ADVERTISEMENT

ಬಿಡದ ಬದನೆ ಕಾಯಿ: ಕಂಗಾಲಾದ ರೈತರು

ಕೊರಟಗೆರೆ: ಮಾರುತಿ ಹೈಟೆಕ್ ನರ್ಸರಿಯಿಂದ ಕಳಪೆ ಸಸಿ ವಿತರಣೆ, ರೈತರಿಗೆ ಇನ್ನೂ ಸಿಗದ ಪರಿಹಾರ

​ಪ್ರಜಾವಾಣಿ ವಾರ್ತೆ
Published 8 ಮೇ 2017, 6:50 IST
Last Updated 8 ಮೇ 2017, 6:50 IST
ಕೊರಟಗೆರೆ: ತಾಲ್ಲೂಕಿನ ಗೌರಗಾನಹಳ್ಳಿಯಲ್ಲಿ  ಬೆಳೆದಿರುವ ಬದನೆ ಗಿಡಗಳು 90 ದಿನಳಾದರೂ ಹೂ, ಕಾಯಿ ಬಿಡದಿರುವುದು ರೈತರನ್ನು ಕಂಗಾಲಾಗಿಸಿದೆ. 
 
ಗ್ರಾಮದ ರೈತರಾದ ಮುದ್ದರಂಗಯ್ಯ, ದಯಾನಂದ ಅವರು ಪಟ್ಟಣದ ಊರ್ಡಿಗೆರೆ ಕ್ರಾಸ್‌ನಲ್ಲಿರುವ ನವ ಮಾರುತಿ ಹೈಟೆಕ್ ನರ್ಸರಿಯಿಂದ ಬದನೆ ಸಸಿಗಳನ್ನು ತಂದು ಬೆಳೆದಿದ್ದರು. ಆದರೆ ಮೂರು ತಿಂಗಳಾದರೂ ಹೂ ಬಿಟ್ಟಿಲ್ಲ. ಕಳಪೆ ಬದನೆ ಸಸಿ ನೀಡಿರುವುದು ಇದಕ್ಕೆ ಕಾರಣ ಎಂದು ರೈತರು ಆರೋಪಿಸಿದ್ದಾರೆ.
 
ಮುದ್ದರಂಗಯ್ಯ ಅವರು ಅರ್ಧ ಎಕರೆ ಜಮೀನಿನಲ್ಲಿ 2 ಸಾವಿರ ಬದನೆ ಗಿಡಗಳನ್ನು ನಾಟಿ ಮಾಡಿದ್ದರು. ರಸಗೊಬ್ಬರ, ಕೀಟನಾಶಕ ಔಷಧಿಗಳು ಸೇರಿದಂತೆ ಕೊಟ್ಟಿಗೆ ಗೊಬ್ಬರ ಹಾಕಿದ್ದರು. ಇದಕ್ಕಾಗಿ ₹30 ಸಾವಿರ ವೆಚ್ಚ ಮಾಡಿದ್ದಾರೆ. ಈಗ ಅವರಿಗೆ ಭವಿಷ್ಯವೇ ಕುಸಿದಂತಾಗಿದೆ. 
 
ದಯಾನಂದ ಅವರು ಒಂದು ಎಕರೆ ಜಮೀನಿನಲ್ಲಿ 4ಸಾವಿರ ಬದನೆ ಸಸಿಗಳನ್ನು ನಾಟಿ ಮಾಡಿದ್ದರು. ₹ 45 ಸಾವಿರ ಖರ್ಚು ಮಾಡಿದ್ದಾರೆ. ಆದರೀಗ ಫಲವೇ ಇಲ್ಲವಾಗಿದೆ.
 
 ‘ಬೆಂಗಳೂರು ಮೂಲದ ಸುವರ್ಣ ಸೀಡ್ಸ್ ಕಂಪೆನಿ ನಾಲ್ಕು ತಿಂಗಳ ಹಿಂದೆ ನಮ್ಮ ರಸಗೊಬ್ಬರದ ಅಂಗಡಿಗೆ ಬಂದು ಉತ್ತಮ ತಳಿ ಎಂದು ಹೇಳಿ ಬದನೆ ಬೀಜ ನೀಡಿದ್ದರು. ಈ ಬೀಜಗಳನ್ನೇ ನರ್ಸರಿಯಲ್ಲಿ ಸಸಿ ಮಾಡಿ  ರೈತರಿಗೆ ನೀಡಿದ್ದೇವೆ. ಈವರೆಗೆ 12,500 ಸಸಿಗಳನ್ನು ನೀಡಲಾಗಿದೆ.
 
ಬೆಳೆದಿರುವ ಯಾವ ರೈತರ ಗಿಡದಲ್ಲೂ ಹೂ ಬಿಟ್ಟಿಲ್ಲ.  ಕಂಪೆನಿಯವರ ಜತೆ ಮಾತನಾಡಿದ್ದೇನೆ. ಕಂಪೆನಿ ಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸುತ್ತಾರೆ ಎಂದು ಹೇಳಿದ್ದಾರೆ’ ಎಂದು ನರ್ಸರಿಯ ಮಾಲೀಕ ತಿಮ್ಮಪ್ಪ  ಪ್ರತಿಕ್ರಿಯಿಸಿದರು.
****
ಕ್ರಮಕೈಗೊಳ್ಳುತ್ತೇವೆ
ನವ ಮಾರುತಿ ಹೈಟೆಕ್ ನರ್ಸರಿಯಿಂದ ಖರೀದಿಸಿದ ಸಸಿಗಳು ಕಳಪೆಯಿಂದ ಕೂಡಿವೆ ಎಂದು ರೈತರು ದೂರಿದ್ದಾರೆ.  ತೋಟಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿಜಯಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.