲುಕುತ್ತಾರೆ’ ಎನ್ನುತ್ತಾರೆ ಶಿರಾ ದಾಳಿಂಬೆ ಬೆಳೆಗಾರರ ಸಂಘದ ಅಧ್ಯಕ್ಷ ಶಿವಕುಮಾರ್‌.

‘ಎರಡು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲೇ ಒಳ್ಳೆಯ ಬೆಲೆ, ಬೇಡಿಕೆ ಇದ್ದ ಕಾರಣ ಯೂರೋಪ್‌, ಅರಬ್‌ ದೇಶಗಳಿಂದ ರಫ್ತು ನಿಂತಿತು. ಈಗ ದೇಶಿಯ ಮಾರು­ಕಟ್ಟೆ­ಯಲ್ಲಿ ಬೆಲೆ ಕುಸಿದಿರುವುದರಿಂದ ಹಣ್ಣಿನ ರಫ್ತು ಆರಂಭ­ವಾದರೆ ಮತ್ತೆ ಬೆಲೆ ನಿರೀಕ್ಷಿಸಬಹುದು’ ಎಂಬುದು ಅವರ ನಿರೀಕ್ಷೆಯಾಗಿದೆ.
‘ಸಣ್ಣ ಗಾತ್ರದ ಹಣ್ಣನ್ನು ಕೆ.ಜಿ.ಗೆ ಕೇವಲ ರೂ 20ರಿಂದ 25ಕ್ಕೆ ಮಾರುತ್ತಿದ್ದೇವೆ. ಅತ್ಯುತ್ತಮ ಗುಣಮಟ್ಟದ ಹಣ್ಣು ಕೆ.ಜಿ.ಗೆ ರೂ 50ರಿಂದ 65ಕ್ಕೆ ಚಿಲ್ಲರೆ ವ್ಯಾಪಾರಿಗಳಿಗೆ ಕೊಡುತ್ತಿದ್ದೇವೆ. ರೈತರ ತೋಟಗಳಿಂದ ನೇರವಾಗಿ ಮಾಲು ತರುತ್ತಿದ್ದೇವೆ. ಮಾರು­ಕಟ್ಟೆಯ ಹಣ್ಣಿನ ಚಿಲ್ಲರೆ ಬೆಲೆಯ ಅರ್ಧದಷ್ಟು ಬೆಲೆಯೂ ರೈತರಿಗೆ ಸಿಗುತ್ತಿಲ್ಲ’ ಎನ್ನುತ್ತಾರೆ ನಗರದ ಎಸ್‌ಎಲ್‌ಎಸ್‌ ಸಗಟು ವ್ಯಾಪಾರಿ ವರಲಕ್ಷ್ಮಿ.

‘ಶಿರಾ, ಬರಗೂರು, ಹೆಬ್ಬೂರು, ಹುಳಿಯಾರು ಮುಂತಾದ ಕಡೆ ಬೆಳೆ ಉತ್ತಮವಾಗಿ ಬಂದಿದೆ. ಆದರೆ ಈ ವರ್ಷ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಮಳೆ ವಿಪರೀತ ಬಂದ ಕಾರಣ ಅಲ್ಲಿ ಬೇಡಿಕೆ ಇಲ್ಲವಾಗಿದೆ. ಇದು ಕೂಡ ಬೆಲೆ ಕುಸಿತಕ್ಕೆ ಕಾರಣ’ ಎಂದು ಸಗಟು ವ್ಯಾಪಾರಿ ಶಬ್ಬೀರ್‌ ತಿಳಿಸಿದರು.

