ADVERTISEMENT

ಬಹುಸಂಸ್ಕೃತಿ ಒಡೆಯುವ ಹುನ್ನಾರ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 5:23 IST
Last Updated 24 ಏಪ್ರಿಲ್ 2017, 5:23 IST
ಕವಿಗೋಷ್ಠಿಯಲ್ಲಿ ಸಾಹಿತಿಗಳಾದ ಮಲ್ಲಿಕಾ ಬಸವರಾಜು, ಜಿ.ವಿ.ಆನಂದಮೂರ್ತಿ, ಕೆ.ಪಿ.ನಟರಾಜ್‌, ಡಾ.ಶಶಿಧರ್‌, ಡಾ.ರಂಗಸ್ವಾಮಿ, ಎಂ.ಸಿ.ಲಲಿತಾ, ರಂಗಮ್ಮ ಹೊದೇಕಲ್‌, ಸಿ.ಎನ್‌.ಸುಗುಣಾದೇವಿ, ಸಿ.ಎಲ್‌.ಸುನಂದಮ್ಮ ಇದ್ದರು
ಕವಿಗೋಷ್ಠಿಯಲ್ಲಿ ಸಾಹಿತಿಗಳಾದ ಮಲ್ಲಿಕಾ ಬಸವರಾಜು, ಜಿ.ವಿ.ಆನಂದಮೂರ್ತಿ, ಕೆ.ಪಿ.ನಟರಾಜ್‌, ಡಾ.ಶಶಿಧರ್‌, ಡಾ.ರಂಗಸ್ವಾಮಿ, ಎಂ.ಸಿ.ಲಲಿತಾ, ರಂಗಮ್ಮ ಹೊದೇಕಲ್‌, ಸಿ.ಎನ್‌.ಸುಗುಣಾದೇವಿ, ಸಿ.ಎಲ್‌.ಸುನಂದಮ್ಮ ಇದ್ದರು   

ತುಮಕೂರು: ‘ಜಾಗತೀಕರಣ ಹಾಗೂ ಬಲಪಂಥೀಯ ರಾಜಕಾರಣದಿಂದ ಏಕರೂಪ ಆಹಾರ ಪದ್ಧತಿ, ಬೌದ್ಧಿಕ ಹಲ್ಲೆ, ಮಾನವೀಯ ಹಕ್ಕುಗಳ ಮೇಲೆ ನಿರ್ಬಂಧಗಳು ಬಹುಸಂಸ್ಕೃತಿಯನ್ನು ಒಡೆಯುವ ಹುನ್ನಾರವಾಗಿವೆ’ ಎಂದು ಸಾಹಿತಿ ಜಿ.ವಿ.ಆನಂದಮೂರ್ತಿ ಹೇಳಿದರು.

ಕರ್ನಾಟಕ ಲೇಖಕಿಯರ ಸಂಘ, ಹೇಮಾ–ಶಶಿ ಫೌಂಡೇಷನ್‌ ಮತ್ತು ಚಾರಿಟಬಲ್‌ ಟ್ರಸ್ಟ್‌ ಈಚೆಗೆ ಆಯೋಜಿಸಿದ್ದ ಹೇಮಲತಾ ಶಶಿಧರ್‌ ಕಥಾಸ್ಪರ್ಧೆ ಹಾಗೂ ಜಿ.ಶ್ರೀನಿವಾಸಕುಮಾರ್‌ ನೆನಪಿನ ಕವನ ಸ್ಪರ್ಧೆ, ಕವಿಗೋಷ್ಠಿಯಲ್ಲಿ ಮಾತನಾಡಿದರು.

‘ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಆಗುತ್ತಿರುವುದು ತಲ್ಲಣಗೊಳಿಸಿದೆ. ಇಂತಹ ಸಂದರ್ಭದಲ್ಲಿ ಬರಹದ ಮೂಲಕ ನವ ಸಮಾಜ ನಿರ್ಮಿಸುವ ಕನಸುಗಳ ಬೀಜ ಬಿತ್ತಬೇಕಾಗಿದೆ’ ಎಂದರು.

