ADVERTISEMENT

ದೇವರಾಯನದುರ್ಗ: ಬ್ರಹ್ಮರಥೋತ್ಸವ

ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಜಕ್ಕೇನಹಳ್ಳಿ ಅಹೋಬಲ, ಕಣಿವೆ ಲಕ್ಷ್ಮಿನರಸಿಂಹ ಸ್ವಾಮಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2017, 6:56 IST
Last Updated 13 ಮಾರ್ಚ್ 2017, 6:56 IST
ತುಮಕೂರು ತಾಲ್ಲೂಕು ದೇವರಾಯನದುರ್ಗದಲ್ಲಿ ಭಾನುವಾರ ನಡೆದ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು
ತುಮಕೂರು ತಾಲ್ಲೂಕು ದೇವರಾಯನದುರ್ಗದಲ್ಲಿ ಭಾನುವಾರ ನಡೆದ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು   

ತುಮಕೂರು: ಇತಿಹಾಸ ಪ್ರಸಿದ್ಧ ದೇವರಾಯನದುರ್ಗ  ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವಯುತವಾಗಿ ನಡೆಯಿತು.

ಬ್ರಹ್ಮರಥೋತ್ಸವಕ್ಕೆ  ಜಿಲ್ಲೆ ಹಾಗೂ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಬಂದಿದ್ದರು. ರಥ ಸಾಗುವಾಗ ಹಣ್ಣು, ಪುಷ್ಪ ಅರ್ಪಿಸಿ ಭಕ್ತಿ ಮೆರೆದರು.
ಜಿಲ್ಲಾಡಳಿತದ ಉಸ್ತುವಾರಿಯಲ್ಲಿ ನಡೆದ ಜಾತ್ರೆಯಲ್ಲಿ ಜನರ ನೂಕುನುಗ್ಗಲು ತಪ್ಪಿಸಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು.

ಮಧ್ಯಾಹ್ನ 1.30ಕ್ಕೆ ಗರುಡ ದರ್ಶನ ನೀಡಿದ ಬಳಿಕ ಶಾಸಕ ಬಿ.ಸುರೇಶಗೌಡ ರಥೋತ್ಸವಕ್ಕೆ ಚಾಲನೆ ನೀಡಿದರು.

ಬಿಸಿಲಿನ ತಾಪಕ್ಕೆ ಭಕ್ತರು ಸುಸ್ತಾದಾಗ ನೀರಿನ ಅವ್ಯವಸ್ಥೆ ಮಾಡಲಾಗಿತ್ತು. ಸಾರಿಗೆ ಇಲಾಖೆಯು ವಿಶೇಷ ಬಸ್ ವ್ಯವಸ್ಥೆ ಮಾಡಿತ್ತು. ಅದರಲ್ಲೂ ಭಾನುವಾರ ದಿನವೇ ರಥೋತ್ಸವ ನಡೆದಿದ್ದರಿಂದ ತುಮಕೂರು ನಗರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಸೂಕ್ತ ಭದ್ರತೆ: ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಿತ್ತು. ಮಾರ್ಚ್ 17ರವರೆಗೂ ಜಾತ್ರೆ ನಡೆಯಲಿದ್ದು, ಜಾತ್ರೆ ದಿನ ಬಾರದೇ ಇದ್ದ ಭಕ್ತರು ಈ ದಿನಗಳಲ್ಲಿ ಬಂದು ದರ್ಶನ ಪಡೆಯುತ್ತಾರೆ.

ಜಾತ್ರೆಗೆ ಬಂದ ಚಿತ್ರನಟರು
ಮಧುಗಿರಿ:
ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಜಕ್ಕೇನಹಳ್ಳಿ ಅಹೋಬಲ ಲಕ್ಷ್ಮಿನರಸಿಂಹ ಸ್ವಾಮಿಯ ಬ್ರಹ್ಮ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.

ಬ್ರಹ್ಮರಥೋತ್ಸವಕ್ಕೆ ತಾಲ್ಲೂಕು ಸೇರಿದಂತೆ ರಾಜ್ಯದ ದೂರದ ಊರುಗಳಿಂದ ಸಾವಿರಾರು ಭಕ್ತರು ಸ್ವಾಮಿಗೆ ಪೂಜೆ ಸಲ್ಲಿಸಿದರು.
ಮಂಗಳ ವಾದ್ಯಳೊಂದಿಗೆ ದೇವಾಲಯದಿಂದ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ರಥದಲ್ಲಿ ಸ್ಥಾಪಿಸಲಾಯಿತು. ಭಕ್ತರು ತೇರಿನ ಕಳಸಕ್ಕೆ ಬೃಹತ್  ಹೂವಿನ ಹಾರಗಳನ್ನು ಹಾಕಿದರು. ಬಾಳೆಹಣ್ಣು, ದವನ, ಪುರಿ ಮತ್ತು ದವಸ–ಧಾನ್ಯ ಅರ್ಪಿಸಿ ಹರಕೆ ತೀರಿಸಿದರು.

ಚಲನಚಿತ್ರ ನಟರಾದ ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಮತ್ತು ಸೂರಜ್ ಸರ್ಜಾ ಬ್ರಹ್ಮ ರಥೋತ್ಸವಕ್ಕೆ ಆರತಿ ಬೆಳಗಿದರು. ಜಾತ್ರೆಯಲ್ಲಿ ದೇವಾಲಯ ಸಮಿತಿ ಹಾಗೂ ದಾನಿಗಳು ಭಕ್ತರು ಪ್ರಸಾದ, ಹೆಸರುಬೇಳೆ, ಪಾನಕ, ಮಜ್ಜಿಗೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದರು.

