ADVERTISEMENT

ಬರದಲ್ಲಿ ಸಹ ಮಾದರಿ ರೈತನ ಯಶೋಗಾಥೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 9:00 IST
Last Updated 4 ಸೆಪ್ಟೆಂಬರ್ 2017, 9:00 IST
ಶಿರಾ ತಾಲ್ಲೂಕಿನ ಭೂಪಸಂದ್ರ ಗ್ರಾಮದಲ್ಲಿ ರೈತ ವೆಂಕಟಶ್ವಾಮಯ್ಯ ಜಮೀನಿನಲ್ಲಿ ಶೇಂಗಾ ಗಿಡವನ್ನು ಕಿತ್ತು ಕೃಷಿ ಅಧಿಕಾರಿಗಳಿಗೆ ತೋರಿಸುತ್ತಿರುವುದು
ಶಿರಾ ತಾಲ್ಲೂಕಿನ ಭೂಪಸಂದ್ರ ಗ್ರಾಮದಲ್ಲಿ ರೈತ ವೆಂಕಟಶ್ವಾಮಯ್ಯ ಜಮೀನಿನಲ್ಲಿ ಶೇಂಗಾ ಗಿಡವನ್ನು ಕಿತ್ತು ಕೃಷಿ ಅಧಿಕಾರಿಗಳಿಗೆ ತೋರಿಸುತ್ತಿರುವುದು   

ಶಿರಾ: ರಾಜ್ಯದ ಬಹುತೇಕ ಕಡೆ ಬರದಿಂದಾಗಿ ಗ್ರಾಮೀಣ ಪ್ರದೇಶದವರು ಹಾಗೂ ರೈತರು ಕಂಗೆಟ್ಟಿದ್ದಾರೆ. ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬಿತ್ತನೆಯನ್ನು ಸಹ ಮಾಡಲಾಗದೆ ರೈತರು ಆಕಾಶದ ಕಡೆ ನೋಡುತ್ತಿದ್ದಾರೆ. ಆದರೆ ಇಂತಹ ವೇಳೆಯಲ್ಲಿ ಸಹ ತನ್ನ ಜಮೀನಿನಲ್ಲಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿ ಜಮೀನನ್ನು ಹಸಿರುಮಯವನ್ನಾಗಿ ಮಾಡುವ ಮೂಲಕ ಮಾದರಿ ರೈತನಾಗಿ ಇತರರನ್ನು ತನ್ನ ಕಡೆ ಸೆಳೆಯುತ್ತಿರುವುದು ಆಶ್ಚರ್ಯ ಮೂಡಿಸುತ್ತಿದೆ.

ಶಿರಾ ತಾಲ್ಲೂಕಿನ ಭೂಪಸಂದ್ರ ಗ್ರಾಮದ ರೈತ ವೆಂಕಟಶ್ವಾಮಯ್ಯ ತನಗಿರುವ 4 ಎಕರೆ 37 ಗುಂಟೆ ಜಮೀನಿನಲ್ಲಿ ಒಂದು ಎಕರೆಯಲ್ಲಿ ಶೇಂಗಾ, 1 ಎಕರೆ 25 ಗುಂಟೆ ಜಾಗದಲ್ಲಿ ಊರುಗಾಲು ಪದ್ಧತಿಯಲ್ಲಿ ತೊಗರಿ, 10 ಗುಂಟೆ ಪ್ರದೇಶದಲ್ಲಿ ಅರೆ ನೀರಾವರಿ ಭತ್ತ, 2 ಗುಂಟೆಯಲ್ಲಿ ದಡ್ಡಿ ಭತ್ತ ಹಾಗೂ 20 ಗುಂಟೆ ಪ್ರದೇಶದಲ್ಲಿ ನವಣೆ, ಸಜ್ಜೆ, ಹಾರ್ಕ ಸೇರಿದಂತೆ ಸಿರಿ ಧಾನ್ಯಗಳನ್ನು ಬಿತ್ತನೆ ಮಾಡಿ ಉತ್ತಮ ಬೆಳೆ ತೆಗೆಯಲು ಮುಂದಾಗಿರುವುದು ಸೋಜಿಗ ಮೂಡಿಸುತ್ತದೆ. ಇವರ ಜಮೀನು ಹಸಿರುಮಯವಾಗಿದ್ದರೆ ಇವರ ಜಮೀನಿನ ಸತ್ತು ಮುತ್ತ ಬಹುತೇಕ ಜಮೀನುಗಳಲ್ಲಿ ಮಳೆಯಿಲ್ಲದೆ ಇನ್ನು ಸಹ ಬಿತ್ತನೆ ಮಾಡಿಲ್ಲದಿರುವುದು ಕಾಣಬಹುದಾಗಿದೆ.