ADVERTISEMENT

ಕವನ ಸ್ಪರ್ಧೆಯ ತೀರ್ಪುಗಾರರಾಗಿದ್ದ ವಿಮರ್ಶಕ ಕೆ.ಪಿ.ನಟರಾಜ್‌ ಮಾತನಾಡಿ, ‘ಸಾಮಾಜಿಕ ಜಾಲತಾಣಗಳಲ್ಲಿ ಕವಿತೆ ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ಲವಲವಿಕೆಯ ಬರಹಗಳು ಪ್ರಕಟವಾಗುತ್ತಿವೆ. ಒಬ್ಬ ಕವಿ ಮಹತ್ವಾಕಾಂಕ್ಷೆಯಿಂದ ಬರೆಯಬೇಕು. ನಂತರ ಅದರಿಂದ ಹೊರಬೇಕು. ದಾಖಲಿಸುವ ಹಾಗೂ ವಿಸರ್ಜಿಸುವ ಗುಣ ರೂಢಿಸಿಕೊಂಡು, ವೈಚಾರಿಕ ನೆಲೆಯಲ್ಲಿ ಬರೆಯಬೇಕು’ ಎಂದು ತಿಳಿಸಿದರು.

ಲೇಖಕಿಯರ ಸಂಘದ ಅಧ್ಯಕ್ಷೆ ಸಿ.ಎನ್‌.ಸುಗುಣಾದೇವಿ ಮಾತನಾಡಿ,‘ ಸಂಘದ ವತಿಯಿಂದ ನಡೆಯುವ ಸ್ಪರ್ಧೆ, ಕಮ್ಮಟ ಹಾಗೂ ಉಪನ್ಯಾಸಗಳನ್ನು ಪ್ರತಿಯೊಬ್ಬರೂ ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಕಥಾಸ್ಪರ್ಧೆಯಲ್ಲಿ ಯಾವ ಕಥೆಯೂ ಮೊದಲ ಬಹುಮಾನಕ್ಕೆ ಆಯ್ಕೆಯಾಗಲಿಲ್ಲ. ಜಯಲಕ್ಷ್ಮಿ ಗುಪ್ತಾ ಅವರ ‘ಗುಬ್ಬಚ್ಚಿ ಗೂಡು ಕಟ್ಟಲಿ’ ಕಥೆಗೆ ದ್ವಿತೀಯ, ಗುರುಪ್ರಸಾದ್‌ ಕಂಟಲಗೆರೆ ಅವರ ‘ಬುಡ್ಡಿ ದೀಪ’ ಹಾಗೂ ಶಾರದಾ ಅವರ ‘ಅವಳ ಅಂತರಂಗ’ ಕಥೆಗೆ ತೃತೀಯ ಬಹುಮಾನ ಲಭಿಸಿತು.

ಕವನ ಸ್ಪರ್ಧೆಯಲ್ಲಿ ಕೆ.ಎಂ.ಗೋವಿಂದರಾಜು ಅವರ ‘ನಾ ಮಾಯೆಯಲ್ಲಿ ಭವದೊಳು’ ಕವನ ಮೊದಲ ಬಹುಮಾನ ಪಡೆಯಿತು.

ಜಯಲಕ್ಷ್ಮಿ ಗುಪ್ತಾ ಅವರ ‘ಸೂರ್ಯ’ ದ್ವಿತೀಯ ಬಹುಮಾನ, ಜೆ.ಕೆ. ಶೈಲಜಾ ಅವರ ‘ಕವಿತೆ ಕಳೆದು ಹೋಗಿದೆ’ ಕವನ ತೃತೀಯ ಬಹುಮಾನ ಪಡೆದವು.
ಕವಿಗೋಷ್ಠಿಯಲ್ಲಿ ಕವಯತ್ರಿಯರಾದ ರಂಗಮ್ಮ ಹೊದೇಕಲ್‌, ಮಲ್ಲಿಕಾ ಬಸವರಾಜು, ಸಿ.ಎಲ್‌.ಸುನಂದಮ್ಮ ಇದ್ದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಗೀತಾ ವಸಂತ್‌, ಲಲಿತಾ ಮಲ್ಲಪ್ಪ, ಡಾ.ಅರುಂಧತಿ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.