‘ಅತಿಯಾದ ನಿರೀಕ್ಷೆ ಹುಸಿಯಾಗಿದೆ. ಬಡ್ಡಿಗೆ ಹಣ ತಂದು ಕೆಲವರು ತೋಟ ಮಾಡಿದ್ದರು’ ಎಂದು ಬೆಳೆಗಾರರಾದ ಬೆಳಗುಲಿ ಶಶಿಭೂಷಣ್‌ ಹೇಳಿದರು.
ಕುಸಿದ ಸಪೋಟ ಬೆಲೆ: ಸಪೋಟಾ ಬೆಳೆ ತೀವ್ರವಾಗಿ ಕುಸಿ­ದಿದೆ. ಸೋಮವಾರದ ಸಗಟು ಮಾರುಕಟ್ಟೆಯಲ್ಲಿ ಸಪೋಟಾ ಕೆ.ಜಿ.ಗೆ ರೂ 20 ಇತ್ತು. ಮಾರುಕಟ್ಟೆಗೆ ಭರಪೂರ ಪೂರೈಕೆ­ಯಿದೆ. ಆದರೆ ಬೇಡಿಕೆಯೇ ಇಲ್ಲ. ಮುಂದಿನ ವಾರಗಳಲ್ಲಿ ಕೆ.ಜಿ.ಗೆ ನಾಲ್ಕೈದು ರೂಪಾಯಿ ಆದರೂ ಆಗಬಹುದು ಎಂದು ವರ್ತಕರು ವಿಶ್ಲೇಷಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆ­ಯಲ್ಲಿ ಸಪೋಟಾ ಬೆಳೆಯು ವಿಸ್ತರಿಸಿದೆ. ಆದರೆ ಬೆಲೆಯೇ ಇಲ್ಲವಾಗಿದೆ. ಇಂದು ಜಿಲ್ಲೆ ರಾಜ್ಯದಲ್ಲಿಯೇ ೧೧ನೇ ಅತಿಹೆಚ್ಚು ಸಪೋಟಾ ಬೆಳೆಯುವ ಪ್ರದೇಶ ಹೊಂದಿದೆ.

ಸುಧಾರಿಸಿದ ತೆಂಗು: ತೆಂಗಿನ ಕಾಯಿ ಬೆಲೆಯಲ್ಲಿ ತುಸು ಹೆಚ್ಚಳ ಕಂಡುಬಂದಿದೆ. ಮಾರುಕಟ್ಟೆಗೆ ಆವಕ ಕಡಿಮೆ­ಯಾ­ಗಿದ್ದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಹಿಂದಿನ ವಾರ ಉತ್ತಮ ತೆಂಗಿನಕಾಯಿ ಬೆಲೆ ರೂ 16 ಇದ್ದದ್ದು ಈಗ ರೂ 17ಕ್ಕೆ ಜಿಗಿದಿದೆ. ತಾಂಬೂಲ ಕಾಯಿ ಬೆಲೆ ರೂ 10 ಇತ್ತು.
ಕುಸಿದ ಅಡಿಕೆ ಬೆಲೆ: ಕ್ವಿಂಟಲ್‌ಗೆ ರೂ 80 ಸಾವಿರದವರೆಗೂ ಹೆಚ್ಚುವ ಮೂಲಕ ಮಾರುಕಟ್ಟೆ ಮತ್ತು  ಬೆಳೆಗಾರರನ್ನು ತಲ್ಲಣ­ಗೊಳಿಸಿದ ಅಡಿಕೆ ಬೆಲೆ ಮೊದಲಿನ ಸ್ಥಿತಿಗೆ ಬಂದು ನಿಂತಿದೆ. ರಾಶಿ ಅಡಿಕೆ ಕ್ವಿಂಟಲ್‌ಗೆ ಗರಿಷ್ಠ ರೂ 40 ಸಾವಿರಕ್ಕೆ ಇಳಿದಿದೆ.

ಬಾಳೆ ಬೆಲೆಯೂ ಏರಿತು: ಗಣೇಶ ಚತುರ್ಥಿ ಸಮೀಪಿಸು­ತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಾಳೆಹಣ್ಣಿನ ಬೆಲೆಯೂ ಗಗನಕ್ಕೇರಿದೆ. ಮಂಡಿಗಳಲ್ಲಿ ಒಂದು ಕೆ.ಜಿ. ಬಾಳೆಗೆ ರೂ ೬೫ ಇದ್ದರೆ, ಅಂಗಡಿಗಳಲ್ಲಿ ರೂ ೭೦ರಿಂದ ರೂ ೭೫ ಇದೆ. ತಳ್ಳುವ ಗಾಡಿಗಳಲ್ಲಿ ರೂ ೮೫ರವರೆಗೂ ಧಾರಣೆ ಇದೆ.
ಗಾಳಿ ಹೊಡೆತಕ್ಕೆ ಬಾಳೆ ತೋಟಗಳಲ್ಲಿ ಎಲೆಗಳು ಹರಿದು ಹೋಗಿರುವುದರಿಂದ ಮಾರುಕಟ್ಟೆಯಲ್ಲಿ ಬಾಳೆ ಎಲೆ ಕೊರತೆ ಕಾಣಿಸಿಕೊಂಡಿದೆ. ಹಚ್ಚಿದ ಮುತ್ತುಗದ ಎಲೆಯ ಧಾರಣೆಯೂ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.