ಕೊಳವೆ ಬಾವಿಯ ಆಶ್ರಯ ಇಲ್ಲದೆ. ತನ್ನ ಜಮೀನಿನಲ್ಲಿರುವ ಕೃಷಿ ಹೊಂಡದಲ್ಲಿ ಶೇಖರಣೆಯಾಗಿರುವ ಮಳೆ ನೀರನ್ನು ಹನಿ ನೀರಾವರಿ ಪದ್ದತಿಯಲ್ಲಿ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಸರ್ಕಾರಿ ಯೋಜನೆಗಳನ್ನು ರೈತರು ಯಾವ ರೀತಿ ಬಳಕೆ ಮಾಡಿಕೊಳ್ಳ ಬೇಕು ಎನ್ನುವುದನ್ನು ಮಾಡಿ ತೋರಿಸಿದ್ದಾರೆ.

ADVERTISEMENT

ಬತ್ತದ ಕೃಷಿ ಹೊಂಡ: ವೆಂಕಶ್ವಾಮಯ್ಯನವರ ಜಮೀನಿನಲ್ಲಿರುವ ಕೃಷಿ ಹೊಂಡ ಎಂತಹ ಬರದಲ್ಲಿ ಸಹ ಬತ್ತದೆ ನೀರು ಜಿನುಗುತ್ತಿದ್ದು, ಕೃಷಿ ಹೊಂಡದಲ್ಲಿ ಸದಾ ಕಾಲ ನೀರು ನಿಂತಿರುತ್ತದೆ. ಸುತ್ತ ಮುತ್ತಲಿನ 1000 ಅಡಿ ಕೊರೆದ ಕೊಳವೆ ಬಾವಿಗಳಲ್ಲಿ ನೀರಿಲ್ಲದಿದ್ದರು ಸಹ ಈ ಕೃಷಿ ಹೊಂಡದಲ್ಲಿ ಸದಾ ಕಾಲ ನೀರು ನಿಂತಿರುವುದು ಎಂತಹವರಲ್ಲಿ ಸಹ ಆಶ್ಚರ್ಯ ಮೂಡಿಸುತ್ತಿದೆ.

ವಿಧಾನಸೌಧದಲ್ಲಿ ಸೆಕ್ರೇಟರಿಯೇಟ್‌ನಲ್ಲಿ ಉದ್ಯೋಗ ಮಾಡಿ ಸೇವೆಯಿಂದ ನಿವೃತ್ತಿಯಾದ ನಂತರ ಭೂತಾಯಿಯ ಸೇವೆಗೆ ಮುಂದಾಗಿ 2014-15 ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯ ಮೂಲಕ ಕೃಷಿ ಹೊಂಡವನ್ನು ನಿರ್ಮಿಸಿಕೊಂಡು ವ್ಯವಸಾಯವನ್ನು ಪ್ರಾರಂಭಿಸಿದ ರೈತ ವೆಂಕಟಶ್ವಾಮಯ್ಯ ಇಂದು ಸತತ ಪರಿಶ್ರಮದಿಂದ ಮಾದರಿ ರೈತನಾಗಿ ರೂಪುಗೊಂಡಿದ್ದಾರೆ.

