ADVERTISEMENT

ಮತ್ತೆ ಆಟೊಗಳಿಗೆ ಮೀಟರ್‌ ಕಡ್ಡಾಯ?

ಹದಿನೈದು ದಿನ ಗಡುವು ನೀಡಿದ ಸಂಚಾರಿ ಪೊಲೀಸರು

ಪ್ರಜಾವಾಣಿ ವಿಶೇಷ
Published 23 ಏಪ್ರಿಲ್ 2014, 10:26 IST
Last Updated 23 ಏಪ್ರಿಲ್ 2014, 10:26 IST

ತುಮಕೂರು: ನಗರದಲ್ಲಿ ಆಟೊಗಳು ಮೀಟರ್‌ ಹೊಂದು­ವುದು ಶೀಘ್ರವೇ ಕಡ್ಡಾಯವಾಗಲಿದೆ. ಒಂದು ವರ್ಷದ ಹಿಂದೆ ಆಟೊಗಳಿಗೆ ಮೀಟರ್ ಕಡ್ಡಾಯ ಮಾಡಲಾಗಿತ್ತು. ಮೀಟರ್ ಅಳವಡಿಸಿಕೊಳ್ಳಲು ಗಡುವು ನೀಡ­ಲಾಗಿತ್ತು. ಈಗ ಮತ್ತೊಮ್ಮೆ ಇಂಥ ಚಿಂತನೆ ಆರಂಭವಾಗಿದೆ.

ಪ್ರಯಾಣಿಕರಿಂದ ಹೆಚ್ಚು ಹಣ ವಸೂಲಿ, ಆಟೊ ಚಾಲಕರ ಜತೆ ಘರ್ಷಣೆ, ವಾಗ್ವಾದಗಳಿಗೆ ತೆರೆ ಎಳೆಯುವ ಪ್ರಯತ್ನ ನಡೆದಿದೆ. ಈ ಸಂಬಂಧ ಏ.19ರಂದು ಸಭೆ ನಡೆದಿದ್ದು, 15 ದಿನಗಳಲ್ಲಿ ಪರಿಷ್ಕೃತ ಮೀಟರ್‌ ದರ ಜಾರಿಗೊಳಿಸುವಂತೆ ಪೊಲೀಸ್‌ ಇಲಾಖೆ ಆಟೊ ಚಾಲಕರಿಗೆ ಗಡುವು ವಿಧಿಸಿದೆ.

ಕಾಲಮಿತಿಯಲ್ಲಿ ಮೀಟರ್‌ ದರ ಜಾರಿಗೆ ತರದಿದ್ದಲ್ಲಿ ಅಂಥ ಆಟೊಗಳಿಗೆ ದಂಡ ಹಾಕಲಾಗುವುದು. ಈಗಾಗಲೇ ಮೀಟರ್‌ ಅಳವಡಿಸಿಕೊಂಡಿರುವ ಆಟೊಗಳು ದರ ಪರಿ­ಷ್ಕರಣೆ ಮಾಡಿಸಿಕೊಳ್ಳಬೇಕು. ಜತೆಗೆ ಮೀಟರ್‌ ಹಾಕಿ, ಪ್ರಯಾಣ ದರ ಪಡೆಯಬೇಕು. 2010ರಲ್ಲಿ ಕನಿಷ್ಠ ಮೀಟರ್‌ ದರ ರೂ. 17 (1.8 ಕಿ.ಮೀ.ಗೆ) ಇತ್ತು. ನಂತರ ಆಟೊ ದರ ಏರಿಕೆ ಆಗಿದ್ದರೂ ಮೀಟರ್‌ಗಳಲ್ಲಿ ಪರಿಷ್ಕರಣೆ ಆಗಿಲ್ಲ.

