ADVERTISEMENT

ಬಾಣಸಂದ್ರ ಗ್ರಾಮಸ್ಥರಿಂದ ಧರಣಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 5:17 IST
Last Updated 16 ಏಪ್ರಿಲ್ 2017, 5:17 IST

ತುರುವೇಕೆರೆ: ಕೆಎಸ್ಆರ್‌ಟಿಸಿ ಬಸ್ ಚಾಲಕ ಗೋವಿಂದರಾಜು ಎಂಬುವವರು ಆಟೊ ಚಾಲಕ ಮೂರ್ತಿ ಎಂಬುವವರನ್ನು  ಅವಾಚ್ಯವಾಗಿ ನಿಂದಿಸಿದ್ದಾರೆ ಮತ್ತು ಆಟೊದಲ್ಲಿದ್ದ ಅಂಬೇಡ್ಕರ್ ಅವರ ಭಾವಚಿತ್ರವನ್ನು ನಾಶ ಮಾಡಿದ್ದಾರೆ ಎಂದು ಆರೋಪಿಸಿ ತಾಲ್ಲೂಕಿನ ಬಾಣಸಂದ್ರ ಗ್ರಾಮಸ್ಥರು ಮತ್ತು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ದಂಡಿನಶಿವರ ಪೊಲೀಸ್ ಠಾಣೆ ಎದುರು ಶನಿವಾರ ಧರಣಿ ನಡೆಸಿದರು.

ಆಟೊ ಚಾಲಕ ಮೂರ್ತಿ ಮಾತನಾಡಿ, ‘ಶುಕ್ರವಾರ ಸಂಜೆ ಬಾಣಸಂದ್ರದ ಬಸ್ ನಿಲ್ದಾಣದಲ್ಲಿ ಆಟೊ ನಿಲ್ಲಿಸುವಾಗ ಆಕಸ್ಮಿಕವಾಗಿ ಬಸ್ ಒಂದು ಎದುರಾಯಿತು. ಆಗ ಬಸ್ ಚಾಲಕ ಗೋವಿಂದರಾಜು ನನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಜಾತಿ ನಿಂದನೆ ಮಾಡಿ ಹಲ್ಲೆಗೆ ಮುಂದಾದರು. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಕೈಯಿಂದ ಗುದ್ದಿ, ನಾಶ ಮಾಡಿದರು’ ಎಂದು ದೂರಿದರು.

ಮುಖಂಡ ರವೀಂದ್ರ, ‘ದಲಿತರ ಮೇಲೆ ಸವರ್ಣೀಯರಿಂದ ಇಂತಹ ಹಲ್ಲೆ ಮತ್ತು ದೌರ್ಜನ್ಯಗಳು ನಡೆಯುವುದು ತಪ್ಪಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಉಮೇಶ್, ತಾಲ್ಲೂಕು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಜುಂಜಪ್ಪ ಸ್ವಾಮಿ, ಗ್ರಾಮಸ್ಥರಾದ ಗಿರೀಶ್, ಗೋವಿಂದರಾಜ, ಕಿರಣ, ರಾಜು, ಸಚಿನ್, ಸೀನ, ವೆಂಕಟೇಶ, ನವೀನ, ಮಂಜುನಾಥ, ಗಂಗಾಧರ ಇದ್ದರು.  ಬಸ್ ಚಾಲಕ ಗೋವಿಂದರಾಜು ವಿರುದ್ಧ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕರ್ತವ್ಯದಲ್ಲಿದ್ದ  ನನ್ನ ಮೇಲೆ ಮೂರ್ತಿ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಬಸ್ ಚಾಲಕ ಗೋವಿಂದರಾಜು ಪ್ರತಿ ದೂರು ದಾಖಲಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.