ಬಹುಬೆಳೆ ಪದ್ಧತಿ: ರೈತ ವೆಂಕಟಶ್ವಾಮಯ್ಯ ಕೇವಲ ಒಂದು ಬೆಳೆಯನ್ನು ನಂಬಿಕೊಂಡು ವ್ಯವಸಾಯ ನಡೆಸುತ್ತಿಲ್ಲ. ಬಹು ರೀತಿಯ ಬೆಳೆಗಳನ್ನು ಬಿತ್ತನೆ ಮಾಡುವ ಮೂಲಕ ಒಂದರಲ್ಲಿ ನಷ್ಟವಾದರೆ ಮತ್ತೊಂದರಲ್ಲಿ ಅದನ್ನು ತುಂಬಿಕೊಳ್ಳುವ ಪ್ರಯತ್ನ ನಡೆಸಿದ್ದಾನೆ. ಕೃಷಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಶೇಂಗಾದಲ್ಲಿ ತೊಗರಿ, ಹಲಸಂದೆ, ಅವರೆ, ಹುರಳಿ, ಉದ್ದು ಬಿತ್ತನೆ ಮಾಡಿದ್ದಾರೆ.

ವ್ಯವಸಾಯದಲ್ಲಿ ತಾಂತ್ರಿಕತೆ: ಪ್ರತಿಯೊಬ್ಬ ರೈತರು ತೊಗರಿಯನ್ನು ಬಿತ್ತನೆ ಮಾಡುವುದು ಸಾಮಾನ್ಯ ಸಂಗತಿ. ಆದರೆ ರೈತ ವೆಂಕಟಶ್ವಾಮಯ್ಯ ತೊಗರಿಯನ್ನು ಊರುಕಾಲು ಪದ್ಧತಿಯಲ್ಲಿ 6 ಅಡಿ ಅಂತರದಲ್ಲಿ ಸಾಲು ಮಾಡಿಕೊಂಡು ಪ್ರತಿ ಗಿಡಕ್ಕೆ 3 ಅಡಿ ಅಂತರದಲ್ಲಿ ತೊಗರಿಬೀಜವನ್ನು ನಾಟಿ ಮಾಡಿದ್ದು, ಒಂದು ತಿಂಗಳ ನಂತರ ತೊಗರಿಯ ಕುಡಿಯನ್ನು ಚಿಕುಟಿ ಹಾಕಿದಾಗ ತೊಗರೆ ಗಿಡ ರಂಬೆಗಳನ್ನು ಹೊಡೆದುಕೊಂಡು ಹೆಚ್ಚು ಇಳುವರಿ ಕೊಡುವುದು ಎಂದು ಕೃಷಿ ಅಧಿಕಾರಿಗಳು ನೀಡಿದ ಸಲಹೆಯಂತೆ ಪ್ರಥಮ ಬಾರಿಗೆ ಊರುಗಾಲು ಪದ್ಧತಿಯಲ್ಲಿ ತೊಗರಿ ಬಿತ್ತನೆ ಮಾಡಿರುವುದು ವಿಶೇಷವಾಗಿದೆ.

ತನಗಿರುವ ಸ್ವಲ್ಪ ಜಾಗದಲ್ಲಿ ತರಕಾರಿ, ಸೊಪ್ಪನ್ನು ಸಹ ಬೆಳೆದುಕೊಳ್ಳುವ ಮೂಲಕ ಸ್ವಾವಲಂಭಿ ಬದುಕನ್ನು ಸಾಗಿಸುತ್ತಿದ್ದಾರೆ.ಬಹುತೇಕ ಕಡೆ ಸಾಲಭಾದೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಇಂತಹ ರೈತರಿಗೆ ವೆಂಕಟಶ್ವಾಮಯ್ಯ ಅವರ ಕೃಷಿ ಪದ್ಧತಿ ಮಾದರಿಯಾಗಬೇಕಾಗಿದ್ದು, ಬೆಳಿಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ಜಮೀನಿನಲ್ಲಿರುವ ರೈತ ವೆಂಕಟಶ್ವಾಮಯ್ಯ ಅವರನ್ನು 7760444768 ಸಂಪರ್ಕಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.