2013 ಡಿ. 20ರಿಂದ ಆಟೊ ದರ ಕನಿಷ್ಠ 2 ಕಿ.ಮೀ.ಗೆ ರೂ. 25 ಇದೆ. ಹೆಚ್ಚುವರಿ ಪ್ರತಿ ಕಿ.ಮೀ.ಗೆ ರೂ. 13 ಪಾವತಿಸಬೇಕಾಗಿದೆ. ಹಾಗೆಯೇ 20 ಕೆ.ಜಿ. ಮೇಲ್ಪಟ್ಟ ಸರಕು ಸಾಗಿಸಲು ಪ್ರತಿ ಕಿ.ಮೀ.ಗೆ ರೂ. 2 ಪಾವತಿಸಬೇಕು. ಆದರೆ ಆಟೊ ಚಾಲಕರ ಸಂಘಟನೆಗಳು ಕನಿಷ್ಠ ಆಟೊ ದರವನ್ನು ರೂ. 30ಕ್ಕೆ ಹೆಚ್ಚಿಸಬೇಕು ಎಂದು ಪಟ್ಟು ಹಿಡಿದಿದ್ದವು. ಆದರೆ ಇದಕ್ಕೆ ಅವಕಾಶ ನೀಡಿರಲಿಲ್ಲ. ಹಾಗಾಗಿ 2013ರಲ್ಲಿ ಜಾರಿಯಾಗಿದ್ದ ದರವೇ ಈಗಲೂ ಇದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

15 ದಿನಗಳಲ್ಲಿ ಆಟೊ ಮೀಟರ್‌ ದರ ಪರಿಷ್ಕರಣೆ ಮಾಡಿಕೊಳ್ಳುವಂತೆ ಆಟೊ ಚಾಲಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಪಶ್ಚಿಮ ಸಂಚಾರಿ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಗಂಗಾಧರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಆಟೊಗಳಿದ್ದು, ಸೀಟು ಲೆಕ್ಕದಲ್ಲಿ ದರ ಪಡೆಯಲಾಗುತ್ತಿದೆ. ಕೆಲವು ಆಟೊಗಳಲ್ಲಿ ಪ್ರಯಾಣಿಕರಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡಲಾಗುತ್ತಿದೆ. ಆಟೊ ಚಾಲಕರ ಕಿರುಕುಳದ ಬಗ್ಗೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಮೀಟರ್‌ ಜಾರಿ ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಮೀಟರ್‌ ಆಧಾರದ ಮೇಲೆ ಪ್ರಯಾಣ ದರ ಪಡೆಯ­ಬೇಕು. ಇಲ್ಲವಾದರೆ ಅಂತಹ ಆಟೊಗಳಿಗೆ ದಂಡ ಹಾಕಲಾಗುವುದು. ಆಟೊ ನೋಂದಣಿ ವೇಳೆ ಮೀಟರ್‌ ಅಳವಡಿಕೆ ಕಡ್ಡಾಯವಾಗಿರುತ್ತದೆ. ಆದರೆ ರಸ್ತೆಗಿಳಿದ ಮೇಲೆ ಮೀಟರ್‌ ಹಾಕಲು ಆಟೊ ಚಾಲಕರು ಮುಂದಾಗುತ್ತಿಲ್ಲ. ಮೀಟರ್‌ ಜಾರಿ ವಿಷಯದಲ್ಲಿ ಆಟೊ ಚಾಲಕರ ಸಂಘಟನೆಗಳು ಕೂಡ ನಿರಾಸಕ್ತಿ ವಹಿಸಿವೆ. ಮೀಟರ್‌ ಹಾಕುವುದನ್ನು ಕಡ್ಡಾಯಗೊಳಿಸಲು ಪೊಲೀಸ್‌ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಲ್ಲಿ ಪ್ರಸ್ತುತ 12,310 ನೋಂದಣಿ ಆಗಿರುವ ಆಟೊಗಳಿವೆ. ನಗರದಲ್ಲಿ ಪ್ರತಿ ವರ್ಷ 200ಕ್ಕೂ ಹೆಚ್ಚು ಆಟೊಗಳು ರಸ್ತೆಗಿಳಿಯುತ್ತಿವೆ. ಮಾರ್ಚ್‌ ಅಂತ್ಯದವರೆಗೆ ಜಿಲ್ಲೆಯಾದ್ಯಂತ 750 ಆಟೊಗಳು ಹೊಸದಾಗಿ ನೋಂದಣಿಯಾಗಿವೆ. ತುಮಕೂರು ತಾಲ್ಲೂಕಿನಲ್ಲಿ 167 ಆಟೊಗಳು ನೋಂದಣಿ ಆಗಿವೆ ಎಂದು ಮಾಹಿತಿ ನೀಡಿದರು.