ಬಡವನಹಳ್ಳಿ ಪೊಲೀಸರು  ಬಂದೋಬಸ್ತ್ ಕೈಗೊಂಡಿದ್ದರು. ಚಲನ ಚಿತ್ರ ನಟ ಶಕ್ತಿಪ್ರಸಾದ್ ಪತ್ನಿ ಲಕ್ಷ್ಮಿದೇವಮ್ಮ,  ತಾಲ್ಲೂಕು ಪಂಚಾಯಿತಿ ಸದಸ್ಯ ಮಮತಾ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಂ.ವಿ.ವೀರಭದ್ರಯ್ಯ, ಎಪಿಎಂಸಿ ಸದಸ್ಯ ತಿಮ್ಮರಾಜು, ಮುಖಂಡ ಸಿದ್ದಾಪುರ ವೀರಣ್ಣ, ದೇವಾಲಯದ ಸಮಿತಿ ಸದಸ್ಯರಾದ ಬಿ.ಎಚ್.ದೊಡ್ಡಪ್ಪಯ್ಯ, ಟಿ.ಎಸ್.ನಾಗರಾಜು, ಕೃಷ್ಣಪ್ಪ, ಡಿ.ನಾಗರಾಜಯ್ಯ, ಎಚ್.ರಂಗಯ್ಯ, ಜೆ.ಸಿ.ಚೌಡಪ್ಪ, ಅರ್ಚಕರಾದ ಲಕ್ಷ್ಮಿನಾರಾಯಣಪ್ಪ, ಓಬಳನರಸಿಂಹಯ್ಯ ಇದ್ದರು.

ಕಲ್ಯಾಣೋತ್ಸವ
ಪಾವಗಡ:
ಕಣಿವೆ ಲಕ್ಷ್ಮಿನರಸಿಂಹಸ್ವಾಮಿ 62ನೇ ಬ್ರಹ್ಮರಥೋತ್ಸವ ಭಾನುವಾರ ನಡೆಯಿತು.

ಪಟ್ಟಣದ ಹೊರವಲಯದ ಕಣಿವೆ ದೇವಾಲಯವನ್ನು ಜಾತ್ರೆ ಅಂಗವಾಗಿ ಹೂವುಗಳು, ತಳಿರು ತೋರಣ. ಬಾಳೆ ಕಂದುಗಳಿಂದ ಅಲಂಕರಿಸಲಾಗಿತ್ತು. ಶನಿವಾರ ರಾತ್ರಿ ಲಕ್ಷ್ಮಿನರಸಿಂಹ ಸ್ವಾಮಿ ಕಲ್ಯಾಣೋತ್ಸವ ನಡೆಯಿತು.

ಭಾನುವಾರ ಬೆಳಿಗ್ಗೆ ಧ್ವಜಾರೋಹಣ, ಕಳಶಪೂಜೆ, ಬಲಿ, ಹೋಮ ನಡೆದವು.  ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ತಹಶೀಲ್ದಾರ್ ಟಿ.ಕೆ.ತಿಪ್ಪೂರಾವ್, ಗ್ರೇಡ್ 2 ತಹಶೀಲ್ದಾರ್ ವರದರಾಜು, ಪುರಸಭೆ ಅಧ್ಯಕ್ಷೆ ಸುಮಾ ಅನಿಲ್ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ಬಾಳೆಹಣ್ಣುಗಳನ್ನು ರಥಕ್ಕೆ ಎಸೆದು ಹರಕೆ ತೀರಿಸಿದರು.

ಶಾಸಕ ಕೆ.ಎಂ.ತಿಮ್ಮರಾಯಪ್ಪ, ಪುರಸಭೆ ಮಾಜಿ ಅಧ್ಯಕ್ಷ ಶಂಕರರೆಡ್ಡಿ, ಸದಸ್ಯ ಎಂ.ಎಸ್.ವಿಶ್ವನಾಥ್, ತುಮುಲ್ ನಿರ್ದೇಶಕ ಕೆ.ಆರ್.ಸುರೇಶ್, ದೇಗುಲ ಸಮಿತಿ ಅಧ್ಯಕ್ಷ ವಿಜಯನರಸಿಂಹ, ಕಾರ್ಯದರ್ಶಿ ಪಿ.ವಿ.ಸುಬ್ಬನರಸಿಂಹ, ಪದಾಧಿಕಾರಿಗಳಾದ ಲೋಕೇಶ್, ರಾಜು ಇದ್ದರು.

ಇಂದಿನಿಂದ ಶ್ರೀದೇವಿ ಅಮ್ಮನವರ ಜಾತ್ರೆ
ಗುಬ್ಬಿ:
ತಾಲ್ಲೂಕಿನ ನಿಟ್ಟೂರು ಹೋಬಳಿ ಶ್ರೀದೇವಿಪುರ(ಗೂಬೆಹಳ್ಳ)ದ ಶ್ರೀದೇವಿ ಅಮ್ಮನವರ ಜಾತ್ರಾ ಮಹೋತ್ಸವ ಮಾ. 13 ಮತ್ತು 14ರಂದು  ನಡೆಯಲಿದೆ. ಮಾ.13ರ ರಾತ್ರಿ ಅಗ್ನಿಕೊಂಡ, ಆರತಿ, 14ಕ್ಕೆ ರಥೋತ್ಸವ ಹಾಗೂ ಜನಪದ ಕಲಾ ತಂಡಗಳಿಂದ ನೃತ್ಯ ನಡೆಯಲಿದೆ ಎಂದು ಜಾತ್ರಾ ಸಮಿತಿಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT