ADVERTISEMENT

ನಗರಸಭೆ ಅಧ್ಯಕ್ಷ ಕ್ಷಮೆಯಾಚಿಸಲು ಒತ್ತಾಯ

ತಿಪಟೂರು ಬಂದ್ ನಡೆಸಿದ್ದು ರೈತ ವಿರೋಧಿ ಧೋರಣೆ

​ಪ್ರಜಾವಾಣಿ ವಾರ್ತೆ
Published 25 ಮೇ 2017, 5:03 IST
Last Updated 25 ಮೇ 2017, 5:03 IST

ತಿಪಟೂರು: ‘ನೊಣವಿನಕೆರೆಯಿಂದ ನಗರಕ್ಕೆ ಕುಡಿಯುವ ನೀರನ್ನು ಒದಗಿಸುವಂತೆ ಆಗ್ರಹಿಸಿ ನಗರಸಭೆ ಅಧ್ಯಕ್ಷರು ಹಾಗೂ ಸದಸ್ಯರು ಸೇರಿ ಪ್ರತಿಭಟನೆ ಮಾಡಿ ಬಂದ್ ನಡೆಸಿದ್ದು ರೈತ ವಿರೋಧಿ ಧೋರಣೆಯಾಗಿದೆ’ ಎಂದು ನೊಣವಿನಕೆರೆ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ವಿ.ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

‘ಅನ್ನದಾತನ ವಿರುದ್ಧವೇ ಪ್ರತಿಭಟನೆ ಮಾಡಿರುವುದು ಅಸಮಂಜಸ. ಇದು ದೇಶದಲ್ಲೇ ಮೊದಲಿರಬೇಕು’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

‘ನೊಣವಿನಕೆರೆಯಿಂದ ಕುಡಿವ ನೀರು ತರುವ ಯೋಜನೆ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳದೆ ರೈತ ಮುಖಂಡರು ಮಾತನಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಇದು ತಾಲ್ಲೂಕಿಗೆ ಪ್ರಥಮ ಕೆರೆಯಾಗಿದೆ. ಇಂತಹ ಕೆರೆ ನೆಚ್ಚಿ ಅಪಾರ ರೈತರು ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ನೀರನ್ನು ನಗರಕ್ಕೆ ತೆಗೆದುಕೊಂಡು ಹೋದರೆ ಕೃಷಿ  ಮಾಡಲು ಸಾಧ್ಯವಿಲ್ಲ. ಹಾಗಾಗಿ ಪರ್ಯಾಯ ಯೋಜನೆ ರೂಪಿಸಿಕೊಳ್ಳಬೇಕು’ ಎಂದರು.

ಉಪಾಧ್ಯಕ್ಷ ವೃಷಭೇಂದ್ರ ಮಾತನಾಡಿ, ‘ನಗರಕ್ಕೆ ನೀರು ತರಲು ₹ 127 ಕೋಟಿ ವೆಚ್ಚದ ಯೋಜನೆ ರೂಪಿಸಿರುವುದರಲ್ಲಿ ಅರ್ಥವಿಲ್ಲ. ಅದರ ಬದಲು ಪರ್ಯಾಯ ಮಾರ್ಗಗಳನ್ನು ಅನುಸರಿಸಿದರೆ ಹಣ ಉಳಿಯುತ್ತದೆ. ಮಳೆ ನೀರು ಸಂಗ್ರಹದಂತಹ ಕ್ರಮಗಳಿಗೆ ಬಳಸಿದರೆ ಹೆಚ್ಚು ಅನುಕೂಲವಾಗುತ್ತದೆ.

ಎಲ್ಲ ಮನೆಗಳಿಗೂ ನಗರಸಭೆ ವತಿಯಿಂದ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿದರೆ ಹೆಚ್ಚು ಅನುಕೂಲವಾಗುತ್ತದೆ. ಒಟ್ಟಾರೆ ನೊಣವಿನಕೆರೆ ಕೆರೆಯಿಂದ ನೀರು ತರುವ ಯೋಜನೆ ಕೈ ಬಿಡಬೇಕು’ ಎಂದರು.

ರೈತ ಸಂಘದ ನೊಣವಿನಕೆರೆ ಹೋಬಳಿ ಅಧ್ಯಕ್ಷ ಆಲ್ಬೂರು ಗಂಗಾಧರ್ ಮಾತನಾಡಿ, ‘ನೊಣವಿನಕೆರೆ ತಾಲ್ಲೂಕು ಪಂಚಾಯಿತಿ ಕ್ಷೇತ್ರದಿಂದ ಜಯಗಳಿಸಿ ಉಪಾಧ್ಯಕ್ಷರಾಗಿರುವ ಶಂಕರ್ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ಕುಮಾರ್ ರೈತರ ಪರವಾಗಿ ಮಾತನಾಡದೆ ವಿರುದ್ಧವಾಗಿದ್ದಾರೆ.

ನೊಣವಿನಕೆರೆ ನೀರನ್ನು ನಗರಕ್ಕೆ ತೆಗೆದುಕೊಂಡು ಹೋಗಲು ಪ್ರೇರಣೆಯಾಗಿ ನಿಂತಿದ್ದಾರೆ. ಆದ್ದರಿಂದ ನೊಣವಿನಕೆರೆ ಹೋಬಳಿಯಲ್ಲಿ ಇವರಿಬ್ಬರು ಯಾವುದೇ ಸಮಾರಂಭದಲ್ಲಿ ಪಾಲ್ಗೊಂಡರೆ ಕಪ್ಪು ಬಾವುಟ ಪ್ರದರ್ಶಿಸಿ ಮಸಿ ಎರಚಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಉಗ್ರಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಶಶಿಧರ್, ನಾಗರಾಜು, ಆಲ್ಬೂರು ಮಹಲಿಂಗಪ್ಪ, ಹುಲ್ಲೇನಹಳ್ಳಿ ಜಯರಾಂ, ರೈತಸಂಘದ ಸದಸ್ಯ ಗೋಪಾಲಪುರ ಶ್ರೀನಿವಾಸ್, ವೇದಾನಂದ, ಲಕ್ಷ್ಮಿನಾರಾಯಣ, ವಿನಯ್, ರಘು, ಮೀನುಗಾರರ ಸಂಘದ ಅಧ್ಯಕ್ಷ ಶಿವಪುತ್ರಪ್ಪ ಸುದ್ದಿಗೋಷ್ಠಿಯಲ್ಲಿ ಇದ್ದರು.

ADVERTISEMENT

*
ತಿಪಟೂರು ಬಂದ್ ಸಂದರ್ಭ ರೈತ ಮುಖಂಡರನ್ನು ಟೀಕಿಸಿರುವ  ತಾಲ್ಲೂಕು ಪಂಚಾಯಿತಿ ಮತ್ತು ನಗರಸಭೆ ಅಧ್ಯಕ್ಷರು ಕ್ಷಮೆ ಯಾಚಿಸಬೇಕು.
-ಆಲ್ಬೂರು ಗಂಗಾಧರ್, ಅಧ್ಯಕ್ಷ, ರೈತ ಸಂಘದ ನೊಣವಿನಕೆರೆ ಹೋಬಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.