ತಪ್ಪದ ವಾಗ್ವಾದ
ನಗರದ ಬಹುತೇಕ ಆಟೊಗಳು ಸೀಟು ಲೆಕ್ಕದಲ್ಲಿ ಸಂಚರಿಸುತ್ತಿವೆ. ಯಾವುದಕ್ಕೂ ನಿಖರ ಪ್ರಯಾಣ ದರ ಇಲ್ಲ. ಕೆಲವು ಆಟೊಗಳು ಒಂದು ಸ್ಟಾಪ್‌ಗೆ ರೂ. 5ರಿಂದ ರೂ. 6 ಪಡೆದರೆ, ಮತ್ತೆ ಕೆಲವರು ರೂ. 7ರಿಂದ 8 ಪಡೆಯುತ್ತಾರೆ. ವಾದಕ್ಕೆ ನಿಂತರೆ ಜಗಳಕ್ಕೆ ನಿಲ್ಲುತ್ತಾರೆ. ಅನಿವಾರ್ಯವಾಗಿ ಪ್ರಯಾಣಿಕರು ಆಟೊ ಚಾಲಕರು ಕೇಳಿದಷ್ಟು ಹಣ ನೀಡಿ ಪ್ರಯಾಣಿಸುತ್ತಾರೆ.

ಬಾಡಿಗೆಯಲ್ಲೂ ಸಾಕಷ್ಟು ವ್ಯತ್ಯಾಸಗಳಿವೆ. ಬಟವಾಡಿ­ಯಿಂದ ಬಿ.ಎಚ್‌.ರಸ್ತೆ ಮೂಲಕ ಎಸ್‌ಐಟಿ ಮುಖ್ಯರಸ್ತೆ, ಎಸ್‌.ಎಸ್‌.ಪುರಂ, ರೈಲು ನಿಲ್ದಾಣ, ತರಕಾರಿ ಮಾರುಕಟ್ಟೆಗೆ ಹೋಗಬೇಕಾದರೆ ಕನಿಷ್ಠ ರೂ. 40ರಿಂದ 60 ಪಾವತಿಸಬೇಕು. ಆಟೊ ಅನಿಲದ ಬೆಲೆ ಹೆಚ್ಚಾಗಿದೆ. ಹಾಗಾಗಿ ಬಾಡಿಗೆ ಕೂಡ ಹೆಚ್ಚಾಗಿದೆ ಎಂದು ಆಟೊ ಚಾಲಕರು ಸಮಜಾಯಿಷಿ ನೀಡುತ್ತಾರೆ.

‘ಆಟೊಗಳಲ್ಲಿ ಮೀಟರ್‌ ಹಾಕಿದ್ದನ್ನು ಈವರೆಗೂ ನೋಡಿಲ್ಲ. ಹಾಗಾಗಿ ಅವರು ಕೇಳಿದಷ್ಟು ಹಣದಲ್ಲಿ ಅಲ್ಪಸ್ವಲ್ಪ ಚೌಕಾಸಿ ಮಾಡಿ ಪ್ರಯಾಣಿಸುತ್ತೇವೆ. ಕೆಲವೊಮ್ಮೆ ಮಾಮೂಲಿ ಎಂದು ಆಟೊ ಹತ್ತಿದರೆ, ಇಳಿಯುವಾಗ ಹೆಚ್ಚು ಹಣ ಕೇಳುತ್ತಾರೆ. ಆಗ ಚಾಲಕರೊಂದಿಗೆ ಘರ್ಷಣೆಗೆ ಇಳಿಯಬೇಕಾದ ಸಂದರ್ಭ ಬಂದುಬಿಡುತ್ತದೆ’ ಎಂದು ಹೋಟೆಲ್‌ ವ್ಯಾಪಾರಿ ರುದ್ರೇಶ್‌ ಅಳಲು ತೋಡಿಕೊಂಡರು.

ಆಟೊ ಚಾಲಕರ ಜತೆ ಶನಿವಾರ ಪೊಲೀಸ್‌ ಅಧಿಕಾರಿಗಳು ಸಭೆ ನಡೆಸಿದ್ದು, ಮೀಟರ್‌ ದರ ಜಾರಿಗೊಳಿಸುವಂತೆ ಸೂಚಿಸಿ, ಕಾಲಾವಕಾಶ ನೀಡಿದ್ದಾರೆ. ಆದರೆ ಸಭೆಯಲ್ಲಿ ಆಟೊ ಸಂಘಟನೆಗಳ ನಾಯಕರು ಭಾಗವಹಿಸಿರಲಿಲ್ಲ. ಹಾಗಾಗಿ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಯಲ್ಲಾಪುರ ಆಟೊ ಚಾಲಕರ ಸಂಘದ ಅಪ್ಪಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.